ಚಂದ್ರಯಾನ-2 ನಾಳೆ ಚಂದ್ರನ ಕಕ್ಷೆ ಪ್ರವೇಶ

Update: 2019-08-19 03:45 GMT

ಹೊಸದಿಲ್ಲಿ, ಆ.19: ಶ್ರೀಹರಿಕೋಟಾದಿಂದ ಜುಲೈ 22ರಂದು ನಭಕ್ಕೆ ಚಿಮ್ಮಿದ ಚಂದ್ರಯಾನ-2 ಮಂಗಳವಾರ (ಆಗಸ್ಟ್ 20) ಮುಂಜಾನೆ 9:30ರ ವೇಳೆಗೆ ಚಂದ್ರನ ಕಕ್ಷೆ ಪ್ರವೇಶಿಸಲಿದೆ. ಸೆಪ್ಟೆಂಬರ್ 7ರಂದು ಚಂದ್ರನ ಮೇಲೆ ಇಳಿಯುವ ಮುನ್ನ ಇದು ಇಸ್ರೋ ಪಾಲಿಗೆ ಮಹತ್ವದ ಮೈಲುಗಲ್ಲು.

"ಚಂದ್ರನ ಕಕ್ಷೆಯನ್ನು ಪ್ರವೇಶಿಸುವ ಮಹತ್ವದ ಹಂತವನ್ನು ಮಂಗಳವಾರ ಬೆಳಗ್ಗೆ 9:30ಕ್ಕೆ ಚಂದ್ರಯಾನ-2 ತಲುಪಲಿದೆ. ಚಂದ್ರನ ಪ್ರಭಾವಳಿಯನ್ನು ಪ್ರವೇಶಿಸಿದ ಬಳಿಕ, ಈ ಬಾಹ್ಯಾಕಾಶ ನೌಕೆಯ ಸಂಚಾಲನಾ ವ್ಯವಸ್ಥೆಯ ವೇಗವನ್ನು ಕಡಿಮೆ ಮಾಡುವ ಮೂಲಕ, ಬಾಹ್ಯಾಕಾಶ ನೌಕೆ ಚಂದ್ರನ ಗುರುತ್ವಾಕರ್ಷಣೆಯನ್ನು ಸೆರೆಹಿಡಿಯುವಂತೆ ಮಾಡಲಾಗುತ್ತದೆ. ಬಳಿಕ ಚಂದ್ರನ ಕಕ್ಷೆಯ 100 ಕಿಲೋಮೀಟರ್ ಸುತ್ತ ಈ ಬಾಹ್ಯಾಕಾಶ ನೌಕೆ ಚಲಿಸುವಂತೆ ಮಾಡಲು ಐದು ಕಾರ್ಯಾಚರಣೆ ಕೈಗೊಳ್ಳಲಾಗುತ್ತದೆ" ಎಂದು ಇಸ್ರೋ ಅಧ್ಯಕ್ಷ ಕೆ.ಶಿವನ್ ವಿವರ ನೀಡಿದ್ದಾರೆ. ಚಂದ್ರಯಾನ-2ನ ಎತ್ತರವನ್ನು ಕಡಿಮೆ ಮಾಡುವ ಸಲುವಾಗಿ ಈ ಐದು ಕಾರ್ಯಾಚರಣೆಗಳು ಆಗಸ್ಟ್ 20, 21, 28, 30 ಹಾಗೂ ಸೆಪ್ಟೆಂಬರ್ 1ರಂದು ನಡೆಯಲಿವೆ. ಈ ಮೂಲಕ ನೌಕೆಯನ್ನು ಚಂದ್ರದ ಮೇಲ್ಮೈಗೆ ನಿಕಟವಾಗುವಂತೆ ಮಾಡಲಾಗುತ್ತದೆ.

ಚಂದ್ರನ ಕಕ್ಷೆಗೆ ನೌಕೆಯನ್ನು ಸೇರಿಸುವ ಬಗ್ಗೆ ವಿವರ ನೀಡಿದ ಇಸ್ರೋ ಮಾಜಿ ಅಧ್ಯಕ್ಷ ಕಿರಣ್ ಕುಮಾರ್, "ಚಂದ್ರ ಸುಮಾರು 65,000 ಕಿಲೋಮೀಟರ್ ಪ್ರಭಾವಳಿ ಹೊಂದಿದೆ. ಅಂದರೆ ಆ ಅಂತರದಿಂದ ಚಂದ್ರನ ಗುರುತ್ವಾಕರ್ಷಣ ಶಕ್ತಿ, ಬಾಹ್ಯವಸ್ತುವನ್ನು ಸೆಳೆಯಬಲ್ಲದು. ಆಗಸ್ಟ್ 20ರಂದು ಚಂದ್ರಯಾನ-2 ಚಂದ್ರನ ಕಕ್ಷೆಗಿಂತ ಕೇವಲ 150 ಕಿಲೋಮೀಟರ್ ದೂರದಲ್ಲಿರುವಾಗ ನೌಕೆಗೆ ಹೊಸ ನಿರ್ದೇಶನ ನೀಡಲಾಗುತ್ತದೆ. ಚಂದ್ರಯಾನ-2 ವೇಗವನ್ನು ತಗ್ಗಿಸಿ, ದಿಕ್ಕನ್ನು ಬದಲಿಸಲಾಗುತ್ತದೆ. ಆ ಮೂಲಕ ಚಂದ್ರನ ಕಕ್ಷೆ ಸೇರಿಸಲಾಗುತ್ತದೆ. ವೇಗ ಹೆಚ್ಚಿದ್ದಲ್ಲಿ, ಅದು ಹಾರುತ್ತಾ ಚಂದ್ರನಿಂದಾಚೆಗೆ ಹೋಗುತ್ತದೆ" ಎಂದು ವಿವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News