ಪಕ್ಷ ಬಿಟ್ಟವರನ್ನು 'ಕಾಗೆ'ಗಳೆಂದು ಕರೆದ ಪವಾರ್

Update: 2019-08-19 03:58 GMT

ಮುಂಬೈ, ಆ.19: ಪಕ್ಷ ಬಿಟ್ಟು, ಬೇರೆ ಪಕ್ಷಗಳಿಗೆ ಸೇರಿದ ಎನ್‌ಸಿಪಿ ಮುಖಂಡರನ್ನು "ಕಾಗೆಗಳು" ಎಂದು ಕರೆದ ಪಕ್ಷದ ಮುಖ್ಯಸ್ಥ ಶರದ್ ಪವಾರ್, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಹೊಸ ಮುಖಗಳನ್ನು ಕಣಕ್ಕಿಳಿಸುವ ಬಗ್ಗೆ ಪಕ್ಷ ಚಿಂತನೆ ನಡೆಸಿದೆ ಎಂದು ಪ್ರಕಟಿಸಿದ್ದಾರೆ.

ಮಹಾರಾಷ್ಟ್ರದ ವಿರೋಧ ಪಕ್ಷಗಳಿಂದ ಅದರಲ್ಲೂ ಪ್ರಮುಖವಾಗಿ ಎನ್‌ಸಿಪಿಯಿಂದ ಹಲವು ಮಂದಿ ಶಾಸಕರು ಹಾಗೂ ಪ್ರಮುಖ ನಾಯಕರು ಕಳೆದ ತಿಂಗಳು ಬಿಜೆಪಿ ಹಾಗೂ ಶಿವಸೇನೆ ಸೇರಿದ್ದಾರೆ.

"ಆ ಕಾಗೆಗಳ ಬಗ್ಗೆ ನಾವು ಚಿಂತಿಸಬೇಕಾದ್ದಿಲ್ಲ; ಬದಲಾಗಿ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷದ ಕಾರ್ಯಕರ್ತರ ಬಗ್ಗೆ ಗಮನ ಹರಿಸೋಣ" ಎಂದು ಪವಾರ್ ಹೇಳಿದ್ದಾರೆ.

ಎನ್‌ಸಿಪಿಯ ಶಿವೇಂದ್ರಸಿಂಗ್ ಬೋಸ್ಲೆ, ಸಂದೀಪ್ ನಾಯಕ್ ಹಾಗೂ ವೈಭವ್ ಪಿಚದ್ ಹೀಗೆ ಮೂವರು ಶಾಸಕರು ಬಿಜೆಪಿ ಸೇರಿದ್ದರು. ಪಕ್ಷದ ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಚಿತ್ರಾ ವಾಘ್ ಕೂಡಾ ಬಿಜೆಪಿ ಸೇರಿದ್ದರು. ಎನ್‌ಸಿಪಿ ಮುಂಬೈ ಘಟಕದ ಅಧ್ಯಕ್ಷ ಸಚಿನ್ ಅಹೀರ್ ಮತ್ತು ಶಾಪುರ ಶಾಸಕ ಪಾಂಡುರಂಗ ಬರೋರ ಶಿವಸೇನೆ ಸೇರಿದ್ದರು.

"ಮುಂಬರುವ ಚುನಾವಣೆಯಲ್ಲಿ ಹೊಸ ಮುಖಗಳನ್ನು ಕಣಕ್ಕಿಳಿಸುವ ಬಗ್ಗೆ ಪಕ್ಷ ಚಿಂತನೆ ನಡೆಸಿದೆ. ಯುವಕರು ಹಾಗೂ ಮಹಿಳೆಯರಿಗೆ ಹೆಚ್ಚಿನ ಅವಕಾಶ ನೀಡಬೇಕು ಎನ್ನುವುದು ನನ್ನ ನಿಲುವು" ಎಂದು ಸ್ಪಷ್ಟಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News