ಅರುಣ್ ಜೇಟ್ಲಿ ಅಧಿಕಾರಾವಧಿಯ ತಪ್ಪುನೀತಿಗಳು ಆರ್ಥಿಕ ಹಿಂಜರಿತಕ್ಕೆ ಕಾರಣ: ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ

Update: 2019-08-19 15:40 GMT

ಪುಣೆ,ಆ.19: ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಹಿಂದೆಗೆದುಕೊಂಡಿರುವುದು ಸರಿಯಾದ ಕ್ರಮವಾಗಿದೆ ಎಂದು ಹೇಳಿರುವ ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ ಅವರು,ಆರ್ಥಿಕತೆಯ ಸ್ಥಿತಿಯು ಕೂಡ ರಾಷ್ಟ್ರೀಯ ಭದ್ರತೆ ಮತ್ತು ರಾಷ್ಟ್ರ ನಿರ್ಮಾಣಕ್ಕೆ ಮುಖ್ಯವಾಗಿರುವವುದರಿಂದ ಅದನ್ನು ಸರಿಪಡಿಸುವ ಅಗತ್ಯವಿದೆ ಎಂದಿದ್ದಾರೆ.

ಹಿಂದಿನ ವಿತ್ತಸಚಿವ ಅರುಣ್ ಜೇಟ್ಲಿಯವರ ಅಧಿಕಾರಾವಧಿಯಲ್ಲಿ ಅಳವಡಿಸಿಕೊಳ್ಳಲಾಗಿದ್ದ ಮತ್ತು ಈಗಲೂ ಜಾರಿಯಲ್ಲಿರುವ,ಅಧಿಕ ತೆರಿಗೆ ಹೇರಿಕೆಯಂತಹ ತಪ್ಪು ನೀತಿಗಳು ಆರ್ಥಿಕ ಹಿಂಜರಿತಕ್ಕೆ ಕೆಲವು ಕಾರಣಗಳಾಗಿವೆ. ಮಾಜಿ ಆರ್‌ಬಿಐ ಗವರ್ನರ್ ರಘುರಾಮ ರಾಜನ್ ಅವರು ಬಡ್ಡಿದರಗಳನ್ನು ಹೆಚ್ಚಿಸಿದ್ದು ಕೂಡ ಆರ್ಥಿಕ ಹಿಂಜರಿತಕ್ಕೆ ಕಾರಣಗಳಲ್ಲೊಂದಾಗಿದೆ ಎಂದು ಸ್ವಾಮಿ ರವಿವಾರ ಇಲ್ಲಿ ಕಾರ್ಯಕ್ರಮವೊಂದರ ನೇಪಥ್ಯದಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ವಿಧಿ 370ರ ರದ್ದತಿ ಮತ್ತು ಆರ್ಥಿಕತೆ ಕುರಿತು ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದ ಸ್ವಾಮಿ,ಆರ್ಥಿಕತೆಯನ್ನು ಸರಿಪಡಿಸುವ ಅಗತ್ಯವಿದೆ. ಆರ್ಥಿಕತೆಗೆ ಕುರಿತು ನನ್ನ ಅಭಿಪ್ರಾಯವನ್ನು ಕೇಳಲಾಗಿರಲಿಲ್ಲ. ವಿಧಿ 370ನ್ನು ರದ್ದು ಮಾಡುವ ಬಗ್ಗೆ ನನ್ನ ಸಲಹೆಯನ್ನು ಕೋರಲಾಗಿತ್ತು ಮತ್ತು ಅದನ್ನು ಮಾಡಿರುವುದು ಸರಿಯಾಗಿದೆ. ಆರ್ಥಿಕತೆಗೆ ಆದ್ಯತೆಯನ್ನು ನೀಡಬೇಕಿದೆ. ವಾಸ್ತವದಲ್ಲಿ ಇವೆರಡೂ ರಾಷ್ಟ್ರ ನಿರ್ಮಾಣ ಮತ್ತು ರಾಷ್ಟ್ರೀಯ ಭದ್ರತೆಗೆ ಮುಖ್ಯವಾಗಿವೆ ಎಂದರು.

ಜೇಟ್ಲಿ ನರೇಂದ್ರ ಮೋದಿ ಸರಕಾರದ ಪ್ರಥಮ ಅಧಿಕಾರಾವಧಿಯಲ್ಲಿ ವಿತ್ತಸಚಿವರಾಗಿದ್ದರು. ಅನಾರೋಗ್ಯದಿಂದಾಗಿ ದಿಲ್ಲಿಯ ಏಮ್ಸ್‌ನ ತೀವ್ರ ನಿಗಾ ಘಟಕದಲ್ಲಿರುವ ಅವರಿಗೆ ಜೀವರಕ್ಷಕ ಯಂತ್ರವನ್ನು ಅಳವಡಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News