ಉತ್ತರಾಖಂಡದಲ್ಲಿ ಭಾರೀ ಮಳೆ, ನೆರೆ: 18 ಸಾವು, 20 ಮನೆ ನಾಶ

Update: 2019-08-18 17:51 GMT

 ಡೆಹ್ರಾಡೂನ್, ಆ. 18: ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಯಲ್ಲಿ ರವಿವಾರ ಟೋನ್ಸ್ ನದಿ ನೆರೆಯಲ್ಲಿ 20 ಮನೆಗಳು ಕೊಚ್ಚಿಕೊಂಡು ಹೋಗಿದ್ದು, ಕನಿಷ್ಠ 18 ಮಂದಿ ನಾಪತ್ತೆಯಾಗಿದ್ದಾರೆ.

ಕಳೆದ ಕೆಲವು ದಿನಗಳಿಂದ ಇಲ್ಲಿ ಭಾರೀ ಮಳೆ ಸುರಿಯುತ್ತಿರುವುದರಿಂದ ಉತ್ತರಕಾಶಿಯಲ್ಲಿ ಟೋನ್ಸ್ ನದಿ ಅಪಾಯದ ಮಟ್ಟವನ್ನು ಮೀರಿ ಹರಿಯುತ್ತಿದೆ. ಇತ್ತೀಚೆಗೆ ನದಿಯ ನೆರೆಯಿಂದ ಸಮೀಪದ ಮಾರುಕಟ್ಟೆ ಜಲಾವೃತವಾಗಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಮುನ್ನೆಚ್ಚರಿಕೆ ನೀಡಿತ್ತು.

ಜನರನ್ನು ರಕ್ಷಿಸುವಂತೆ, ತೆರವು ಕಾರ್ಯಾಚರಣೆ ನಡೆಸುವಂತೆ ಹಾಗೂ ಸಂತ್ರಸ್ತ ಜನರಿಗೆ ಪರಿಹಾರ ಸಾಮಗ್ರಿ ಒದಗಿಸುವಂತೆ ಉತ್ತರಕಾಶಿ ಜಿಲ್ಲಾ ದಂಡಾಧಿಕಾರಿ ಹಾಗೂ ವಿಪತ್ತು ನಿರ್ವಹಣಾ ಕಾರ್ಯದರ್ಶಿಗೆ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ನಿರ್ದೇಶಿಸಿದ್ದಾರೆ.

ಸರಕಾರ ರಕ್ಷಣಾ ಕಾರ್ಯಾಚರಣೆಗೆ ಇಂಡೋ-ಟಿಬೇಟನ್ ಗಡಿ ಪೋಲೀಸ್ (ಐಟಿಬಿಪಿ), ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ಹಾಗೂ ರಾಜ್ಯ ವಿಪತ್ತು ನಿರ್ವಹಣಾ ನಿಧಿ (ಎಸ್‌ಡಿಆರ್‌ಎಫ್) ತಂಡವನ್ನು ಕಳುಹಿಸಿಕೊಟ್ಟಿದೆ.

ಭೂಕುಸಿತದಿಂದ ಈ ವಲಯದ ಗಂಗೋತ್ರಿ ಹೆದ್ದಾರಿಯಲ್ಲಿ ಸಂಚಾರ ಸ್ಥಗಿತಗೊಂಡಿದೆ. ನೆರೆ ಹಾಗೂ ಮೋಡ ಸ್ಫೋಟದಿಂದ ರಾಜ್ಯದ ಹಲವು ಪ್ರದೇಶಗಳಲ್ಲಿ ಜನರು ತೊಂದರೆಗೀಡಾಗಿದ್ದಾರೆ. ಎಲ್ಲ ಜಿಲ್ಲೆಗಳ ಜಿಲ್ಲಾಡಳಿತ ಸೋಮವಾರ ಶಾಲೆಗಳಿಗೆ ರಜೆ ಘೋಷಿಸಿದೆ.

ಉತ್ತರಕಾಶಿ, ಛಮೋಲಿ, ಪಿತೋರ್‌ಢ, ಡೆಹ್ರಾಡೂನ್, ಪೌರಿ ಹಾಗೂ ನೈನಿತಾಲ್ ಜಿಲ್ಲೆಗಳಲ್ಲಿ ಮುಂದಿನ ಮೂರು ದಿನಗಳ ಕಾಲ ವ್ಯಾಪಕ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News