ಮನೆಯಲ್ಲಿ ಎ.ಕೆ. 47 ಪತ್ತೆ: ಶಾಸಕ ಅನಂತ್ ಕುಮಾರ್ ಪರಾರಿ !

Update: 2019-08-18 14:06 GMT

ಪಾಟ್ನಾ, ಆ. 18: ಪಾಟ್ನಾ ಪೊಲೀಸರು ಯುಎಪಿಎ (ಕಾನೂನು ಬಾಹಿರ ಚಟುವಟಿಕೆ ತಡೆ ಕಾಯ್ದೆ) ಅಡಿಯಲ್ಲಿ ಬಂಧಿಸುವ ಸಾಧ್ಯತೆ ಇದ್ದುದರಿಂದ ಶಾಸಕ ಅನಂತ್ ಕುಮಾರ್ ಸಿಂಗ್ ಶನಿವಾರ ಪರಾರಿಯಾಗಿದ್ದಾರೆ.

 ಯುಎಪಿಎಗೆ ಕೇಂದ್ರ ಸರಕಾರ ಇತ್ತೀಚೆಗೆ ತಿದ್ದುಪಡಿ ತಂದಿತ್ತು. ಈ ತಿದ್ದುಪಡಿಯಲ್ಲಿ ಓರ್ವನನ್ನು ಭಯೋತ್ಪಾದಕ ಎಂದು ಹೆಸರಿಸುವ ಅಧಿಕಾರವನ್ನು ಅಧಿಕಾರಿಗಳಿಗೆ ನೀಡಲಾಗಿದೆ.

  ನಗರ ಪೊಲೀಸ್ ಹಾಗೂ ವಿಶೇಷ ಕಾರ್ಯಪಡೆ (ಎಸ್‌ಟಿಎಫ್)ಯ ಜಂಟಿ ತಂಡ ಸಿಂಗ್ ಅವರನ್ನು ಬಂಧಿಸಲು ಮಾಲ್ ರಸ್ತೆಯಲ್ಲಿರುವ ಅವರ ಅಧಿಕೃತ ನಿವಾಸಕ್ಕೆ ಆಗಮಿತು. ಆದರೆ, ಸಿಂಗ್ ಅಲ್ಲಿರಲಿಲ್ಲ. ದಾಳಿ ನಡೆಸುವ ಸಂದರ್ಭ ಸಿಂಗ್ ವಿರುದ್ಧದ ಪ್ರಕರಣದ ತನಿಖೆಯ ನೇತೃತ್ವ ವಹಿಸಿದ್ದ ಎಸ್‌ಎಸ್‌ಪಿ ಬಾರ್ಹ್‌ ಲಿಪಿ ಸಿಂಗ್ ಕೂಡ ಇದ್ದರು.

 ದೊಡ್ಡ ಸಂಖ್ಯೆಯ ಪೊಲೀಸ್ ಸಿಬ್ಬಂದಿ ಪ್ರತಿ ಕೊಠಡಿ ಪ್ರವೇಶಿಸಿ ತನಿಖೆ ನಡೆಸಿದುದರಿಂದ ಮನೆ ಅಕ್ಷರಶಃ ದಂಡು ಪ್ರದೇಶದಂತಾಯಿತು. ಆದರೆ, ಸಿಂಗ್ ಪತ್ತೆಯಾಗಲಿಲ್ಲ. ಪೊಲೀಸರು ಸಿಂಗ್‌ನ ಸಹವರ್ತಿ ಚೋಟಾ ಸಿಂಗ್ ಅನ್ನು ಬಂಧಿಸಿದರು ಹಾಗೂ ಖಡ್ಗವೊಂದರನ್ನು ವಶಪಡಿಸಿಕೊಂಡರು.

ಬಾರ್ಹ್‌ದಲ್ಲಿರುವ ಸಿಂಗ್ ನಿವಾಸದಿಂದ ಎ.ಕೆ. 47, ಗ್ರೆನೇಡ್ ಸಹಿತ ಶಸ್ತಾಸ್ತ್ರ ಹಾಗೂ ಸ್ಫೋಟಕ ಪತ್ತೆಯಾದ ದಿನದ ಬಳಿಕ ಶನಿವಾರ ಅವರ ವಿರುದ್ಧ ಯುಎಪಿಎ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News