9/11 ಖಾತೆ ಬದಲಾವಣೆಗೆ ಲಂಚ ಸ್ವೀಕಾರ ಆರೋಪ: ಕಾರ್ಯನಿರ್ವಹಣಾಧಿಕಾರಿಗೆ ದೂರು

Update: 2019-08-18 12:50 GMT

ಪುತ್ತೂರು: ಪಂಚಾಯತ್ ವ್ಯಾಪ್ತಿಯಲ್ಲಿ ಸ್ತಿರಾಸ್ರಿಯ 9/11 ಖಾತೆ ಬದಲಾವಣೆಗೆ ಸಂಬಂಧಿಸಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಯೊಬ್ಬರು ಲಂಚ ಪಡೆದುಕೊಂಡಿದ್ದಾರೆ ಎಂದು ಆರೋಪಿಸಿ ವ್ಯಕ್ತಿಯೊಬ್ಬರು ಪುತ್ತೂರು ತಾಪಂ ಕಾರ್ಯನಿರ್ವಹಣಾಧಿಕಾರಿಗೆ ದೂರು ನೀಡಿದ್ದಾರೆ.

ಪುತ್ತೂರು ತಾಲೂಕಿನ ಬೆಳಂದೂರು ಗ್ರಾಮದ ಅಮೈ ನಿವಾಸಿ ಮುನೀರ್ ಎಚ್ ಎಂಬವರು ದೂರು ನೀಡಿದರು.

ಬೆಳಂದೂರು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾದ ನಾರಾಯಣ ಬೆತ್ತೋಡಿ ಎಂಬವ ಕಚೇರಿಗೆ ತನ್ನ ಅಣ್ಣ ಅಬ್ದುಲ್ ಹಮೀದ್‍ರವರ ಸ್ಥಿರಾಸ್ತಿಯ 9/11 ಖಾತೆಗೆ ಸಂಬಂಧಿಸಿ ಮಾತನಾಡಲು ಹೋಗಿದ್ದಾಗ ನೀವು ಈ ಕಚೇರಿಗೆ ಹಲವಾರು ಸರ್ತಿ ಬಂದಿದ್ದೀರಿ. ಆದರೆ ನನಗೆ ಏನೂ ಗಮ್ಮತ್ ಮಾಡಲಿಲ್ಲ ಎಂದು ಹೇಳಿದಾಗ ಅವರ ಮಾತಿನ ಒತ್ತಡಕ್ಕೆ ಒಳಪಟ್ಟು ಯಾವುದೇ ದಾರಿ ಕಾಣದೆ ಲಂಚ ನೀಡಿದ್ದೇನೆ. ನನ್ನಿಂದ ಅವರು ರೂ. 2 ಸಾವಿರ ಲಂಚ ಪಡೆದಿರುತ್ತಾರೆ. ನಮ್ಮ ಊರಿನ ಪಂಚಾಯತ್‍ನಲ್ಲಿ ನಡೆಯುವ ಲಂಚಾವತಾರ ಕೊನೆಗಾಣಿಸಬೇಕು ಮತ್ತು ಸಮಾಜದ ಸ್ವಾಸ್ಥ್ಯಕ್ಕಾಗಿ ನಾನು ಲಂಚ ನೀಡುವ ಸಂದರ್ಭದಲ್ಲಿ ಅಧಿಕಾರಿಯ ಗಮನಕ್ಕೆ ಬಾರದೆ ವೀಡಿಯೋ ಚಿತ್ರೀಕರಣ ಮಾಡಿರುತ್ತೇನೆ. ಪಂಚಾಯತ್‍ನ ಸಿಬ್ಬಂದಿ ಸೌಮ್ಯ ಎಂಬವರು ನನಗೆ ಕರೆ ಮಾಡಿ ನೀವು ಪಿಡಿಒಗೆ ದುಡ್ಡು ಕೊಡಿ ನಿಮ್ಮ ಕೆಲಸ ಆಗುತ್ತದೆ ಎಂದು ನನಗೆ ಲಂಚ ನೀಡಲು ಪ್ರೇರೇಪಿಸಿರುತ್ತಾರೆ. ಆದ್ದರಿಂದ ಪಿಡಿಒ ನಾರಾಯಣ ಬೆತ್ತೋಡಿ ಹಾಗೂ ಸಿಬ್ಬಂದಿ ಸೌಮ್ಯ ಅವರ ವಿರುದ್ದ ಇಲಾಖಾ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ದೂರಿನಲ್ಲಿ ಆಗ್ರಹಿಸಿದ್ದಾರೆ.

ಹಣ ನೀಡುತ್ತಿರುವ ಸಂದರ್ಭದಲ್ಲಿ ವೀಡಿಯೋ ಚಿತ್ರೀಕರಣ ನಡೆಸಿರುವ ಮುನೀರ್ ಅವರು ಅದನ್ನು ದೂರಿನೊಂದಿಗೆ ಕಾರ್ಯನಿರ್ವಹಣಾಧಿಕಾರಿಗಳಿಗೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News