ಕಾಶ್ಮೀರ: ಶಾಲೆಗಳು ಪುನಾರಂಭ, ವಿದ್ಯಾರ್ಥಿಗಳ ಹಾಜರಾತಿ ವಿರಳ

Update: 2019-08-19 17:35 GMT

ಶ್ರೀನಗರ, ಆ, 19: ಶ್ರೀನಗರ ಹಾಗೂ ಕಾಶ್ಮೀರದ ಕೆಲವು ಭಾಗಗಳಲ್ಲಿ ಹಲವು ಪ್ರಾಥಮಿಕ ಶಾಲೆಗಳು ಸೋಮವಾರ ಮರು ಆರಂಭವಾಗಿವೆ. ಶಿಕ್ಷಕರು ಕರ್ತವ್ಯಕ್ಕೆ ಮರಳಿದ್ದಾರೆ. ಆದರೆ, ವಿದ್ಯಾರ್ಥಿಗಳ ಹಾಜರಾತಿ ಕಡಿಮೆ ಇತ್ತು. ಕಣಿವೆಯ ಹೆಚ್ಚಿನ ಭಾಗಗಳಲ್ಲಿ ಭದ್ರತಾ ಪಡೆಗಳನ್ನು ನಿಯೋಜಿಸಿರುವುದರಿಂದ ಶ್ರೀನಗರದಲ್ಲಿ 190 ಪ್ರಾಥಮಿಕ ಶಾಲೆಗಳನ್ನು ಮರು ಆರಂಭಿಸಲು ಸರಕಾರ ಅಗತ್ಯ ಕ್ರಮಗಳನ್ನು ತೆಗೆದುಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ, ಕಳೆದ ಎರಡು ದಿನಗಳಿಂದ ಹಿಂಸಾತ್ಮಕ ಪ್ರತಿಭಟನೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಭದ್ರತಾ ಪರಿಸ್ಥಿತಿ ಬಗ್ಗೆ ಪೋಷಕರು ಆತಂಕಗೊಂಡಿರುವುದರಿಂದ ನಗರದಲ್ಲಿರುವ ಖಾಸಗಿ ಶಾಲೆಗಳು ಸೋಮವಾರ ಕೂಡ ಆರಂಭವಾಗಲಿಲ್ಲ. ಬೆಮಿನಾದಲ್ಲಿರುವ ಪೊಲೀಸ್ ಪಬ್ಲಿಕ್ ಸ್ಕೂಲ್ ಹಾಗೂ ಕೆಲವು ಕೇಂದ್ರೀಯ ವಿದ್ಯಾಲಯಗಳಲ್ಲಿ ಮಾತ್ರ ಹೆಚ್ಚಿನ ವಿದ್ಯಾರ್ಥಿಗಳು ಹಾಜರಾಗಿದ್ದರು.

 ‘‘ನಮ್ಮ ಪ್ರದೇಶದಲ್ಲಿ ನಿರ್ಬಂಧ ಹಿಂಪಡೆಯಲಾಗಿದೆ. ಆದರೆ, ಈಗಲೂ ಪರಿಸ್ಥಿತಿ ಶಾಂತವಾಗಿಲ್ಲ. ಅಂಗಡಿ ಹಾಗೂ ಮುಂಗಟ್ಟುಗಳ ಬಾಗಿಲು ತೆರೆದಿಲ್ಲ. ವ್ಯಾಪಾರದ ಪ್ರಮುಖ ಕೇಂದ್ರವಾದ ಲಾಲ್ ಚೌಕ್‌ನಲ್ಲಿ ಮುಳ್ಳು ಬೇಲಿ ಹಾಕಿ ನಿರ್ಬಂಧಿಸಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ ನನ್ನ ಮಕ್ಕಳನ್ನು ನಾನು ಶಾಲೆಗೆ ಕಳುಹಿಸುವುದು ಹೇಗೆ ?’’ ಎಂದು ಶ್ರೀನಗರದ ಇಶ್ಫಾಕ್ ಅಹ್ಮದ್ ಹೇಳಿದ್ದಾರೆ.

‘‘ಶ್ರೀನಗರದಲ್ಲಿ ಯಾವ ಸ್ಥಳಕ್ಕೂ ಬಸ್ ಸಂಚರಿಸುತ್ತಿಲ್ಲ. ಹಲವೆಡೆ ಜನರು ಬಸ್ ಸಂಚಾರ ನಿಲ್ಲಿಸುತ್ತಿದ್ದಾರೆ. ಶಿಕ್ಷಕರಿಗೆ ಯಾರು ಭದ್ರತೆ ನೀಡುತ್ತಾರೆ ?’’ಎಂದು ಗುರುತು ಹೇಳದ ಸರಕಾರಿ ಶಿಕ್ಷಕರೊಬ್ಬರು ಪ್ರಶ್ನಿಸಿದ್ದಾರೆ. ‘‘ಪಟ್ಟಾನ್, ಸಿಂಘಪೋರಾ, ಬಾರಮುಲ್ಲಾ ಹಾಗೂ ಸೋಪೊರೆ ಪಟ್ಟಣಗಳಲ್ಲಿ ನಿರ್ಬಂಧ ಸಡಿಲಿಸಲಾಗಿದೆ. ಉಳಿದ ಜಿಲ್ಲೆಗಳಲ್ಲಿ ಪ್ರಾಥಮಿಕ ಶಾಲೆಗಳು ಪುನಾರಂಭ ಗೊಂಡಿವೆ. ನಾವು ಶಾಲೆಗಳಿಗೆ ಹಾಜರಾದ ವಿದ್ಯಾರ್ಥಿಗಳ ಸಂಖ್ಯೆಯ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದೇವೆ.’’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

10 ದೂರವಾಣಿ ವಿನಿಮಯ ಕೇಂದ್ರ ಮರು ಆರಂಭ

ಶ್ರೀನಗರ ಕಾಶ್ಮೀರ ಕಣಿವೆಯಲ್ಲಿ ಮತ್ತೆ 10 ದೂರವಾಣಿ ವಿನಿಮಯ ಕೇಂದ್ರಗಳು ಕಾರ್ಯಾಚರಣೆ ಆರಂಭಿಸಿವೆ. ಆದರೆ, ಶನಿವಾರ ಕಾರ್ಯಾಚರಣೆ ಆರಂಭಿಸಿದ 17 ಕೇಂದ್ರಗಳಲ್ಲಿ ಒಂದನ್ನು ಮತ್ತೆ ಸ್ಥಗಿತಗೊಳಿಸಲಾಗಿದೆ.

 ತಪ್ಪು ಮಾಹಿತಿ ಹರಡಲು ಸ್ಥಿರ ದೂರವಾಣಿಗಳನ್ನು ಬಳಸಲಾಗುತ್ತಿದೆ ಎಂಬ ವರದಿಯ ಹಿನ್ನೆಲೆಯಲ್ಲಿ 17 ದೂರವಾಣಿ ವಿನಿಮಯ ಕೇಂದ್ರಗಳಲ್ಲಿ ಒಂದು ವಿನಿಮಯ ಕೇಂದ್ರದ ಕಾರ್ಯಾಚರಣೆ ರದ್ದುಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

4 ಸಾವಿರ ಜನರು ವಶದಲ್ಲಿ

ಕಳೆದ ಒಂದು ವಾರಗಳಲ್ಲಿ ಸಾರ್ವಜನಿಕ ಸುರಕ್ಷಾ ಕಾಯ್ಡೆ ಅಡಿಯಲ್ಲಿ ಕನಿಷ್ಠ 4 ಸಾವಿರಕ್ಕೂ ಅಧಿಕ ಜನರನ್ನು ಬಂಧಿಸಲಾಗಿದೆ ಹಾಗೂ ವಶದಲ್ಲಿ ಇರಿಸಲಾಗಿದೆ. ಇಲ್ಲಿನ ಕಾರಾಗೃಹಗಳು ತುಂಬಿ ತುಳುಕುತ್ತಿರುವುದರಿಂದ ಹೆಚ್ಚಿನ ಜನರನ್ನು ಕಾಶ್ಮೀರದ ಹೊರಗಿರುವ ಕಾರಾಗೃಹಗಳಲ್ಲಿ ಇರಿಸಲಾಗಿದೆ ಜಮ್ಮು ಹಾಗೂ ಕಾಶ್ಮೀರದ ದಂಡಾಧಿಕಾರಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News