ಪೆಹ್ಲೂ ಖಾನ್ ಹತ್ಯೆ ಪ್ರಕರಣದ ಆರೋಪಿಗಳ ಖುಲಾಸೆ: ಬಿಜೆಪಿ ಸರಕಾರದ ಬಗ್ಗೆ ತನಿಖೆ

Update: 2019-08-18 15:28 GMT

ಹೊಸದಿಲ್ಲಿ, ಆ. 18: ಪೆಹ್ಲೂ ಖಾನ್‌ನ ಗುಂಪಿನಿಂದ ಥಳಿಸಿ ಹತ್ಯೆ ಪ್ರಕರಣದ ತನಿಖೆ ನಡೆಸಿದ ಹಿಂದಿನ ಬಿಜೆಪಿ ಸರಕಾರದ ಬಗ್ಗೆ ತನಿಖೆ ನಡೆಸಬೇಕು ಎಂದು ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಹೇಳಿದ್ದಾರೆ.

 ಪೆಹ್ಲುಖಾನ್‌ನಂತಹ ಪ್ರಕರಣಗಳ ನ್ಯಾಯಾಲಯ ವಿಚಾರಣೆಯ ಬಗ್ಗೆ ರಾಜಸ್ಥಾನ ಸರಕಾರ ನಿಗಾ ಇರಿಸಲಿದೆ ಎಂದು ಗೆಹ್ಲೋಟ್ ಹೇಳಿದ್ದಾರೆ.

ಪೆಹ್ಲು ಖಾನ್ ಪ್ರಕರಣದಲ್ಲಿ ಆರೋಪಿಗಳನ್ನು ಹಿಂದಿನ ಸರಕಾರ ಉದ್ದೇಶ ಪೂರ್ವಕವಾಗಿ ರಕ್ಷಿಸಿದೆ. ಪ್ರಸ್ತುತ ಈ ಅಮಾನವೀಯ ಕೃತ್ಯವನ್ನು ಪ್ರತ್ಯೇಕವಾಗಿ ತನಿಖೆ ನಡೆಸಬೇಕು. ಇಂತಹ ಪ್ರಕರಣಗಳ ತನಿಖೆ ನಡೆಸಲು ನಿಗಾ ಘಟಕಗಳನ್ನು ರೂಪಿಸಲಾಗುವುದು ಎಂದು ಅವರು ಹೇಳಿದರು.

ಪೆಹ್ಲು ಖಾನ್ ಪ್ರಕರಣದ ಕುರಿತು ಚರ್ಚಿಸಲಾಗಿದೆ. ಈ ಹಿಂದಿನ ಸರಕಾರ ನಿರ್ಲಕ್ಷವನ್ನು ಕಲ್ಪಿಸಲು ಸಾಧ್ಯವಿಲ್ಲ. ಆದುದರಿಂದ ‘ಸಂಶಯದ ಲಾಭ’ದ ಹಿನ್ನೆಲೆಯಲ್ಲಿ ನ್ಯಾಯಾಲಯ ಆರೋಪಿಗಳನ್ನು ಬಿಡುಗಡೆ ಮಾಡಿದೆ ಎಂದು ಅವರು ತಿಳಿಸಿದ್ದಾರೆ.

2017ರಲ್ಲಿ ಪೆಹ್ಲು ಖಾನ್‌ನನ್ನು ಗುಂಪಿನಿಂದ ಥಳಿಸಿ ಹತ್ಯೆಗೈದ ಪ್ರಕರಣದ ಎಲ್ಲ ಆರು ಮಂದಿ ಆರೋಪಿಗಳನ್ನು ರಾಜಸ್ಥಾನ ನ್ಯಾಯಾಲಯ ಬುಧವಾರ ಬಿಡುಗಡೆ ಮಾಡಿತ್ತು.

ಆದರೆ, ಆಲ್ವಾರ್ ಗುಂಪಿನಿಂದ ಥಳಿಸಿ ಹತ್ಯೆ ಪ್ರಕರಣವನ್ನು ಮತ್ತೆ ತನಿಖೆ ನಡೆಸಲು ವಿಶೇಷ ತನಿಖಾ ತಂಡ (ಎಸ್‌ಐಟಿ) ರೂಪಿಸಲಾಗುವುದು ಎಂದು ರಾಜಸ್ಥಾನದ ಕಾಂಗ್ರೆಸ್ ನೇತೃತ್ವದ ಸರಕಾರ ಶುಕ್ರವಾರ ಘೋಷಿಸಿರುವುದು ಪೆಹ್ಲು ಖಾನ್ ಕುಟುಂಬದ ಸದಸ್ಯರಲ್ಲಿ ನಿರೀಕ್ಷೆ ಮೂಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News