ಟ್ರಂಪ್ ಜೊತೆ ಮೋದಿ ಫೋನ್ ಮಾತುಕತೆ

Update: 2019-08-19 18:07 GMT

ಹೊಸದಿಲ್ಲಿ,ಆ.19: ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಜೊತೆಗೆ ದೂರವಾಣಿಯಲ್ಲಿ ದ್ವಿಪಕ್ಷೀಯ ಮತ್ತು ಪ್ರಾದೇಶಿಕ ವಿಷಯಗಳ ಕುರಿತು ಚರ್ಚಿಸಿದ್ದಾರೆ. ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರು ಕಾಶ್ಮೀರ ವಿಷಯ ಕುರಿತಂತೆ ಟ್ರಂಪ್‌ಗೆ ತುರ್ತು ಕರೆ ಮಾಡಿದ್ದ ಎರಡು ದಿನಗಳ ಬಳಿಕ ಉಭಯ ನಾಯಕರ ನಡುವೆ ಈ ಮಾತುಕತೆ ನಡೆದಿದೆ.

ಖಾನ್ ವಿರುದ್ಧ ಪರೋಕ್ಷ ದಾಳಿ ನಡೆಸಿದ ಮೋದಿ,ಪ್ರದೇಶದ ಕೆಲವು ನಾಯಕರು ಭಾರತ ವಿರೋಧಿ ಹಿಂಸೆಯನ್ನು ಪ್ರಚೋದಿಸುತ್ತಿದ್ದು,ಇದು ಶಾಂತಿಗೆ ಪೂರಕವಾಗಿಲ್ಲ ಎಂದು ಟ್ರಂಪ್‌ಗೆ ತಿಳಿಸಿದರು. 30 ನಿಮಿಷಗಳ ಕಾಲ ನಡೆದ ಮಾತುಕತೆಯಲ್ಲಿ ಅವರು ಭೀತಿವಾದ ಮತ್ತು ಹಿಂಸೆಯಿಂದ ಮುಕ್ತವಾದ ವಾತಾವರಣದ ಸೃಷ್ಟಿ ಮತ್ತು ಗಡಿಯಾಚೆಯ ಭಯೋತ್ಪಾದನೆಯ ದಮನದ ಮಹತ್ವವನ್ನು ಪ್ರಮುಖವಾಗಿ ಬಿಂಬಿಸಿದರು. ಬಡತನ,ಅನಕ್ಷರತೆ ಮತ್ತು ಕಾಯಿಲೆಗಳ ವಿರುದ್ಧ ಹೋರಾಡುವ ಭಾರತದ ಬದ್ಧತೆಯನ್ನೂ ಅವರು ಪುನರುಚ್ಚರಿಸಿದರು.

ಸೋಮವಾರ ತನ್ನ ಸ್ವಾತಂತ್ರದ ನೂರನೇ ವರ್ಷವನ್ನಾಚರಿಸಿಕೊಂಡ ಅಫಘಾನಿಸ್ತಾನದ ಕುರಿತೂ ಮಾತನಾಡಿದ ಮೋದಿ,ಏಕೀಕೃತ,ಸುಭದ್ರ,ಪ್ರಜಾಸತ್ತಾತ್ಮಕ ಮತ್ತು ಸ್ವತಂತ್ರ ಅಫಘಾನಿಸ್ತಾನಕ್ಕಾಗಿ ಭಾರತವು ಬದ್ಧವಾಗಿದೆ ಎಂದು ಒತ್ತಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News