ಪ್ರವಾಹದಲ್ಲಿ ಕೊಚ್ಚಿಹೋಗಿದ್ದ ಸೇತುವೆಗಳು ಒಂದೇ ವಾರದಲ್ಲಿ ನಿರ್ಮಾಣ: ಮಾದರಿಯಾದ ಬೆಳ್ತಂಗಡಿ

Update: 2019-08-18 18:41 GMT

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನಲ್ಲಿ ಮಳೆ ಹಾಗೂ ಭೂ ಕುಸಿತದಿಂದಾಗಿ ಅಪಾರ ಹಾನಿ ಸಂಭವಿಸಿ ತತ್ತರಿಸಿ ಹೋಗಿದ್ದ ಬೆಳ್ತಂಗಡಿಯ ಗ್ರಾಮಗಳು ಅತ್ಯಂತ ವೇಗವಾಗಿ ಚೇತರಿಸಿಕೊಳ್ಳುತ್ತಿದೆ. ಅದಕ್ಕೆ ಉದಾಹರಣೆ ಕುಕ್ಕಾವು ಸೇತುವೆ, ಹೊಸಮಠ ಸೇತುವೆ ಹಾಗೂ ಬಾಂಜಾರುಮಲೆಯ ಸ್ಟೀಲ್ ಬ್ರಿಡ್ಜ್. ತಿಂಗಳ ಕಾಲ ಸಂಪರ್ಕವಿಲ್ಲದೆ ಕೊರಗಬೇಕಾಗಿ ಬರಲಿದೆ ಎಂದು ಭಾವಿಸಿದ್ದ ಜನರಿಗೆ ಒಂದೇ ವಾರದಲ್ಲಿ ತಾತ್ಕಾಲಿಕ ಸೇತುವೆಗಳನ್ನು ನಿರ್ಮಿಸಿ ಬೆಳ್ತಂಗಡಿ ಮಾದರಿಯಾಗಿದೆ.

ಕಡಿದು ಹೋಗಿದ್ದ ದಿಡುಪೆಯ ಸೇತುವೆಯನ್ನು  ಹಾಗೂ ಹೊಸಮಠ ಸೇತುವೆಗಳನ್ನು ತಾತ್ಕಾಲಿಕವಾಗಿ ನಿರ್ಮಿಸಿ ವಾಹನ ಸಂಚಾರಕ್ಕೆ ಬಿಡಲಾಗಿದ್ದರೆ ಇಂದು ಬಾಂಜಾರು ಮಲೆಯಲ್ಲಿ ಕೊಚ್ಚಿ ಹೋಗಿದ್ದ ಸೇತುವೆಯ ಬದಲಾಗಿ ಸ್ಟೀಲ್ ಬ್ರಿಡ್ಜ್ ನಿರ್ಮಿಸಿ ಕಾನನದ ನಡುವೆ ಅತಂತ್ರರಾಗಿದ್ದ ಬಾಂಜಾರು ನಿವಾಸಿಗಳಿಗೆ ಹೊಸ ಭರವಸೆಯ ಬೆಳಕನ್ನು ನೀಡಲಾಗಿದೆ. 

ಬಾಂಜಾರು ಮಲೆ ಮಲೆಕುಡಿಯರ ಕಾಲೊನಿಗೆ ಸಂಪರ್ಕ ಕಲ್ಪಿಸುವ ಸೇತುವೆ ಭಾರೀ ಮಳೆಗೆ ಕೊಚ್ಚಿ ಹೋಗಿತ್ತು ಇಲ್ಲಿನ ಸುಮಾರು 40 ಕ್ಕೂ ಹೆಚ್ಚು ಆದಿವಾಸಿ ಕುಟುಂಬಗಳು ಹೊರ ಪ್ರಪಂಚದೊಂದಿಗೆ ಸಂಪರ್ಕವನ್ನೇ ಕಳೆದುಕೊಂಡಿದ್ದರು ಕಳೆದ ಒಂದುವಾರದಿಂದ ಈ ಜನರು ಆಹಾರಕ್ಕೂ ಪರದಾಡುವಂತಾಗಿತ್ತು. ತಾಲೂಕು ಆಡಳಿತವೇ ಇವರಿಗೆ ಆಹಾರವನ್ನು ಪೂರೈಸಿತ್ತು. ಇದೀಗ ಒಂದೇ ವಾರದಲ್ಲಿ ಬಾಂಜಾರು ಮಲೆಗೆ ವಾಕಿಂಗ್ ಸ್ಟೀಲ್ ಬ್ರಿಡ್ಜ್ ನಿರ್ಮಿಸಿ ಅವರಿಗೆ ಹೊರಪ್ರಪಂಚದೊಂದಿಗೆ ಸಂಪರ್ಕ ಸಾಧಿಸುವಂತಾಗಿದೆ. 

ಕಳೆದ ವಾರ ಸಂಭವಿಸಿದ ಪ್ರವಾಹದಿಂದ ನಾವು ಸಂಪರ್ಕ ಕಳೆದುಕೊಂಡು ತತ್ತರಿಸಿ ಹೋಗಿದ್ದೆವು ಮತ್ತೆ ಸಂಪರ್ಕ ಪಡೆಯಲು ಎಷ್ಟು ದಿನ ಕಾಯಬೇಕು ಎಂಬ ಭಯದಲ್ಲಿದ್ದೆವು ಆದರೆ ಇದೀಗ ನಮಗೆ ಕನಿಷ್ಟ ಹೊರಪ್ರಪಂಚದೊಂದಿಗೆ ಸಂಪರ್ಕ ಸಾಧಿಸಲು ಸ್ಟೀಲ್ ಬ್ರಿಡ್ಜ್ ಅನ್ನು ನಿರ್ಮಿಸಿಕೊಡಲಾಗಿದೆ ಬೈಕ್ ಹೋಗಲು ಅವಕಾಶವಿದೆಯೆಂದು ಹೇಳಿದ್ದು ನಮಗೆ ಹೊಸ ಜೀವ ಬಂದಂತಾಗಿದೆ. ನಮ್ಮ ಬಹುದಿನಗಳ ಬೇಡಿಕೆಯಾಗಿರುವ ಪರ್ಯಾಯ ರಸ್ತೆಯನ್ನು ಜಿಲ್ಲಾಡಳಿತ ಕೂಡಲೇ ನಿರ್ಮಿಸಿಕೊಡಬೇಕು.

- ನಾಗೇಶ್ ಬಾಂಜಾರು, ಮಲೆ ನಿವಾಸಿ 

ಜಿಲ್ಲಾಡಳಿತ ಹಾಗೂ ಸ್ಥಳೀಯ ಜನರ ಎಲ್ಲ ರೀತಿಯ ಸಹಕಾರದಿಂದಾಗಿ ಪ್ರವಾಹದಿಂದ ಕೊಚ್ಚಿ ಹೋಗಿದ್ದ ಬೆಳ್ತಂಗಡಿ ತಾಲೂಕಿನಲ್ಲಿ ಅತ್ಯಂತ ವೇಗದ ಸ್ಪಂದನೆ ಸಾಧ್ಯವಾಗಿದೆ. ಹೊಸಮಠ ಕುಕ್ಕಾವು ಕೊಲ್ಲಿ ರಸ್ತೆಗಳು ಸಂಪರ್ಕಕ್ಕೆ ಸಾಧ್ಯವಾಗಿದೆ. ಇದೀಗ ಬಾಂಜಾರುಮಲೆಗೂ ವಾಕಿಂಗ್ ಸ್ಟೀಲ್ ಬ್ರಿಡ್ಜ್ ಅನ್ನು ನಿರ್ಮಸಲಾಗಿದೆ. ಕಾನರ್ಪದಿಂದ ಅನಾರಿಗೆ ಸಂಪರ್ಕ ರಸ್ತೆ ನಿರ್ಮಿಸಲಾಗುವುದು. ಈ ಎಲ್ಲ ಕೆಲಸಗಳಿಗೆ ಜಿಲ್ಲಾಧಿಕಾರಿಯವರು ಹಾಗೂ  ಸ್ಥಳೀಯ ಗುತ್ತಿಗೆದಾರರು ಉತ್ತಮ ಸ್ಪಂದನೆ ನೀಡಿದ್ದಾರೆ.
-ಹರೀಶ್ ಪೂಂಜ, ಶಾಸಕರು ಬೆಳ್ತಂಗಡಿ

ಇದೀಗ ನಿರ್ಮಾಣಗೊಂಡಿರುವ ವಾಕಿಂಗ್ ಸ್ಟೀಲ್ ಬ್ರಿಡ್ಜ್ 42 ಅಡಿ ಉದ್ದವಿದ್ದು 4 ಅಡಿ ಅಗಲವಿದೆ. ನದಿಯಿಂದ 15 ಮೀಟರ್ ಎತ್ತರದಲ್ಲಿ ಸೇತುವೆಯಿದೆ. ಪುತ್ತೂರಿನ ಮಾಸ್ಟರ್ ಪ್ಲಾನ್ ಸಂಸ್ಥೆಯವರು ಇದನ್ನು 5 ಲಕ್ಷ ರೂ ವೆಚ್ಚದಲ್ಲಿ ನಿರ್ಮಿಸಿದ್ದಾರೆ. ಲೋಕೋಪಯೋಗಿ ಇಲಾಖೆಯ ಮಂಗಳೂರಿನ ಕಾರ್ಯಪಾಲಕ ಇಂಜಿನಿಯರ್ ಯಶವಂತ್ ಹಾಗೂ ಬೆಳ್ತಂಗಡಿಯ ಕಾರ್ಯಪಾಲಕ ಇಂಜಿನಿಯರ್ ಶಿವಪ್ರಸಾದ್ ಅಜಿಲ ಅವರು ಉಸ್ತುವಾರಿ ವಹಿಸಿಕೊಂಡಿದ್ದರು.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News