ಲಷ್ಕರಿ ಕೇಶವ ಭಟ್ಟ ಜನ್ಮಶತಮಾನೋತ್ಸವ ಪ್ರಶಸ್ತಿ ಪ್ರದಾನ

Update: 2019-08-18 18:51 GMT

ಪುತ್ತೂರು: ಹಾಡುಗಳು ಭಾವಕ್ಕೆ ಸರಿಯಾಗಿದ್ದರೆ ಮಾತ್ರ ಅದಕ್ಕೆ ನಿಜವಾದ ಅರ್ಥ ಬರುತ್ತದೆ. ಆದರೆ ಕೆಲವೊಂದು ಸಂದರ್ಭದಲ್ಲಿ ಸಾಹಿತ್ಯಕ್ಕೆ ಬೆಲೆಯೇ ಇಲ್ಲದಾಗಿದೆ. ಹಾಡಿನಲ್ಲಿ ರಾಗ ತಾಳಗಳು ಮಾತ್ರ. ಶಬ್ದವನ್ನು ಎಲ್ಲೆಲ್ಲೋ ಬಳಸಲಾಗುವ ಸನ್ನಿವೇಶಗಳಿಂದಾಗಿ ಭಾವದ ಅರ್ಥ ವ್ಯತ್ಯಾಸವಾಗುತ್ತದೆ ಎಂದು ನಿವೃತ್ತ ಶಿಕ್ಷಕರಾದ ಗಮಕ ಕಲಾವಿದ ಹಾರ್ಯಾಡಿ ಚಂದ್ರಶೇಖರ ಕೆದ್ಲಾಯ ಹೇಳಿದರು. 

ಅವರು ರವಿವಾರ ಸಂಜೆ ಪುತ್ತೂರಿನ ಕಲ್ಲಾರೆ ಕೃಷ್ಣ ಆರ್ಕೆಡ್‍ನಲ್ಲಿ ಪೆರ್ಲಂಪಾಡಿಯ ಲೋಕವಿಕಾಸ ಪ್ರತಿಷ್ಠಾನದ ವತಿಯಿಂದ ನಡೆದ  ಎಸ್.ಜಿ ಕೃಷ್ಣ ಪ್ರವರ್ತಿತ ವೇ.ಮೂ. ಲಷ್ಕರಿ ಕೇಶವ ಭಟ್ಟ ಜನ್ಮಶತಮಾನೋತ್ಸವ ಪ್ರಶಸ್ತಿ ಪ್ರದಾನ ಹಾಗೂ ವಿದ್ಯಾರ್ಥಿ ವೇತನ ವಿತರಣಾ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು. 

ಅಭಿನಂದನಾ ಭಾಷಣ ಮಾಡಿದ ಕೈಯೂರು ನಾರಾಯಣ ಭಟ್ ಅವರು ಉತ್ತಮ ಸಂಘಟಕ, ಕವಿ ಹಾಗೂ ಸಾಹಿತಿಯಾಗಿರುವ ಚಂದ್ರಶೇಖರ ಕೆದ್ಲಾಯ ಅವರಿಗೆ ಸಾಹಿತ್ಯ ದೈವದತ್ತವಾಗಿ ಒಲಿದು ಬಂದಿದೆ. ಸರಳಯುತವಾದ ಜೀವನ ನಡೆಸಿರುವ ಅವರು ಎಳೆ ಮರೆಯ ಕಾಯಿಯಂತೆ ಕೆಲಸ ಮಾಡಿದವರು. ಅಂತಹವರ ಮಾರ್ಗದರ್ಶನ ಸಮಾಜಕ್ಕೆ ಆವಶ್ಯಕ ಎಂದರು.

ಅಧ್ಯಕ್ಷತೆ ವಹಿಸಿದ್ದ ಪ್ರತಿಷ್ಠಾನದ ಅಧ್ಯಕ್ಷ ಕೆ.ಜಯರಾಜ ಆಚಾರ್ ಅವರು ಮಾತನಾಡಿ, ಸಮಾಜಕ್ಕೆ ಉತ್ತಮ ಸೇವೆ, ಕೊಡುಗೆಗಳನ್ನು ನೀಡಿದವರನ್ನು ಗುರುತಿಸಿ ಗೌರವಿಸುವುದು ಪ್ರತಿಷ್ಠಾನ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ಕಳೆದ 19 ವರ್ಷಗಳಿಂದ ಪ್ರಶಸ್ತಿ ಪ್ರದಾನ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬರಲಾಗುತ್ತಿದೆ ಎಂದರು. 

ಈ ಸಂದರ್ಭದಲ್ಲಿ 16 ವಿದ್ಯಾರ್ಥಿಗಳಿಗೆ ಒಟ್ಟು ರೂ.32 ಸಾವಿರ ವಿದ್ಯಾರ್ಥಿ ವೇತನ, 7 ಮಂದಿಗೆ ಒಟ್ಟು ರೂ. 40 ಸಾವಿರದ ವೈದ್ಯಕೀಯ ನೆರವು ಹಾಗೂ 3 ಸಂಘ ಸಂಸ್ಥೆಗಳಿಗೆ ಒಟ್ಟು ರೂ.18ಸಾವಿರ ನೆರವು ನೀಡಲಾಯಿತು.

ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷ ಎಸ್.ಜಿ ಕೃಷ್ಣ, ಕೋಶಾಧಿಕಾರಿ ಡಾ.ಎಲ್ ಹರ್ಷಪ್ರಸಾದ್, ನಿರ್ದೇಶಕರಾದ ಎಂ.ಗಣೇಶ್ ಭಟ್, ಎಸ್.ಕುಸುಮಾವತಿ, ಡಾ.ಅಮೃತ ಕೆ.ಪ್ರಸಾದ, ಡಾ.ಶೋಭಾ ಪ್ರಸಾದ, ವಿಷ್ಣು ಭಟ್ ಎಕ್ಕಡ್ಕ ಉಪಸ್ಥಿತರಿದ್ದರು.

ಪ್ರತಿಷ್ಠಾನದ ಉಪಾಧ್ಯಕ್ಷ ಡಾ.ಎಲ್ ಕೃಷ್ಣಪ್ರಸಾದ ಸ್ವಾಗತಿಸಿದರು. ಕಾರ್ಯದರ್ಶಿ ಶಿವರಾಮ ಅಮಳ ವಂದಿಸಿದರು. ನಿರ್ದೇಶಕ ಉಮಾಮಹೇಶ್ವರ ಕಾರ್ಯಕ್ರಮ ನಿರೂಪಿಸಿದರು. 

ಸಭಾ ಕಾರ್ಯಕ್ರಮದ ಬಳಿಕ ಪ್ರಶಸ್ತಿ ಪುರಸ್ಕೃತ ಹಾರ್ಯಾಡಿ ಚಂದ್ರಶೇಖರ ಕೆದ್ಲಾಯ ಅವರಿಂದ ಗಮಕ ಹಾಗೂ ಭಾವಗೀತೆಗಳ ಗಾಯನ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News