ಪಾಕಿಸ್ತಾನದ ಜೊತೆಗೆ ಮಾತುಕತೆ ಏನಿದ್ದರೂ ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಸೀಮಿತ: ರಾಜನಾಥ ಸಿಂಗ್

Update: 2019-08-18 14:01 GMT

ಕಲ್ಕಾ (ಹರ್ಯಾಣ), ಆ.18: ಪಾಕಿಸ್ತಾನದ ಜೊತೆ ಯಾವುದೇ ಚರ್ಚೆ ನಡೆದರೂ ಅದು ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಮಾತ್ರ ಸೀಮಿತವಾಗಿರಲಿದೆ ಮತ್ತು ಅದು ಭಯೋತ್ಪಾದನೆಗೆ ಉತ್ತೇಜನವನ್ನು ನಿಲ್ಲಿಸಿದರೆ ಮಾತ್ರ ಅದರೊಂದಿಗೆ ಮಾತುಕತೆಗಳು ನಡೆಯುತ್ತವೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರು ರವಿವಾರ ಇಲ್ಲಿ ಹೇಳಿದರು.

ಇಲ್ಲಿ ಬಿಜೆಪಿಯ ‘ಜನ ಆಶೀರ್ವಾದ್’ ರ್ಯಾಲಿಯಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದ ಅವರು,ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಹಿಂದೆಗೆದುಕೊಂಡಿರುವುದು ಪಾಕಿಸ್ತಾನವನ್ನು ದುರ್ಬಲಗೊಳಿಸಿದೆ ಮತ್ತು ಅದೀಗ ತನ್ನ ರಕ್ಷಣೆಗಾಗಿ ನೆರವು ಕೋರಿ ಅಂತರರಾಷ್ಟ್ರೀಯ ಸಮುದಾಯದ ಬಾಗಿಲು ಬಡಿಯುತ್ತಿದೆ ಎಂದರು.

“ನಾವೇನು ಅಪರಾಧವನ್ನು ಮಾಡಿದ್ದೇವೆ? ನಮ್ಮನ್ನೇಕೆ ಬೆದರಿಸಲಾಗುತ್ತಿದೆ? ಆದರೆ ವಿಶ್ವದ ಅತ್ಯಂತ ಶಕ್ತಿಶಾಲಿ ದೇಶವಾಗಿರುವ ಅಮೆರಿಕ ಪಾಕಿಸ್ತಾನವನ್ನು ತಿರಸ್ಕರಿಸಿದೆ ಮತ್ತು ಮರಳಿ ಭಾರತದೊಂದಿಗೆ ಮಾತುಕತೆಗಳನ್ನು ಆರಂಭಿಸುವಂತೆ ಅದಕ್ಕೆ ಸೂಚಿಸಿದೆ” ಎಂದರು.

ಪಾಕಿಸ್ತಾನವು ಭಯೋತ್ಪಾದನೆಯ ಮೂಲಕ ನಮ್ಮ ದೇಶವನ್ನು ಒಡೆಯಲು ಬಯಸಿತ್ತು. ಆದರೆ 56 ಇಂಚು ಎದೆಯ ಪ್ರಧಾನಿ ನರೇಂದ್ರ ಮೋದಿ ಅವರು ನಿರ್ಧಾರಗಳನ್ನು ಹೇಗೆ ತೆಗೆದುಕೊಳ್ಳಬೇಕು ಎನ್ನುವುದನ್ನು ದೇಶಕ್ಕೆ ತೋರಿಸಿದ್ದಾರೆ. ಪುಲ್ವಾಮಾ ದಾಳಿಯ ಬೆನ್ನಿಗೇ ಭಾರತೀಯ ವಾಯುಪಡೆಯು ಬಾಲಕೋಟ್ ವಾಯುದಾಳಿಗಳನ್ನು ನಡೆಸಿತ್ತು ಎಂದ ಸಿಂಗ್,ಬಾಲಕೋಟ್ ದಾಳಿಯನ್ನು ಪಾಕ್ ಪ್ರಧಾನಿ ಇಮ್ರಾನ್ ಖಾನ್ ನಿರಾಕರಿಸುತ್ತಲೇ ಬಂದಿದ್ದರು. ಆದರೆ ಭಾರತವು ಇನ್ನೂ ದೊಡ್ಡ ದಾಳಿಯನ್ನು ನಡೆಸಲು ಯೋಜಿಸುತ್ತಿದೆ ಎಂದು ಇತ್ತೀಚಿಗೆ ಹೇಳುವ ಮೂಲಕ ಬಾಲಕೋಟ್ ವಾಯುದಾಳಿ ನಡೆದಿದ್ದನ್ನು ಒಪ್ಪಿಕೊಂಡಿದ್ದಾರೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News