ಮೂಡುಬಿದಿರೆ: ಎಸ್‍ಕೆಎಸ್ಸೆಸ್ಸೆಫ್‍ನಿಂದ ಪೊಲೀಸ್ ಠಾಣಾ ಆವರಣದಲ್ಲಿ ಶ್ರಮದಾನ

Update: 2019-08-18 18:49 GMT

ಮೂಡುಬಿದಿರೆ: ಇಲ್ಲಿನ ವಲಯ ಎಸ್‍ಕೆಎಸ್ಸೆಸ್ಸೆಫ್‍ ವಿಖಾಯ ವತಿಯಿಂದ ಮೂಡುಬಿದಿರೆ ಪೊಲೀಸ್ ಠಾಣೆಯ ಆವರಣದಲ್ಲಿ ರವಿವಾರ ಶ್ರಮದಾನ ನಡೆಯಿತು. 

ತೋಡಾರಿನ ಧರ್ಮಗುರು ಅಬೂಬಕರ್ ಅಝಾರಿಯಾ ಅವರ ದುವಾದೊಂದಿಗೆ ಬೆಳಿಗ್ಗೆ 7.30ಕ್ಕೆ ಶ್ರಮದಾನವನ್ನು ಆರಂಭಿಸಲಾಯಿತು. ಸುಮಾರು ನೂರು ಜನರನ್ನೊಳಗೊಂಡ ತಂಡದ ಸದಸ್ಯರು 3 ಗಂಟೆಗಳ ಕಾಲ ಶ್ರಮದಾನ ನಡೆಸಿದ್ದು, ಪೊಲೀಸ್ ಠಾಣೆಯ ಹೊರ ಆವರಣದಲ್ಲಿ ತುಂಬಿಕೊಂಡಿದ್ದ ತ್ಯಾಜ್ಯಗಳನ್ನು ತೆಗೆದು ಸ್ವಚ್ಛಗೊಳಿಸಿದಲ್ಲದೆ ಹೊಂಡಗಳಾಗಿದ್ದ ಜಾಗಗಳಿಗೆ ಕಲ್ಲು ಹಾಗೂ ಮಣ್ಣುಗಳನ್ನು ತುಂಬಿಸಿ ಸಮತಟ್ಟುಗೊಳಿಸಿದ್ದರು.

ಆವರಣದೊಳಗಡೆ ಮಳೆಗಾಲದಲ್ಲಿ ಬೆಳೆದಿರುವ ಗಿಡಗಂಟಿಗಳನ್ನು ತೆಗೆಯಲಾಯಿತು. ಕೇಸ್‍ನಲ್ಲಿ ವಶಪಡಿಸಿಕೊಂಡು ಅಡ್ಡಾದಿಡ್ಡಿಯಾಗಿ ನಿಲ್ಲಿಸಿದ್ದ ವಾಹನಗಳ ಅಡಿ ಭಾಗದಲ್ಲಿ ತುಂಬಿಕೊಂಡಿದ್ದ ಕಸಗಳನ್ನು ತೆಗೆದಿದ್ದಲ್ಲದೆ ವಾಹನಗಳೆಲ್ಲವನ್ನು ಒಂದೇ ಕಡೆಯಲ್ಲಿ ನೀಟಾಗಿ ನಿಲ್ಲಿಸಲಾಯಿತು. ಹಾಗೂ ಅಲ್ಲಲ್ಲಿ ರಾಶಿ ಹಾಕಲಾಗಿದ್ದ ಕಲ್ಲುಗಳನ್ನು ಒಂದೇ ಕಡೆಯಲ್ಲಿ ರಾಶಿ ಹಾಕಲಾಯಿತು.

ಈ ತಂಡದೊಂದಿಗೆ ಪೊಲೀಸ್ ನಿರೀಕ್ಷಕ ಬಿ.ಎಸ್.ದಿನೇಶ್ ಕುಮಾರ್ ಮತ್ತು ಸಿಬಂದಿಗಳು ಕೂಡಾ ಶ್ರಮದಾನದಲ್ಲಿ ಕೈಜೋಡಿಸಿದರು. ಕಳೆದ ನಾಲ್ಕು ವಾರಗಳಿಂದ ಆರಕ್ಷಕರ ಠಾಣೆಯ ಆವರಣದಲ್ಲಿ ಸ್ವಚ್ಛತಾ ಕಾರ್ಯ ನಡೆಯುತ್ತಿದ್ದು ಮೊದಲ ಎರಡು ವಾರ ಪೊಲೀಸ್ ಸಿಬಂದಿಗಳೇ ಸ್ವಚ್ಛತಾ ಆಂದೋಲನವನ್ನು ಕೈಗೊಂಡಿದ್ದರು. ಕಳೆದ ವಾರ ನೇತಾಜಿ ತಂಡದ ಸದಸ್ಯರು ಠಾಣಾ ಆವರಣದಲ್ಲಿ ಬಿದ್ದಿದ್ದ ಪ್ಲಾಸ್ಟಿಕ್ ಸಹಿತ ಇತರ ತ್ಯಾಜ್ಯಗಳನ್ನು ತೆಗೆದು ಸ್ವಚ್ಛಗೊಳಿಸಿದ್ದರು.

ಎಸ್‍ಕೆಎಸ್ಸೆಸ್ಸೆಫ್‍ನ ಝೋನ್ ಅಧ್ಯಕ್ಷ ಮಾಲಿಕ್ ಅಝೀಜ್, ಉಪಾಧ್ಯಕ್ಷ ಅಬ್ದುಲ್ಲಾ ಕೋಟೆಬಾಗಿಲು, ಕಾರ್ಯದರ್ಶಿ ಫಾರೂಖ್, ವರ್ಕಿಂಗ್ ಕಾರ್ಯದರ್ಶಿ ಅಶ್ರಫ್ ಮರೋಡಿ, ವಿಖಾಯದ ಅಧ್ಯಕ್ಷ ಝುಬೇರ್ ತೋಡಾರು, ಇಲಿಯಾಝ್ ತೋಡಾರು, ನಯಾಝ್ ತೋಡಾರು ಮತ್ತಿತರರು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News