ಸಿಐಟಿಯು ದ.ಕ.ಜಿಲ್ಲಾ ಸಮ್ಮೇಳನ ಸಮಾರೋಪ

Update: 2019-08-20 07:10 GMT

ಮಂಗಳೂರು, ಆ.20: ನಗರದ ಬೋಳಾರದ ಎಸ್.ಕೆ.ಟೈಲ್ಸ್ ವರ್ಕರ್ಸ್ ಯೂನಿಯನ್ ಕಚೇರಿಯಲ್ಲಿ ರವಿವಾರ ಆರಂಭಗೊಂಡ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ (ಸಿಐಟಿಯು)ನ 16ನೇ ದ.ಕ. ಜಿಲ್ಲಾ ಸಮ್ಮೇಳನವು ಸೋಮವಾರ ಸಮಾಪನಗೊಂಡಿತು.

ಸಮಾರೋಪ ಭಾಷಣಗೈದ ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಸುಂದರಂ, ಕಾರ್ಮಿಕ ಕಾಯ್ದೆಗಳಲ್ಲಿರುವ ಹಲವು ಸವಲತ್ತುಗಳನ್ನು ಕೇಂದ್ರ ಸರಕಾರ ಕಿತ್ತುಕೊಳ್ಳುತ್ತಿದೆ. ಹೊಸ ಕಾನೂನಿನ ಪ್ರಕಾರ ದಿನದ ದುಡಿತಕ್ಕೆ ಕನಿಷ್ಠ ಅವಧಿ, ಕನಿಷ್ಠ ವೇತನ ಎಂಬುದಿಲ್ಲ. ಕಾರ್ಮಿಕರು ಮುಷ್ಕರ ಮಾಡುವ ಹಕ್ಕಿನ ಮೇಲೆ ದಾಳಿ ಮಾಡಲಾಗುತ್ತಿದೆ. ಮುಷ್ಕರವನ್ನು ಮಾಡುವ ಮುನ್ನ ಕಾರ್ಮಿಕರು ಮಾಲಕನ ಅನುಮತಿ ಪಡೆಯಬೇಕೆಂಬ ಪ್ರಸ್ತಾಪವಿದೆ. ಮುಷ್ಕರದಿಂದ ಮಾಲಕನಿಗೆ ಆಗುವ ನಷ್ಟವನ್ನು ಕಾರ್ಮಿಕರೇ ಭರಿಸಬೇಕಾಗುತ್ತದೆ. ಈ ಕಾನೂನು ಜಾರಿಯಾದರೆ ಎಲ್ಲಾ ಮುಷ್ಕರಗಳು ಕಾನೂನುಬಾಹಿರವಾಗಲಿದೆ ಎಂದರು.

ಕೇಂದ್ರದಲ್ಲಿ ಅಧಿಕಾರದಲ್ಲಿರುವ ಶಕ್ತಿಗಳಿಗೆ ಮಾನವೀಯತೆ ಬದಲು ಮೃಗಬಲವಿದೆ. ಆನೆ ಅಥವಾ ಸಿಂಹವೇ ಇರಲಿ ಅವುಗಳನ್ನು ಪಳಗಿಸುವ ಅನುಭವ ಮನುಷ್ಯನಿಗಿದೆ. ಹಾಗಾಗಿ ದಮನಕಾರಿ ಶಕ್ತಿಗಳನ್ನು ಕಾರ್ಮಿಕ ವರ್ಗ ಪಳಗಿಸುತ್ತದೆ. ಕಾರ್ಮಿಕ ವರ್ಗವು ತನ್ನ ದುರ್ಬಲತೆಗೆ ಬೇರೆಲ್ಲೂ ಕಾರಣಗಳನ್ನು ಹುಡುಕಬೇಕಾಗಿಲ್ಲ. ನಮ್ಮಲ್ಲೇ ಇರುವ ದೌರ್ಬಲ್ಯಗಳನ್ನು ನಿವಾರಿಸಿಕೊಂಡು ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳಬೇಕು. ಕಾರ್ಮಿಕರು ಸಂಕುಚಿತವಾಗಿ ಆಲೋಚಿಸದೆ ವರ್ಗವಾಗಿ ಕಾರ್ಯೋನ್ಮುಖರಾದಾಗ ಮಾತ್ರ ಈ ಮೃಗೀಯ ಶಕ್ತಿಗಳನ್ನು ಸೋಲಿಸಲು ಸಾಧ್ಯ ಮೀನಾಕ್ಷಿ ಸುಂದರಂ ಅಭಿಪ್ರಾಯಪಟ್ಟರು.

ಸಿಐಟಿಯು ಜಿಲ್ಲಾಧ್ಯಕ್ಷ ಜೆ. ಬಾಲಕೃಷ್ಣ ಶೆಟ್ಟಿ ಸಭಾಧ್ಯಕ್ಷತೆ ವಹಿಸಿ ಮಾತನಡಿದರು. ವೇದಿಕೆಯಲ್ಲಿ ಸಂಘಟನೆಯ ಮುಖಂಡರಾದ ಕೆ.ಆರ್.ಶ್ರೀಯಾನ್, ಯು.ಬಿ.ಲೋಕಯ್ಯ, ವಸಂತ ಆಚಾರಿ, ಪದ್ಮಾವತಿ ಶೆಟ್ಟಿ, ಯೋಗೀಶ್ ಜಪ್ಪಿನಮೊಗರು, ಜಯಂತ ನಾಯಕ್, ಗಂಗಯ್ಯ ಅಮೀನ್, ರಾಧಾ ಮೂಡುಬಿದಿರೆ, ರಾಮಣ್ಣ ವಿಟ್ಲ, ಶಿವ ಕುಮಾರ್, ವಸಂತ ನಡ, ನೋಣಯ್ಯ ಗೌಡ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News