ಸರ್ಕಾರದ ಯೋಜನೆ ಕಟ್ಟ ಕಡೆಯ ವ್ಯಕ್ತಿಗೆ ತಲುಪಬೇಕು: ರಾಧಾಕೃಷ್ಣ ಬೋರ್ಕರ್

Update: 2019-08-18 13:07 GMT

ಪುತ್ತೂರು: ಸರಕಾರದ ಯೋಜನೆಗಳು ಕಟ್ಟಕಡೆಯ ವ್ಯಕ್ತಿಗೆ ತಲುಪಿದಾಗ ಮಾತ್ರ ಯೋಜನೆ ಯಶಸ್ವಿ ಸಾಧ್ಯವಾಗಿದ್ದು, ಈ ನಿಟ್ಟಿನಲ್ಲಿ ಸಂಘಸಂಸ್ಥೆಗಳ ಸಹಕಾರ ಬಹಳವಾಗಿದೆ ಎಂದು ತಾ.ಪಂ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್ ಹೇಳಿದರು. 

ಅವರು ರವಿವಾರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರಾಷ್ಟ್ರೀಯ ಬಾಯಿ ಆರೋಗ್ಯ ನೀತಿಯ ವತಿಯಿಂದ ಎ.ಬಿ.ಶೆಟ್ಟಿ ಸ್ಮಾರಕ ಮಹಾವಿದ್ಯಾಲಯ ದೇರಳಕಟ್ಟೆ, ರೋಟರಿಕ್ಲಬ್ ಪುತ್ತೂರು. ಭಾರತೀಯ ದಂತ ವೈದ್ಯಕೀಯ ಸಂಘ ಪುತ್ತೂರು ಮತ್ತು ಒಕ್ಕಲಿಗ ಗೌಡ ಸೇವಾ ಸಂಘದ ಆಶ್ರಯದಲ್ಲಿ ತೆಂಕಿಲ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ನಡೆದ ಉಚಿತ ದಂತ ಪಂಕ್ತಿ ಜೋಡಣೆ ಶಿಬಿರದ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 

ಆರೋಗ್ಯದ ವಿಚಾರದಲ್ಲಿ ಯಾರೂ ರೋಗದ ನೋವಿನಲ್ಲಿದ್ದಾರೋ ಅವರಿಗೆ ಈ ಯೋಜನೆ ತಲುಪಬೇಕು ಎಂದ ಅವರು ಸಂಘ ಸಂಸ್ಥೆಗಳು ತನ್ನನ್ನು ತಾನು ತೊಡಗಿಸಿಕೊಂಡು ಇಂತಹ ಕಾರ್ಯಕ್ರಮ ಹಾಕಿಕೊಂಡಾಗ ಸರಕಾರದ ಯೋಜನೆ ಯಾರಿಗೆ ತಲುಪಬೇಕೋ ಅವರಿಗೆ ಖಂಡಿತಾ ತಲುಪುತ್ತದೆ. ಆರೋಗ್ಯದ ಕಾಳಜಿ ವಹಿಸಿ ಕೇಂದ್ರ ಸರಕಾರದ ಯೋಜನೆಯಾದ ಅಯುಷ್ಮಾನ್ ಪ್ರಯೋಜನವನ್ನು ಸಾವಿರಾರು ಮಂದಿ ಪಡೆಯುತ್ತಿದ್ದಾರೆ.  ಮುಂದಿನ ದಿನಗಳಲ್ಲಿ ಗ್ರಾಮ ಮಟ್ಟದಲ್ಲೂ ದಂತಪಂಕ್ತಿ ಕಾರ್ಯಕ್ರಮ ಆಯೋಜನೆ ಆಗಬೇಕೆಂದರು. 

ಕಾರ್ಯಕ್ರಮ ಉದ್ಘಾಟಿಸಿದ ತಾಲೂಕು ಆರೋಗ್ಯ ವೈದ್ಯಾಧಿಕಾರಿ ಡಾ. ಅಶೋಕ್ ರೈ ಅವರು ಮಾತನಾಡಿ ಪ್ರಸ್ತುತ ದಿನಗಳಲ್ಲಿ ದಂತ ಪಂಕ್ತಿ ಜೋಡಣೆಯನ್ನು ಮಾಡಬೇಕದರೆ ಖಾಸಗಿಯಲ್ಲಿ ಸುಮಾರು ರೂ. 15ಸಾವಿರ ಖರ್ಚು ತಗಲುವ ಸಾಧ್ಯತೆ ಇದೆ. ಆದರೆ ಇದನ್ನು ಆರ್ಥಿಕವಾಗಿ ಹಿಂದುಳಿದವರಿಗೆ ಅಸಾಧ್ಯದ ಮಾತು. ಇಂತಹ ಸಂದರ್ಭದಲ್ಲಿ ಸರಕಾರದ ಮೂಲಕ ಉಚಿತವಾಗಿ ಈ ದಂತಪಂಕ್ತಿ ಜೋಡಣೆ ಮಾಡಲಾಗುತ್ತಿದೆ. ಇಲ್ಲಿ ಬಡತನರೇಖೆಗಿಂತ ಕೆಳಗಿರುವ ಬಿಪಿಎಲ್ ಕಾರ್ಡ್‍ದಾರರಿಗೆ ಈ ಯೋಜನೆ ಸೌಲಭ್ಯವಿದೆ ಎಂದರು. 
ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ಹೆಚ್.ಡಿ.ಶಿವರಾಮ ಗೌಡ ಅವರು ಮಾತನಾಡಿ ಒಕ್ಕಲಿಗ ಗೌಡ ಸೇವಾ ಸಂಘ ಸಮುದಾಯದವರರಿಗೆ ಮಾತ್ರವಲ್ಲದೆ ಎಲ್ಲಾ ಸಮಾಜದವರನ್ನು ಜೊತೆಗೂಡಿಸಿ ಕಾರ್ಯಕ್ರಮ ಆಯೋಜನೆ ಮಾಡುತ್ತಿದೆ. ಸಮಾಜದ ಒಳಿತಿಗಾಗಿ ಸಂಘದ ಮೂಲಕ ಹತ್ತು ಹಲವು ಕಾರ್ಯಕ್ರಮ ನಡೆಯುತ್ತಿದೆ ಎಂದು ಹೇಳಿದರು. 

ರೋಟರಿ ಕ್ಲಬ್ ಅಧ್ಯಕ್ಷ ಭುಜಂಗ ಆಚಾರ್ಯ ಅವರು ಮಾತನಾಡಿ ಮನುಷ್ಯನಿಗೆ ಅರೋಗ್ಯ ಮತ್ತು ಸೌಂದರ್ಯಕ್ಕೆ ಹಲ್ಲಿನ ಅವಶ್ಯಕತೆ ಇದೆ. ಇಂತಹ ಸಂದರ್ಭದಲ್ಲಿ ಬಡತನದಲ್ಲಿರುವವರಿಗೆ ತಮ್ಮ ಹಲ್ಲುಗಳ ರಕ್ಷಣೆ ಅಥವಾ ಹೋದ ಹಲ್ಲಿನ ಜೋಡಣೆ ಮಾಡಲು ಆರ್ಥಿಕತೆ ಅಡ್ಡಿಯಾದಾಗ ಇಂತಹ ಉಚಿತ ಶಿಬಿರದ ಮೂಲಕ ಹಲ್ಲುಗಳ ಜೋಡಣೆ ಮಾಡಿಸಿ ಕೊಳ್ಳೂವ ಮೂಲಕ ತಮ್ಮ ಅರೋಗ್ಯ ಕಾಪಾಡಿಕೊಳ್ಳಬಹುದು ಎಂದರು. 

ರೋಟರಿ ಕ್ಲಬ್‍ನ ಪ್ರಧಾನ ಕಾರ್ಯದರ್ಶಿ ಮಧು ನರಿಯೂರು, ದೇರಳಕಟ್ಟೆ ಎ.ಬಿ.ಶೆಟ್ಟಿ ಸ್ಮಾರಕ ಮಹಾವಿದ್ಯಾಲಯದ ದಂತ ವಿಭಾಗದ ಮುಖ್ಯಸ್ಥ ಡಾ. ಚೇತನ್ ಹೆಗ್ಡೆ, ಜಿಲ್ಲಾ ನೋಡೆಲ್ ಅಧಿಕಾರಿ ಡಾ.ಲವಿನಾ ಲೊರೊನ್ಹ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸರಕಾರಿ ಆಸ್ಪತ್ರೆಯ ಡಾ.ಜಯದೀಪ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮ ಆಯೋಜಕ ಡಾ. ಜಯದೀಪ್ ಸ್ವಾಗತಿಸಿದರು. ಡಾ. ಜೋಸ್ನ ವಂದಿಸಿದರು. ವಸಂತ ವೀರಮಂಗಲ ಕಾರ್ಯಕ್ರಮ ನಿರೂಪಿಸಿದರು. 
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News