×
Ad

ಕಾಶ್ಮೀರದಲ್ಲಿ ದೌರ್ಜನ್ಯ ಎಂದು ಹರ್ಯಾಣ, ತೆಲಂಗಾಣದ ವೀಡಿಯೊ ಹಾಕಿದ ಪಾಕ್ ಸಚಿವ!

Update: 2019-08-20 09:54 IST

ಹೊಸದಿಲ್ಲಿ, ಆ.20: ಕಾಶ್ಮೀರದಲ್ಲಿ ದೌರ್ಜನ್ಯ ನಡೆಯುತ್ತಿದೆ ಎಂದು ಆಪಾದಿಸಿದ ಪಾಕಿಸ್ತಾನದ ಸಾಗರ ಸಂಚಾರ ವ್ಯವಹಾರಗಳ ಸಚಿವ ಸೈಯದ್ ಅಲಿ ಹೈದರ್ ಝೈದಿ ಹರ್ಯಾಣ ಹಾಗೂ ತೆಲಂಗಾಣದ ಎರಡು ತಿರುಚಿದ ವೀಡಿಯೊಗಳನ್ನು ಟ್ವೀಟ್ ಮಾಡಿರುವುದನ್ನು ಆಲ್ಟ್ ನ್ಯೂಸ್ ಇನ್ ಪತ್ತೆಹಚ್ಚಿ ಬಹಿರಂಗಪಡಿಸಿದೆ.

ವೀಡಿಯೊದ ಮೊದಲ ಭಾಗದಲ್ಲಿ ಪೊಲೀಸರು ಗುಂಪಿನ ಮೇಲೆ ಲಾಠಿ ಪ್ರಹಾರ ಮಾಡುತ್ತಿದ್ದಾರೆ. ಇದು ''ಕಾಶ್ಮೀರದಲ್ಲಿ ಭಾರತ ಸರ್ಕಾರ ಎಸಗುತ್ತಿರುವ ದೌರ್ಜನ್ಯ'' ಎಂದು ಅವರು ಪ್ರತಿಪಾದಿಸಿದ್ದರು.

ಮುಂದಿನ ಭಾಗದಲ್ಲಿ ಮಗುವನ್ನು ಹಿಡಿದುಕೊಂಡಿರುವ ಗಾಯಾಳು ಮಹಿಳೆ ಇದ್ದಾಳೆ. ''ಬೇಟಿ ಪಡಾವೊ ಬೇಟಿ ಬಚಾವೊ ಯೋಜನೆಯನ್ನು ಜಾರಿಗೆ ತಂದ ಮೋದಿ ಆಡಳಿತದಲ್ಲೇ ಮಹಿಳೆಯರ ಮೇಲೆ ದೌರ್ಜನ್ಯ ನಡೆಯುತ್ತಿದೆ'' ಎಂದು ವಿವರಣೆ ನೀಡಲಾಗಿದೆ. ಇದನ್ನು ಪಾಕಿಸ್ತಾನದ ಹಲವು ಟ್ವಿಟ್ಟರಿಗರು ಶೇರ್ ಮಾಡಿದ್ದರು.

ತಿರುಚಿದ ವೀಡಿಯೊ ತುಣುಕು
ಆದರೆ ವಾಸ್ತವವಾಗಿ ಇದು ಕಾಶ್ಮೀರದಲ್ಲಿ ನಡೆದ ಘಟನೆಯೇ ಅಲ್ಲ. ಎರಡು ಭಿನ್ನ ತುಣುಕುಗಳನ್ನು ಸೇರಿಸಿ ಇದನ್ನು ಸಿದ್ಧಪಡಿಸಲಾಗಿದೆ. ವೀಡಿಯೊಗೆ ವಿವರಣೆಯನ್ನು ಕೂಡಾ ಜೋಡಿಸಲಾಗಿದೆ. ಮೊದಲ ಭಾಗಲ್ಲಿ ಪೊಲೀಸರು ಹಾಗೂ ಸೇನಾ ಸಿಬ್ಬಂದಿ ಗುಂಪಿನ ಮೇಲೆ ಲಾಠಿ ಪ್ರಹಾರ ನಡೆಸುತ್ತಿದ್ದು, ಇದನ್ನು 2017ರ ಆಗಸ್ಟ್‌ನಲ್ಲಿ ಯೂ-ಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ. ಹರ್ಯಾಣದ ಪಂಚಕುಲದಲ್ಲಿ ಅತ್ಯಾಚಾರ ಪ್ರಕರಣದಲ್ಲಿ ಶಿಕ್ಷೆಗೊಳಗಾದ ಗುರ್ಮೀತ್ ರಾಮ್‌ ರಹೀಮ್‌ನ ಅನುಯಾಯಿಗಳ ಮೇಲೆ ಲಾಠಿ ಪ್ರಹಾರ ನಡೆಯುತ್ತಿದೆ ಎಂದು ಅದಕ್ಕೆ ವಿವರಣೆ ಹಾಕಲಾಗಿತ್ತು.

ಆಲ್ಟ್‌ನ್ಯೂಸ್ ಪತ್ತೆ ಮಾಡಿದಂತೆ ಅದೇ ಘಟನೆಯನ್ನು ಇನ್ನೊಂದು ಕೋನದಿಂದ ಚಿತ್ರೀಕರಿಸಲಾಗಿದೆ. ಔಟ್‌ಲುಕ್ ಇದನ್ನು ಅಪ್‌ಲೋಡ್ ಮಾಡಿತ್ತು. ಇದೀಗ ವೈರಲ್ ಆಗಿರುವ ವೀಡಿಯೊದ 13ನೇ ಸೆಕೆಂಡ್‌ನಲ್ಲಿ ಅದೇ ಬೀದಿ ಕಂಡುಬರುತ್ತಿದೆ. ಮೂಲ ವೀಡಿಯೊ ಹಾಗೂ ಕೊಲ್ಯಾಜ್ ಮಾಡಲಾದ ವೀಡಿಯೊ ನಡುವಿನ ಸಾಮ್ಯತೆಯನ್ನು ಕಾಣಬಹುದಾಗಿದೆ.

ವೀಡಿಯೊದ ಎರಡನೇ ಭಾಗವನ್ನು ಆಲ್ಟ್‌ನ್ಯೂಸ್ ಕಳೆದ ಮೇ ತಿಂಗಳಲ್ಲೇ ಸುಳ್ಳು ಎಂದು ನಿರೂಪಿಸಿತ್ತು. ಪಾಕಿಸ್ತಾನದ ಜಾಲತಾಣಗಳಲ್ಲಿ ವೈರಲ್ ಆಗಿದ್ದ ಈ ದೃಶ್ಯಾವಳಿಯಲ್ಲಿ ಹಿಂದೂಗಳು ಮುಸ್ಲಿಮರನ್ನು ಬೇಕಾಬಿಟ್ಟಿ ಹತ್ಯೆ ಮಾಡುತ್ತಿದ್ದಾರೆ ಎಂದು ಪ್ರತಿಪಾದಿಸಲಾಗಿತ್ತು. ಇದು ಉತ್ತರ ಪ್ರದೇಶದ ಝಾನ್ಸಿಯಲ್ಲಿ ನಡೆದ ಘಟನೆ ಎಂದು ಹೇಳಲಾಗಿತ್ತು. ಆದರೆ ಈ ವೀಡಿಯೊ ಝಾನ್ಸಿಯದ್ದೂ ಅಲ್ಲ; ಕಾಶ್ಮೀರದ್ದೂ ಅಲ್ಲ. ಇದು ತೆಲಂಗಾಣದಲ್ಲಿ 2018ರಲ್ಲಿ ಚಿತ್ರೀಕರಿಸಿದ ವೀಡಿಯೊ ಆಗಿದೆ. ತೆಲಂಗಾಣ ಪಿಎಸ್ಐ ತನ್ನ ಪತ್ನಿ ಹಾಗೂ ಅತ್ತೆ ಮೇಲೆ ಹಲ್ಲೆ ಮಾಡುತ್ತಿರುವುದನ್ನು ಸೆರೆಹಿಡಿಯಲಾಗಿತ್ತು. 56 ಸೆಕೆಂಡ್‌ನ ಈ ವಿಡಿಯೊದಲ್ಲಿ ರೋದಿಸುತ್ತಿರುವ ಮಹಿಳೆಯನ್ನು ವೈರಲ್ ವೀಡಿಯೊದಲ್ಲಿ ಬಳಸಲಾಗಿದೆ.

ಹೀಗೆ ಮಾರ್ಪಡಿಸಿದ ವೀಡಿಯೊಗಳನ್ನು ಪಾಕಿಸ್ತಾನದ ಸಾಮಾಜಿಕ ಜಾಲತಾಣಗಳಲ್ಲಿ ಪಸರಿಸಲಾಗುತ್ತಿದ್ದು, ಸಚಿವ ಕೂಡಾ, 370ನೇ ವಿಧಿ ರದ್ದತಿ ಹಿನ್ನೆಲೆಯಲ್ಲಿ ನಡೆಯುತ್ತಿರುವ ದೌರ್ಜನ್ಯ ಎಂದು ಬಿಂಬಿಸಿದ್ದಾರೆ.

ಕೃಪೆ: www.altnews.in

Full View Full View Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News