ತಲಾಖ್ ಹೇಳಿದ ಗಂಡನ ವಿರುದ್ಧ ದೂರು ನೀಡಲು ಮುಂದಾದ ಮಹಿಳೆಯ ಜೀವಂತ ದಹನ: ಕುಟುಂಬದ ಆರೋಪ

Update: 2019-08-19 13:11 GMT

ಲಕ್ನೋ, ಆ.19: ಮಹಿಳೆಯೊಬ್ಬರನ್ನು ಪತಿ ಮತ್ತು ಆತನ ಮನೆಯವರು ಬೆಂಕಿ ಹಚ್ಚಿ ಹತ್ಯೆಗೈದಿರುವ ಘಟನೆ ಉತ್ತರ ಪ್ರದೇಶದ ಶ್ರವಾಸ್ತಿ ಜಿಲ್ಲೆಯಲ್ಲಿ ನಡೆದಿದೆ. ತನಗೆ ತಲಾಖ್ ನೀಡಿದ ಪತಿಯ ವಿರುದ್ಧ ಪೊಲೀಸರಿಗೆ ದೂರು ನೀಡಲು ಮುಂದಾದ ಕಾರಣ ಪತಿ ಮತ್ತು ಆತನ ಮನೆಯವರು ಈ ಕೃತ್ಯ ಎಸಗಿದ್ದಾರೆ ಎಂದು ಮಹಿಳೆಯ ಕುಟುಂಬಸ್ಥರು ಆರೋಪಿಸಿದ್ದಾರೆ.

ಮುಂಬೈಯಲ್ಲಿ ಕೆಲಸದಲ್ಲಿರುವ ತನ್ನ ಪುತ್ರಿಯ ಗಂಡ ನಫೀಸ್ ಆಗಸ್ಟ್ 6ರಂದು ಫೋನ್ ಕರೆಯಲ್ಲಿ ತಲಾಖ್ ಹೇಳಿದ್ದ. ಅದೇ ದಿನ ಮಗಳು ಪೊಲೀಸ್ ಠಾಣೆಗೆ ತೆರಳಿದ್ದಳು ಎಂದು ಮಹಿಳೆಯ ತಂದೆ ರಮ್ಝಾನ್ ಅಲಿ ಖಾನ್ ಆರೋಪಿಸಿದ್ದಾರೆ.

“ಪೊಲೀಸರು ಪ್ರಕರಣ ದಾಖಲಿಸಿಕೊಂಡಿಲ್ಲ. ಮುಂಬೈಯಿಂದ ಪತಿ ಬರುವವರೆಗೆ ಕಾಯುವಂತೆ ಆಕೆಯಲ್ಲಿ ತಿಳಿಸಿದ್ದರು” ಎಂದು ಖಾನ್ ಆರೋಪಿಸಿದ್ದಾರೆ. ನಫೀಸ್ ತನ್ನ ಪುತ್ರಿಗೆ ಥಳಿಸುತ್ತಿದ್ದ. ಪೊಲೀಸರು ಕಾನೂನು ಕ್ರಮ ಕೈಗೊಳ್ಳುವ ಬದಲು ರಾಜಿ ಸಂಧಾನಕ್ಕೆ ಮುಂದಾಗಿದ್ದರು ಎಂದವರು ಹೇಳಿದ್ದಾರೆ.

“ತಂದೆಯು ನನ್ನ ತಾಯಿಗೆ ಹೊಡೆದರು. ನನ್ನ ಇಬ್ಬರು ಅತ್ತೆಯರು ಸೀಮೆಎಣ್ಣೆ ಸುರಿದರು. ನಂತರ ನನ್ನ ಅಜ್ಜ-ಅಜ್ಜಿ ಬೆಂಕಿ ಹಚ್ಚಿದರು” ಎಂದು ಮೃತ ಸಯೀದಾರ ಪುತ್ರಿ ಫಾತಿಮಾ ಆರೋಪಿಸಿದ್ದಾರೆ.

ಘಟನೆಗೆ ಸಂಬಂಧಿಸಿ ಪತಿ ನಫೀಸ್ ಮತ್ತು ಆತನ ತಂದೆಯನ್ನು ಬಂಧಿಸಲಾಗಿದ್ದು, ವಿಚಾರಣೆ ನಡೆಯುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News