ಒಪ್ಪಂದರಹಿತ ಬ್ರೆಕ್ಸಿಟ್‌ನಿಂದ ಇಂಧನ, ಆಹಾರ, ಔಷಧ ಕೊರತೆ

Update: 2019-08-18 16:52 GMT

ಲಂಡನ್, ಆ. 18: ಯಾವುದೇ ಒಪ್ಪಂದವಿಲ್ಲದೆ ಬ್ರಿಟನ್ ಐರೋಪ್ಯ ಒಕ್ಕೂಟದಿಂದ ಬೇರ್ಪಟ್ಟರೆ, ಅದು ಇಂಧನ, ಆಹಾರ ಮತ್ತು ಔಷಧಗಳ ಕೊರತೆಯನ್ನು ಎದುರಿಸುತ್ತದೆ ಎಂದು ‘ಸಂಡೇ ಟೈಮ್ಸ್’ಗೆ ಸೋರಿಕೆಯಾದ ಸರಕಾರಿ ದಾಖಲೆಗಳು ಹೇಳುತ್ತವೆ.

ಒಪ್ಪಂದವಿಲ್ಲ ಬ್ರೆಕ್ಸಿಟ್‌ನಿಂದ ಬಂದರುಗಳು ಸ್ಥಗಿತಗೊಳ್ಳುತ್ತವೆ ಹಾಗೂ ಐರ್‌ಲ್ಯಾಂಡ್ ಜೊತೆಗೆ ಗಟ್ಟಿ ಗಡಿ ಬೇಕಾಗುತ್ತದೆ ಎಂದಿದೆ.

ಇವುಗಳು ಕ್ಯಾಬಿನೆಟ್ ಕಚೇರಿ ಸಿದ್ಧಪಡಿಸಿದ ಒಪ್ಪಂದವಿಲ್ಲದ ಬ್ರೆಕ್ಸಿಟ್‌ನ ಸಂಭಾವ್ಯ ಪರಿಣಾಮಗಳಾಗಿವೆ.

ಪ್ರಧಾನ ಕಾಲುವೆ ಕ್ರಾಸಿಂಗ್‌ಗಳನ್ನು ಬಳಸುವ 85 ಶೇಕಡದಷ್ಟು ಲಾರಿಗಳು ಫ್ರಾನ್ಸ್‌ನ ಸುಂಕ ಪಾವತಿಸಲು ಒಪ್ಪಲಾರವು ಎಂದು ಸರಕಾರಿ ದಾಖಲೆ ಹೇಳುತ್ತದೆ ಎಂದು ಪತ್ರಿಕೆ ವರದಿ ಮಾಡಿದೆ. ಹಾಗಾಗಿ, ಬಂದರುಗಳ ಕಾರ್ಯನಿರ್ವಹಣೆಯಲ್ಲಿ ವ್ಯತ್ಯಯ ಉಂಟಾಗಬಹುದು ಹಾಗೂ ಇದು ಸುಂಕ ಪಾವತಿ ಸುಧಾರಿಸುವವರೆಗೆ, ಅಂದರೆ ಮೂರು ತಿಂಗಳವರೆಗೆ ಮುಂದುವರಿಯಬಹುದು.

ಬ್ರಿಟಿಶ್ ರಾಜ್ಯವಾಗಿರುವ ನಾರ್ದರ್ನ್ ಐರ್‌ಲ್ಯಾಂಡ್ ಮತ್ತು ಐರೋಪ್ಯ ಒಕ್ಕೂಟದ ಸದಸ್ಯ ದೇಶವಾಗಿರುವ ರಿಪಬ್ಲಿಕ್ ಆಫ್ ಐರ್‌ಲ್ಯಾಂಡ್ ನಡುವೆ ಗಟ್ಟಿ ಗಡಿಯೊಂದನ್ನು ನಿರ್ಮಿಸುವ ಅಗತ್ಯವನ್ನೂ ಸೋರಿಕೆಯಾಗಿರುವ ದಾಖಲೆಗಳು ಪ್ರತಿಪಾದಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News