ಕಾಶ್ಮೀರ ಕುರಿತು ಬ್ರಿಟಿಶ್ ವೈದ್ಯಕೀಯ ಜರ್ನಲ್‌ ಸಂಪಾದಕೀಯ ಖಂಡಿಸಿ ಪತ್ರ ಬರೆದ ಭಾರತೀಯ ವೈದ್ಯಕೀಯ ಅಸೋಸಿಯೇಶನ್

Update: 2019-08-19 17:37 GMT

ಹೊಸದಿಲ್ಲಿ: ಜನಪ್ರಿಯ ವೈದ್ಯಕೀಯ ಜರ್ನಲ್ ‘ಲ್ಯಾನ್ಸೆಟ್’ ಕಾಶ್ಮೀರದ ಜನರ ಸ್ವಾತಂತ್ರ, ಆರೋಗ್ಯ ಹಾಗೂ ಭದ್ರತೆ ಕುರಿತು ಕಳವಳ ವ್ಯಕ್ತಪಡಿಸಿ ಪ್ರಕಟಿಸಿದ ಸಂಪಾದಕೀಯವನ್ನು ಭಾರತೀಯ ವೈದ್ಯಕೀಯ ಅಸೋಸಿಯೇಶನ್ (ಐಎಂಎ) ಕಟುವಾಗಿ ಟೀಕಿಸಿದೆ.

ಅಲ್ಲದೆ, ಭಾರತದ ರಾಜಕೀಯ ವಿಷಯಗಳ ಬಗ್ಗೆ ಪ್ರತಿಕ್ರಿಯಿಸಿ ‘ಲ್ಯಾನ್ಸೆಟ್’ ಸ್ವಾಮ್ಯತೆ ಉಲ್ಲಂಘಿಸಿದೆ ಎಂದಿದೆ. ಜಮ್ಮು ಹಾಗೂ ಕಾಶ್ಮೀರದ ಸ್ವಾಯತ್ತತೆ ರದ್ದುಗೊಳಿಸಿರುವುದನ್ನು ‘ವಿವಾದಾತ್ಮಕ ನಡೆ’ ಎಂದು ಜರ್ನಲ್ ಶನಿವಾರ ಸಂಪಾದಕೀಯದಲ್ಲಿ ಹೇಳಿತ್ತು. ಈ ಪರಿಸ್ಥಿತಿಯಿಂದ ಕಾಶ್ಮೀರಿ ಜನರ ಸ್ವಾತಂತ್ರ್ಯ, ಆರೋಗ್ಯ ಹಾಗೂ ಸುರಕ್ಷೆ ಬಗ್ಗೆ ಗಂಭೀರ ಕಳವಳ ಉಂಟಾಗಿದೆ ಎಂದು ಅದು ಹೇಳಿತ್ತು. ಈ ನಿರ್ಧಾರ ಕಾಶ್ಮೀರಿಗಳಲ್ಲಿ ಸಮೃದ್ಧಿ ತರಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶಪಥ ಮಾಡಿದ್ದಾರೆ. ಆದರೆ, ಮೊದಲು ದಶಕಗಳ ಹಿಂದಿನ ವಿವಾದದ ಗಾಯದಿಂದ ಕಾಶ್ಮೀರಿ ಜನರು ಗುಣಮುಖರಾಗುವ ಅಗತ್ಯ ಇದೆ ಎಂದು ಸಂಪಾದಕೀಯದಲ್ಲಿ ಪ್ರತಿಪಾದಿಸಲಾಗಿತ್ತು.

 ಜರ್ನಲ್‌ನ ಪ್ರಧಾನ ಸಂಪಾದಕ ರಿಚರ್ಡ್ ಹೋರ್ಟನ್ ಅವರ ವಿಳಾಸಕ್ಕೆ ರವಾನಿಸಿದ ಪತ್ರದಲ್ಲಿ ಭಾರತೀಯ ವೈದ್ಯಕೀಯ ಅಸೋಶಿಯೇಶನ್, ‘‘ರಾಜಕೀಯ ವಿಷಯಗಳ ಕುರಿತು ಪ್ರತಿಕ್ರಿಯಿಸುವ ಮೂಲಕ ಪ್ರತಿಷ್ಠಿತ ವೈದ್ಯಕೀಯ ಜರ್ನಲ್ ಲ್ಯಾನ್ಸೆಟ್ ಸ್ವಾಮ್ಯತೆ ಉಲ್ಲಂಘಿಸುವುದು ದುರಾದೃಷ್ಟಕರ. ಇದು ಭಾರತದ ಒಕ್ಕೂಟದ ಆಂತರಿಕ ವಿಷಯದಲ್ಲಿ ಪ್ರವೇಶಿಸುವುದಕ್ಕೆ ಸಮ. ಕಾಶ್ಮೀರದ ಕುರಿತು ಪ್ರತಿಕ್ರಿಯಿಸುವ ಯಾವುದೇ ಅಧಿಕಾರ ಲ್ಯಾನ್ಸೆಟ್‌ಗೆ ಇಲ್ಲ. ಕಾಶ್ಮೀರ ವಿಷಯ ಬ್ರಿಟೀಷ್ ಸಾಮ್ರಾಜ್ಯ ಬಿಟ್ಟು ಹೋದ ಪರಂಪರೆ’’ ಎಂದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News