ಮತ್ತೆ ಮೀಸಲಾತಿ ವಿಚಾರ ಎತ್ತಿದ ಮೋಹನ್ ಭಾಗವತ್

Update: 2019-08-19 14:12 GMT

ಹೊಸದಿಲ್ಲಿ, ಆ.19: ಮೀಸಲಾತಿಯನ್ನು ಬೆಂಬಲಿಸುವವರು ಮತ್ತು ಅದನ್ನು ವಿರೋಧಿಸುವವರ ಮಧ್ಯೆ ಸೌಹಾರ್ದಯುತ ವಾತಾವರಣದಲ್ಲಿ ಚರ್ಚೆ ನಡೆಯಬೇಕು ಎಂದು ಸಂಘ ಪರಿವಾರದ ಮುಖ್ಯಸ್ಥ ಮೋಹನ್ ಭಾಗವತ್ ತಿಳಿಸಿದ್ದಾರೆ. ಈ “ಹಿಂದೆಯೂ ನಾನು ಮೀಸಲಾತಿ ಬಗ್ಗೆ ಮಾತನಾಡಿದ್ದೇನೆ ಮತ್ತು ಆಗ ನನ್ನ ಹೇಳಿಕೆ ಸಾಕಷ್ಟು ಗದ್ದಲಕ್ಕೆ ಸಾಕ್ಷಿಯಾಗಿತ್ತು ಹಾಗೂ ಸಂಪೂರ್ಣ ಚರ್ಚೆ ನೈಜ ವಿಷಯದಿಂದ ದೂರ ಸಾಗಿತ್ತು” ಎಂದು ಭಾಗವತ್ ತಿಳಿಸಿದ್ದಾರೆ. ಮೀಸಲಾತಿ ಪರವಾಗಿ ಮಾತನಾಡುವವರು ಅದರ ವಿರುದ್ಧ ಮಾತನಾಡುವವರ ಹಿತಾಸಕ್ತಿಯನ್ನು ಮನದಲ್ಲಿಟ್ಟು ಮಾತನಾಡಬೇಕು. ಅಂತೆಯೇ ಮೀಸಲಾತಿ ವಿರೋಧಿಗಳೂ ಈ ನಿಯಮವನ್ನು ಪಾಲಿಸಬೇಕು ಎಂದು ಆರೆಸ್ಸೆಸ್ ನಾಯಕ ಅಭಿಪ್ರಾಯಿಸಿದ್ದಾರೆ.

ಮೀಸಲಾತಿ ಬಗೆಗಿನ ಚರ್ಚೆ ಪ್ರತಿಬಾರಿಯೂ ತೀಕ್ಷ್ಣ ಪ್ರತಿಕ್ರಿಯೆ ಮತ್ತು ಕ್ರಮಗಳನ್ನು ಎದುರಿಸಬೇಕಾಗುತ್ತದೆ. ಆದರೆ ಈ ವಿಷಯದಲ್ಲಿ ಭಿನ್ನಾಭಿಪ್ರಾಯವಿರುವವರ ಮಧ್ಯೆ ಸೌಹಾರ್ದತೆಯಿರಬೇಕಾದ ಅಗತ್ಯವಿದೆ ಎಂದು ಅವರು ತಿಳಿಸಿದ್ದಾರೆ. ಇದಕ್ಕೂ ಮೊದಲು ಮೀಸಲಾತಿ ಕುರಿತು ಹೇಳಿಕೆ ನೀಡಿದ್ದ ಭಾಗವತ್, ಮೀಸಲಾತಿ ನೀತಿಯನ್ನು ಮರುಪರಿಶೀಲಿಸಬೇಕೆಂದು ಸಲಹೆ ನೀಡಿದ್ದರು. ಅವರ ಈ ಹೇಳಿಕೆ ಹಲವು ಪಕ್ಷಗಳು ಮತ್ತು ಸಂಘಟನೆಗಳಿಂದ ಟೀಕೆಗೊಳಗಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News