ದೇವೇಗೌಡ ಕುಟುಂಬವನ್ನು ಯಾವುದೇ ಸಿಬಿಐ ತನಿಖೆಗೆ ಒಳಪಡಿಸಿದರೂ ಕುಗ್ಗಿಸಲು ಸಾಧ್ಯವಿಲ್ಲ: ಕುಮಾರಸ್ವಾಮಿ

Update: 2019-08-18 13:34 GMT

ಬೆಳ್ತಂಗಡಿ: ದೇವೇಗೌಡ ಕುಟುಂಬವನ್ನು ಯಾವುದೇ ಸಿಬಿಐ ತನಿಖೆಗೆ ಒಳಪಡಿಸಿದರೂ ಕುಗ್ಗಿಸಲು ಸಾಧ್ಯವಿಲ್ಲ. ಪ್ರಸ್ಥುತ ಪೋನ್ ಕದ್ದಾಲಿಕೆ ಪ್ರಕರಣವನ್ನು ಸಿಬಿಐ ತನಿಖೆ ನಡೆಸುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಪ್ರಕಟಿಸಿದ್ದು, ನಾನು ಯಾವುದೇ ತನಿಖೆಗೆ ಸಿದ್ಧ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದರು.

ರವಿವಾರ ನೆರೆಪೀಡಿತ ಪ್ರದೇಶಕ್ಕೆ ಭೇಟಿ ನೀಡುವ ಉದ್ದೇಶದಿಂದ ಬೆಳ್ತಂಗಡಿಗೆ ಆಗಮಿಸಿದ ಇವರು ಧರ್ಮಸ್ಥಳ ಕ್ಷೇತ್ರಕ್ಕೆ ಆಗಮಿಸಿ ಮಾಧ್ಯಮಗಳ ಜತೆ ಮಾತನಾಡಿದರು.

ಯಡಿಯೂರಪ್ಪ ಹತ್ತು ಜನ್ಮ ಎತ್ತಿ ಬಂದರೂ ನನ್ನನ್ನು ಹಾಗೂ ದೇವೇಗೌಡ ಕುಟುಂಬವನ್ನು ಏನೂ ಮಾಡೋಕೆ ಸಾಧ್ಯವಿಲ್ಲ, ಸಿಬಿಐ ಬದಲಾಗಿ ಟ್ರಂಪ್ ನೇತೃತ್ವದಲ್ಲಿ ತನಿಖೆ ಮಾಡಿದರೂ ನಾನು ಎಲ್ಲಾ ತನಿಖೆಗೆ ಸಿದ್ಧವಾಗಿದ್ದೇನೆ. ಯಾವ ಸರ್ಕಾರಕ್ಕೂ ಮಾಧ್ಯಮಗಳಿಗೂ ನನ್ನ ಇಮೇಜ್ ನಾಶ ಮಾಡೋಕೆ ಸಾಧ್ಯವಿಲ್ಲ. ಮಾಜಿ ಸಿಎಂ ಸಿದ್ದರಾಮಯ್ಯ ಮನವಿ ಮೇರೆಗೆ ಮುಖ್ಯಮಂತ್ರಿ ಯಡಿಯೂರಪ್ಪ ಪೋನ್ ಕದ್ದಾಲಿಕೆ ಪ್ರಕರಣವನ್ನು ಸಿಬಿಐಗೆ ಕೊಡುತ್ತಾರಂತೆ, ಸಿದ್ದರಾಮಯ್ಯರ ಮನವಿಗೆ ಅವರಿಗೆ ಗೌರವಕೊಟ್ಟು ಅಷ್ಟೊಂದು ಶೀಘ್ರವಾಗಿ ಸ್ಫಂದಿಸಿದ ಯಡಿಯೂರಪ್ಪರಿಗೆ ಸಿದ್ದರಾಮಯ್ಯ ಪರವಾಗಿ ಧನ್ಯವಾದ ಸಲ್ಲಿಸುತ್ತಿದ್ದೇನೆ. ಕೇವಲ ನನ್ನ ಅವಧಿಯ ಮಾತ್ರವಲ್ಲ, ಯಡಿಯೂರಪ್ಪ, ಸಿದ್ದರಾಮಯ್ಯ ಅವರ ಅಧಿಕಾರವಧಿಯಲ್ಲಾದ ಕದ್ದಾಲಿಕೆ ಬಗ್ಗೆ ಸಿಬಿಐಗೆ ನೀಡಲಿ, ನಾನು ತನಿಖೆ ಎದುರಿಸಲು ಸರ್ವ ಸನ್ನದ್ದನಾಗಿದ್ದೇನೆ ಎಂದರು.

ಸಿಎಂ ಯಡಿಯೂರಪ್ಪ ಅವರು ಈ ಹಿಂದೆ ಮುಖ್ಯಮತ್ರಿಯಾಗಿದ್ದ ಸಂದರ್ಭ ರಾಜ್ಯದೆಲ್ಲೆಡೆ ನೆರೆ ಪ್ರವಾಹ ಬಂದಿದ್ದು, ಈ ಸಂದರ್ಭ ಕೇಂದ್ರದಲ್ಲಿ ಯುಪಿಎ ಸರ್ಕಾರವಿದ್ದು, ತಕ್ಷಣದಲ್ಲಿ 1ಸಾವಿರ ಕೋಟಿ ರೂ. ನೆರೆ ಪರಿಹಾರ  ಘೋಷಿಸಿದ್ದು, ಇದಕ್ಕೆ ನನ್ನಲ್ಲಿ ದಾಖಲೆಯೂ ಇದೆ. ಆದರೆ ಇಂದು ರಾಜ್ಯದಲ್ಲೂ ಬಿಜೆಪಿ ಸರ್ಕಾರವಿದ್ದು, ಕೇಂದ್ರದಲ್ಲೂ ಎನ್‍ಡಿಎ ಸರ್ಕಾರವಿದೆ. ಆದರೂ ಈವರೆಗೆ ನೆರೆಪರಿಹಾರ ಘೋಷಣೆಯಾಗಿಲ್ಲ. ಮುಖ್ಯಮಂತ್ರಿಗಳು ಈ ಬಗ್ಗೆ ಗಮನ ಹರಿಸಬೇಕಾಗಿದೆ. ಇತ್ತೀಚೆಗೆ ಸಿಎಂ ಯಡಿಯೂರಪ್ಪ ಅವರು ನೆರೆ ಪೀಡಿತ ಪ್ರದೇಶಕ್ಕೆ ಕೇವಲ ಬೇಟಿ ನೀಡಿ ಸಮಗ್ರ ಮಾಹಿತಿ ಪಡೆಯದೆ ಜನರ ಆಕ್ರೋಶ ತಣಿಸಲು ಬರಪರಿಹಾರ ಘೋಷಣೆ ಮಾಡಿದ್ದಾರೆ. ಆದರೆ ವಾಸ್ತವದಲ್ಲಿ ಹಾನಿ ಪ್ರಮಾಣ ಹೆಚ್ಚಿದೆ. ಅದರ ಬಗ್ಗೆ ಸಮಗ್ರವಾದ ಪರಿಶೀಲನೆ ನಡೆಸಿ ನಿಖರವಾಗಿ ಎಷ್ಟು ನಷ್ಟವಾಗಿದೆ ಎಂದು ಅಂದಾಜಿಸಿ ಬಳಿಕವಷ್ಟೇ ಪುನರ್ ರಚನೆಯ ಬಗ್ಗೆ ಮಾತನಾಡಬೇಕಾಗಿದೆ, ಇಂತಹ ಆತುರದ ಘೋಷಣೆ ಮಾಡಿ ಸಂತ್ರಸ್ಥರೊಂದಿಗೆ ಚೆಲ್ಲಾಟವಾಡಬೇಕಡಿ ಎಂದು ಅವರು ಸರಕಾರವನ್ನು ಒತ್ತಾಯಿಸಿದರು.

ಈ ಬಗ್ಗೆ ಸಮಗ್ರವಾಗಿ ಸರ್ಕಾರದ ಗಮನ ಸೆಳೆಯಲ್ಲಿ ನಾನು ನೆರೆಪೀಡಿತ ಪ್ರದೇಶಗಳಿಗೆ ಭೇಟಿ ನೀಡುತ್ತಿದ್ದೇನೆ ಎಂದರು. ಮುಖ್ಯಮಂತ್ರಿ ಯಡಿಯೂರಪ್ಪ ತಾಲೂಕಿನ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ ಸಂದರ್ಭ ಸಂಪೂರ್ಣ ಮನೆ ಕಳೆದುಕೊಂಡವರಿಗೆ ಮನೆ ನಿರ್ಮಿಸಲು 5 ಲಕ್ಷ ಪರಿಹಾರ, ಭಾಗಶಃ ಕಳೆದುಕೊಂಡವರಿಗೆ 1 ಲಕ್ಷ ಪರಿಹಾರ ಎಂದು ಘೋಷಣೆ ಮಾಡಿದ್ದಾರೆ. ಆದರೆ 5 ಲಕ್ಷ ರೂಪಾಯಿಯಲ್ಲಿ ಮನೆ ನಿರ್ಮಿಸಲು ಅಸಾಧ್ಯವಾಗಿದ್ದು ಒಂದು ವ್ಯವಸ್ಥಿತವಾದ ಮನೆ ನಿರ್ಮಿಸಲು ಕನಿಷ್ಠ 10ರಿಂದ 12 ಲಕ್ಷ ಪರಿಹಾರದ ಅಗತ್ಯವಿದೆ ಈ ಬಗ್ಗೆ ಪುರ್ ಪರಿಶೀಲನೆ ನಡೆಸುವಂತೆ ಅವರು ಸರಕಾರವನ್ನು ಒತ್ತಾಯಿಸಿದರು. ಮಾಜಿ ಸಚಿವ ಸಾ.ರಾ. ಮಹೇಶ್, ವಿಧಾನ ಪರಿಷತ್ ಸದಸ್ಯ ಬೋಜೇಗೌಡ, ಜೆಡಿಎಸ್ ಜಿಲ್ಲಾ ಉಪಾಧ್ಯಕ್ಷ ಎಂ.ಬಿ.ಸದಾಶಿವ, ಜಿಲ್ಲಾ ಉಪಾಧ್ಯಕ್ಷ ಜಗನ್ನಾಥ ಗೌಡ ಅಡ್ಕಾಡಿ, ಜಿಲ್ಲಾ ಯುವ ಜನತಾದಳ ಅಧ್ಯಕ್ಷ ಅಕ್ಷಿತ್ ಸುವರ್ಣ, ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ಸಿಂಧೂ ದೇವಿ, ಹಿಂದುಳಿದ ವರ್ಗಗಳ ಅಧ್ಯಕ್ಷ ಶ್ರೀನಿವಾಸ ಗೌಡ ಪಟ್ರಮೆ ಉಪಸ್ಥಿತರಿದ್ದರು.

ಬೆಳ್ತಂಗಡಿಯ ನೆರೆಪೀಡಿತ ಪ್ರದೇಶಗಳಿಗೆ ಭೇಟಿ ನಿಡುವ ಮುನ್ನ ಮಾಜಿ ಸಿಎಂ ಕುಮಾರಸ್ವಾಮಿ ಅವರು ಶ್ರೀಕ್ಷೇತ್ರಕ್ಕೆ ಭೇಟಿ ನೀಡಿ ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದು ನೆರೆಪೀಡಿತ ಜನರಿಗೆ ದೇವರು ದೈರ್ಯ ತುಂಬುವಂತೆ ಪ್ರಾರ್ಥಿಸಿ ವಿಶೇಷ ಪೂಜೆ ಸಲ್ಲಿಸಿದರು. ನಂತರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆಯವರನ್ನು ಭೇಟಿಯಾಗಿ ಆಶೀರ್ವಾದ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News