ಜಾರ್ಖಂಡ್: ಆರ್‌ಪಿಎಫ್ ಕಾನ್ಸ್‌ಟೆಬಲ್‌ನಿಂದ ಮೂವರ ಹತ್ಯೆ

Update: 2019-08-18 17:53 GMT

ರಾಂಚಿ, ಆ. 18: ಹಾಲು ನೀಡಲು ನಿರಾಕರಿಸಿದ ಹಿನ್ನೆಲೆಯಲ್ಲಿ ರೈಲ್ವೆ ರಕ್ಷಣಾ ಪಡೆ (ಆರ್‌ಪಿಎಫ್) ಕಾನ್ಸ್‌ಟೆಬಲ್ ರೈಲ್ವೆ ಕೆಲಸಗಾರರ ಕುಟುಂಬವೊಂದರ ಮೂವರು ಸದಸ್ಯರನ್ನು ಗುಂಡು ಹಾರಿಸಿ ಹತ್ಯೆಗೈದ ಘಟನೆ ಜಾರ್ಖಂಡ್‌ನ ರಾಮಗಢ ಜಿಲ್ಲೆಯ ರೈಲ್ವೆ ಕಾಲನಿಯಲ್ಲಿ ಶನಿವಾರ ರಾತ್ರಿ ನಡೆದಿದೆ.

ಆರ್‌ಪಿಎಫ್ ಕಾನ್ಸ್‌ಟೆಬಲ್ ಪವನ್ ಕುಮಾರ್ ಐವರಿಗೆ ಗುಂಡು ಹಾರಿಸಿದ್ದ. ಇದರಿಂದ ಗಂಭೀರ ಗಾಯಗೊಂಡ ಗರ್ಭಿಣಿ ಮಹಿಳೆ ಸಹಿತ ಮೂವರು ಮೃತಪಟ್ಟರು. ಮೃತಪಟ್ಟವರನ್ನು ಅಶೋಕ್ ರಾಮ್, ಅವರ ಪತ್ನಿ ಲೀಲಾ ದೇವಿ ಹಾಗೂ ಅವರ ಗರ್ಭಿಣಿ ಪುತ್ರಿ ಮೀನಾ ದೇವಿ ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅಶೋಕ್ ರಾಮ್ ಅವರ ಇನ್ನೋರ್ವ ಪುತ್ರಿ ಸುಮನಾ ಹಾಗೂ ಪುತ್ರ ಸೋನುವನ್ನು ರಾಂಚಿಯಲ್ಲಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ ಎಂದು ಪತರಾತು ಉಪ ವಿಬಾಗೀಯ ಪೊಲೀಸ್ ಅಧಿಕಾರಿ ಪ್ರಕಾಶ್ ಚಂದ್ರ ಮಹತೊ ತಿಳಿಸಿದ್ದಾರೆ.

ಪವನ್ ಕುಮಾರ್ ದಿನನಿತ್ಯ ಅಶೋಕ್ ರಾಮ್ ನಿವಾಸಕ್ಕೆ ಆಗಮಿಸಿ ಹಾಲು ತೆಗೆದುಕೊಂಡು ಹೋಗುತ್ತಿದ್ದ. ಪಾವತಿ ಬಾಕಿ ಇರುವ ಹಿನ್ನೆಲೆಯಲ್ಲಿ ಅಶೋಕ್ ರಾಮ್ ಶನಿವಾರ ಹಾಲು ನೀಡಲು ನಿರಾಕರಿಸಿದ್ದರು. ಇದರಿಂದ ಆಕ್ರೋಶಿತನಾದ ಪವನ್ ಕುಮಾರ್ ತನ್ನ ಸೇವಾ ರಿವಾಲ್ವರ್‌ನಿಂದ ಗುಂಡು ಹಾರಿಸಿದ್ದ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News