ಪೊಲೀಸ್ ಇಲಾಖೆಯಲ್ಲಿ ಭ್ರಷ್ಟಾಚಾರ: ಕಠಿಣ ಕ್ರಮ ಅಗತ್ಯ

Update: 2019-08-18 17:25 GMT

ಮಾನ್ಯರೇ,

ಸಂಚಾರ ಪೊಲೀಸರು ಕರ್ತವ್ಯಕ್ಕೆ ಹಾಜರಾಗುವ ಮುನ್ನ ತಮ್ಮ ಜೇಬಿನಲ್ಲಿರುವ ಹಣದ ಮೊತ್ತವನ್ನು ಠಾಣೆಯಲ್ಲಿ ನಮೂದಿಸಿ, ಕರ್ತವ್ಯ ಮುಗಿದ ನಂತರ ತಾವು ಆ ದಿನ ವಸೂಲಿ ಮಾಡಿದ ದಂಡದ ಮೊತ್ತವಷ್ಟೇ ಹೆಚ್ಚುವರಿಯಾಗಿ ತಮ್ಮ ಬಳಿ ಇರುವುದನ್ನು ಖಾತರಿಪಡಿಸಬೇಕೆಂದು ರಾಮನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆದೇಶಿಸಿರುವುದು ಸ್ವಾಗತಾರ್ಹ. ಕರ್ತವ್ಯನಿರತ ಸಂಚಾರ ಪೊಲೀಸರು ಸಂಚಾರ ನಿಯಮ ಉಲ್ಲಂಘಿಸುವ ವಾಹನ ಸವಾರರಿಂದ ಅಕ್ರಮವಾಗಿ ಹಣ ವಸೂಲಿ ಮಾಡುತ್ತಾರೆಂಬ ಆರೋಪ ಇದೆ. ಹೀಗಾಗಿ, ಸಂಗ್ರಹವಾದ ದಂಡದ ಮೊತ್ತಕ್ಕೂ ಸಂಚಾರ ಪೊಲೀಸರ ಸ್ವಂತ ಹಣಕ್ಕೂ ಹೋಲಿಕೆಯಾಗಬೇಕು ಎಂಬ ಸದುದ್ದೇಶ ಈ ಕ್ರಮದ ಹಿಂದಿದೆ. ಈ ನಿಯಮ ಹೊಸದೇನೂ ಅಲ್ಲ. ಈಗಾಗಲೇ ಕೆಎಸ್ಸಾರ್ಟಿಸಿ ಚಾಲಕರು ಹಾಗೂ ನಿರ್ವಾಹಕರು ಈ ನಿಯಮ ಅನುಸರಿಸುತ್ತಿದ್ದಾರೆ. ಟಿಕೆಟ್‌ನಿಂದ ಸಂಗ್ರಹವಾದ ಮೊತ್ತಕ್ಕಿಂತ ಹೆಚ್ಚು ಹಣ ನಿರ್ವಾಹಕರ ಬಳಿ ಇದ್ದರೆ, ಅವರನ್ನು ಅಮಾನತು ಮಾಡಲಾಗುತ್ತದೆ. ಕರ್ತವ್ಯಕ್ಕೆ ಹಾಜರಾಗುವ ಮುನ್ನ ನಿರ್ವಾಹಕರು ಮತ್ತು ಚಾಲಕರು ಸ್ವಂತ ಹಣವನ್ನು ಮಾರ್ಗಪತ್ರದಲ್ಲಿ ನಮೂದಿಸಿ, ಅದಕ್ಕೆ ಅಧಿಕಾರಿಗಳ ಸಹಿ ಹಾಕಿಸಿ ದೃಢೀಕರಿಸಿಕೊಂಡು ಕರ್ತವ್ಯ ನಿರ್ವಹಿಸಬೇಕಾಗಿದೆ. ಎಲ್ಲ ಪೊಲೀಸರಿಗೂ ಈ ನಿಯಮ ಅನ್ವಯಿಸಿದರೆ ಪೊಲೀಸ್ ಇಲಾಖೆಯಲ್ಲಿ ಭ್ರಷ್ಟಾಚಾರ ತಡೆಗಟ್ಟಬಹುದಾಗಿದೆ. ಬೆಳಗ್ಗೆ ಕರ್ತವ್ಯಕ್ಕೆ ಹಾಜರಾದಾಗ ಪೊಲೀಸರು ತಮ್ಮ ಬಳಿ ಇರುವ ಹಣದ ಮೊತ್ತವನ್ನು ನೋಂದಾಯಿಸಿ ನಂತರ ಕರ್ತವ್ಯ ನಿರ್ವಹಿಸಬೇಕು. ಹೆಚ್ಚುವರಿ ಹಣ ಇರುವುದನ್ನು ತನಿಖಾಧಿಕಾರಿಗಳು ಪತ್ತೆ ಹಚ್ಚಿದರೆ, ಅಂತಹವರನ್ನು ಅಮಾನತು ಮಾಡುವ ಕಠಿಣ ನಿಯಮವನ್ನು ಜಾರಿಗೆ ತರಬೇಕಾಗಿದೆ.

Writer - ಬಿ.ಆರ್. ಸಂತೋಷ, ಜಾಬೀನ

contributor

Editor - ಬಿ.ಆರ್. ಸಂತೋಷ, ಜಾಬೀನ

contributor

Similar News