ಆ.20-28: ಪುತ್ತೂರು ಕಡಬದಲ್ಲಿ ಸಮಗ್ರ ಕೃಷಿ ಅಭಿಯಾನ

Update: 2019-08-18 18:52 GMT

ಪುತ್ತೂರು: ದ.ಕ. ಜಿಲ್ಲಾ ಪಂಚಾಯತ್ ಹಾಗೂ ಕೃಷಿ ಇಲಾಖೆಯ ಸಹಯೋಗದಲ್ಲಿ ಅವಿಭಜಿತ ಪುತ್ತೂರು ತಾಲೂಕಿನಾದ್ಯಂತ `ಇಲಾಖೆಗಳ ನಡಿಗೆ ರೈತರ ಬಾಗಿಲಿಗೆ' ಸಮಗ್ರ ಕೃಷಿ ಅಭಿಯಾನ ಆ.20 ರಿಂದ 28 ರ ತನಕ ನಡೆಯಲಿದೆ. 

ಆ.20 ರಿಂದ 22 ತನಕ ಪುತ್ತೂರು ಹೋಬಳಿ ವ್ಯಾಪ್ತಿಯಲ್ಲಿ, ಆ.23 ರಿಂದ 25ರ ತನಕ ಉಪ್ಪಿನಂಗಡಿ ಹೋಬಳಿ ವ್ಯಾಪ್ತಿಯಲ್ಲಿ ಹಾಗೂ ಆ. 26 ರಿಂದ 28 ರ ತನಕ ಕಡಬ ಹೋಬಳಿ ವ್ಯಾಪ್ತಿಯಲ್ಲಿ ಅಭಿಯಾನ ನಡೆಯಲಿದೆ. ಮೂರು ಹೋಬಳಿಗಳಲ್ಲಿ ಬರುವ ವಿವಿಧ ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿ ಸಂಚಾರಿ ಮಾಹಿತಿ ಘಟಕ ತೆರಳಿ ಕೃಷಿಕರಲ್ಲಿ ಕೃಷಿ ಅರಿವು ಮೂಡಿಸಲಿದೆ. 

ಆ.20ರಂದು ಪುತ್ತೂರು ನಗರದ ಲಯನ್ಸ್ ಸೇವಾ ಸದನದಲ್ಲಿ ಕೃಷಿ ಅಭಿಯಾನದ ಉದ್ಘಾಟನೆ ಹಾಗೂ ರೈತರೊಂದಿಗೆ ಸಂವಾದ ಕಾರ್ಯಕ್ರಮ ನಡೆಯಲಿದೆ.

ಶಾಸಕ ಸಂಜೀವ ಮಠಂದೂರು ಅವರು ಉದ್ಘಾಟನೆ ಮಾಡಲಿದ್ದಾರೆ. ತಾ.ಪಂ.ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಅವರು  ಕೃಷಿ ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ. 

ಜಿ.ಪಂ. ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಯು.ಪಿ. ಇಬ್ರಾಹಿಂ, ಜಿ.ಪಂ.ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಅನಿತಾ ಹೇಮನಾಥ ಶೆಟ್ಟಿ, ಸದಸ್ಯೆ ಶಯನಾ ಜಯಾನಂದ, ತಾ.ಪಂ.ಸ್ಥಾಯಿ ಸಮಿತಿ ಅಧ್ಯಕ್ಷ ಹರೀಶ್ ಬಿಜತ್ರೆ, ಎಪಿಎಂಸಿ ಅಧ್ಯಕ್ಷ ದಿನೇಶ್ ಮೆದು, ಜಿಲ್ಲಾ ಜಂಟಿ ಕೃಷಿ ನಿರ್ದೇಶಕಿ ಸೀತಾ ಎಂ.ಸಿ., ಪುತ್ತೂರು ಉಪವಿಭಾಗದ ಉಪ ಕೃಷಿ ನಿರ್ದೇಶಕ ಡಾ.ಶಿವಶಂಕರ್ ದಾನೆಗೊಂಡರ್, ತಾ.ಪಂ.ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ, ಕೃಷಿ ವಿಜ್ಞಾನ ಕೇಂದ್ರದ ಡಾ. ಟಿ.ಜೆ. ರಮೇಶ್, ವಿಟ್ಲ ಸಿಪಿಸಿಆರ್‍ಐ ಮುಖ್ಯಸ್ಥ ಡಾ. ಸಿ.ಟಿ. ಜೋಸ್, ಕ್ಯಾಂಪ್ಕೋ ಅಧ್ಯಕ್ಷ ಎಸ್.ಆರ್. ಸತೀಶ್ಚಂದ್ರ ಮತ್ತಿತರರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಕೃಷಿ ಇಲಾಖೆಯ ಪ್ರಕಟಣೆ ತಿಳಿಸಿದೆ.  

ಆ.25 ರಂದು ಬೆಳಿಗ್ಗೆ 10 ಗಂಟೆಗೆ ಉಪ್ಪಿನಂಗಡಿ ಗ್ರಾ.ಪಂ. ಸಭಾಂಗಣದಲ್ಲಿ ರೈತರೊಡನೆ ಸಂವಾದ, ಆ.26 ರಂದು ಬೆಳಿಗ್ಗೆ 10 ಗಂಟೆಗೆ ಕಡಬ ಅಂಬೇಡ್ಕರ್ ಭವನದಲ್ಲಿ ಕಡಬ ಹೋಬಳಿ ವ್ಯಾಪ್ತಿಯ ಅಭಿಯಾನದ ಉದ್ಘಾಟನೆ ಹಾಗೂ ರೈತರೊಂದಿಗೆ ಸಂವಾದ ಕಾರ್ಯಕ್ರಮ ನಡೆಯಲಿದೆ. ಶಾಸಕ ಎಸ್.ಅಂಗಾರ ಉದ್ಘಾಟಿಸುವರು. ತಾ.ಪಂ.ಉಪಾಧ್ಯಕ್ಷೆ ಲಲಿತಾ ಈಶ್ವರ್ ಅವರು ಕಡಬ ಹೋಬಳಿ ಅಭಿಯಾನಕ್ಕೆ ಚಾಲನೆ ನೀಡುವರು. ಕಡಬ ಗ್ರಾ.ಪಂ. ಅಧ್ಯಕ್ಷ ಬಾಬು ಮುಗೇರ ಅಧ್ಯಕ್ಷತೆ ವಹಿಸುವರು ಎಂದು ಇಲಾಖೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ. 

ಕೃಷಿ ವಿಜ್ಞಾನಿಗಳು, ಕೃಷಿ, ತೋಟಗಾರಿಕೆ, ಪಶುಸಂಗೋಪನೆ,ಸಹಕಾರಿ ,ಮೀನುಗಾರಿಕೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಎಪಿಎಂಸಿ, ಶಿಕ್ಷಣ ,ಆರೋಗ್ಯ, ರೇಷ್ಮೆ ಇಲಾಖೆಯ ಅಧಿಕಾರಿಗಳು, ಯಂತ್ರೋಪಕರಣ ಸರಬರಾಜುದಾರರು, ಯಂತ್ರಧಾರೆ, ಸಾವಯವ ಗ್ರಾಮ ಮತ್ತು ಆತ್ಮ ಯೋಜನೆಯ ಅಧಿಕಾರಿಗಳು ರೈತ ಬಾಂಧವರೊಂದಿಗೆ ಸಂವಾದ ಹಾಗೂ ತಾಂತ್ರಿಕ ಮಾಹಿತಿಯಲ್ಲಿ ಭಾಗವಹಿಸುವರು ಎಂದು ಕೃಷಿ ಇಲಾಖೆಯ ಪ್ರಕಟಣೆ ತಿಳಿಸಿದೆ.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News