'ಆಟಿಡೊಂಜಿ ತಮ್ಮನ' ತುಳು ಸಂಸ್ಕೃತಿ ಖಾದ್ಯಗಳ ಸ್ಪರ್ಧಾಕೂಟ

Update: 2019-08-19 18:52 GMT

ಉಳ್ಳಾಲ: ತುಳುನಾಡು ವೈಶಿಷ್ಟ್ಯದ ನಾಡು, ಇಲ್ಲಿ ಆಚರಿಸುವಂತಹ ಪ್ರತಿಯೊಂದು ಆಚರಣೆಯಲ್ಲೂ ಮನುಕುಲಕ್ಕೆ ಪೂರಕವಾಗುವಂತಹ ಅನೇಕ ವಿಚಾರಗಳು ಅಡಕವಾಗಿರುತ್ತದೆ. ಇಂತಹ ಆಚರಣೆಗಳಲ್ಲಿ ಆಟಿ ಕೂಡ ಒಂದಾಗಿದೆ. ನಮ್ಮ ಜೀವನ ಪದ್ಧತಿ ಪ್ರಕೃತಿಯ ಮೇಲೆ ಅವಲಂಬಿತವಾಗಿದ್ದು, ಈ ಪ್ರಕೃತಿಯು ಜನ ಜೀವನಕ್ಕೆ ನೀಡಿದ ಕೊಡುಗೆಯನ್ನು ನಮ್ಮ ಪ್ರಾಚೀನ ತೌಳವರು ಸಮರ್ಪಕವಾಗಿ ಬಳಸಿಕೊಂಡಿದ್ದಾರೆ. ಅದರಲ್ಲೂ ಪ್ರಾಚೀನ ತುಳುವರ  ಪ್ರಾಕೃತಿಕ ಆರಾಧನೆಗೆ ಆಟಿ ತಿಂಗಳೊಂದು ಮಾದರಿಯಾಗಿದ್ದು, ಅದು ತುಳು ಜನರ ಬದುಕಿನ ದಾಟಿಯೂ ಆಗಿತ್ತು ಎಂದು ಶಾರದಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಪ್ರೊ.ಎಂ.ಬಿ. ಪುರಾಣಿಕ್ ಅಭಿಪ್ರಾಯಪಟ್ಟರು. 

ಅವರು ತಲಪಾಡಿಯ ಶಾರದಾ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿದ್ಯಾರ್ಥಿಗಳು ಆಯೊಜಿಸಿದ ಆಟಿಡೊಂಜಿ ತಮ್ಮನ ಎಂಬ ತುಳು ಸಂಸ್ಕೃತಿ ಖಾದ್ಯಗಳ ಸ್ಪರ್ಧಾಕೂಟವನ್ನು ಉದ್ಘಾಟಿಸಿ ಮಾತನಾಡಿದರು.

ಅಧ್ಯಕ್ಷತೆಯನ್ನು ವಹಿಸಿದ ಶಾರದಾ ಕಾಲೇಜಿನ ಪ್ರಾಂಶುಪಾಲ ಅಷ್ಟಾವಧಾನಿ ಡಾ.ಕಬ್ಬಿನಾಲೆ ಬಾಲಕೃಷ್ಣ ಭಾರದ್ವಜ್ ಅವರು ತೌಳವ ಸಂಸ್ಕಾರದ ವಿಶೇಷತೆಯ ಕುರಿತು ಮಾತನಾಡಿದರು. 

ಕಾರ್ಯಕ್ರಮದಲ್ಲಿ ಶಾರದಾ ವಿದ್ಯಾನಿಕೇತನದ ಆಡಳಿತಾಧಿಕಾರಿಯಾದ ವಿವೇಕ್ ತಂತ್ರಿ, ವಿದ್ಯಾನಿಕೇತನ ಪ್ರಾಂಶುಪಾಲ ವಿನಾಯಕ್ ಬಿ.ಜಿ, ಮೋಹನ್‍ದಾಸ್, ಸುಷ್ಮಾ ದಿನಕರ್,  ಲತಾಂಜಲಿ ರೈ, ಉಪ ಪ್ರಾಂಶುಪಾಲ ಪ್ರೊ| ಮಾದವ ಕೆ., ಪಡಿಮಂಚದ ಸಂಯೋಜಕ ಪ್ರೀತಮ್ ಶೆಟ್ಟಿ ಮತ್ತು ಸುಪ್ರಿಯಾ ಎಂ.ಕೆ. ಉಪಸ್ಥಿತರಿದ್ದರು. 

ಆಟಿಡೊಂಜಿ ತಮ್ಮನದ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ತೃತೀಯ ವಾಣಿಜ್ಯ ವಿಭಾಗದ ನೊಗ ತಂಡ, ದ್ವಿತೀಯ ಬಹುಮಾನವನ್ನು ಪ್ರಥಮ ವಾಣಿಜ್ಯ ವಿಭಾಗದ ಉಜ್ಜೆರ್ ತಂಡ ಹಾಗೂ ತೃತೀಯ ಬಹುಮಾನವನ್ನು ತೃತೀಯ ಮ್ಯಾನೇಜ್ಮೆಂಟ್ ವಿಭಾಗದ ಮುಟ್ಟಲೆ ತಂಡವು ತಮ್ಮದಾಗಿಸಿಕೊಂಡಿತು.

ಸಂಯೋಜಕ ಪ್ರೀತಮ್ ಶೆಟ್ಟಿ ಸ್ವಾಗತಿಸಿದರು.ಮನುರಾಜ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಸಹನಾ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News