ಭೂಕುಸಿತ ಸಂತ್ರಸ್ತರ ಮರಣೋತ್ತರ ಪರೀಕ್ಷೆಗೆ ಸ್ಥಳ ನೀಡಿ ಶುಕ್ರವಾರದ ನಮಾಝ್ ಸ್ಥಳ ಬದಲಿಸಿದ ಮಸೀದಿ

Update: 2019-08-20 10:23 GMT
ಸಾಂದರ್ಭಿಕ ಚಿತ್ರ

ಮಲಪ್ಪುರಂ, ಆ.20: ಕೇರಳದ ಮಲಪ್ಪುರಂ ಜಿಲ್ಲೆಯ ಪೊತ್ತುಕಲ್ಲು ಗ್ರಾಮದ ಮುಸ್ಲಿಮರು ಕಳೆದ ಶುಕ್ರವಾರದ ಪ್ರಾರ್ಥನೆಗಾಗಿ ಜಮೀಯ್ಯತುಲ್ ಮುಜಾಹಿದ್ದೀನ್ ಮಸೀದಿಗೆ ಎಂದಿನಂತೆ ಹೋಗಿಲ್ಲ, ಬದಲು ಮಸೀದಿಗಿಂತ ಕೆಲ ಕಿಮೀ ದೂರದಲ್ಲಿರುವ ತಾತ್ಕಾಲಿಕ, ಟಾರ್ಪಾಲಿನ್ ಹೊದಿಕೆಯ ಪ್ರಾರ್ಥನಾ ಸ್ಥಳದಲ್ಲಿ ನಮಾಝ್ ನೆರವೇರಿಸಿದರು.

ಮಸೀದಿಯ ಪ್ರಾರ್ಥನಾ ಸ್ಥಳದ ಒಂದು ಭಾಗವನ್ನು ಕಾವಲಪ್ಪರ ಭೂಕುಸಿತಗಳಲ್ಲಿ ಮೃತಪಟ್ಟವರ ಮರಣೋತ್ತರ ಪರೀಕ್ಷೆ ನಡೆಸಲು ಮಸೀದಿಯ ಆಡಳಿತ ಬಿಟ್ಟುಕೊಟ್ಟಿತ್ತು. ಶುಕ್ರವಾರದ ಪ್ರಾರ್ಥನೆ ಇದರಿಂದಾಗಿ ಬಾಧಿತವಾಗದೇ ಇರಲೆಂದು ಚರ್ಚ್ ಆಡಳಿತ ಈ ತಾತ್ಕಾಲಿಕ ಏರ್ಪಾಟು ಮಾಡಿತ್ತು.

ಮಸೀದಿಯಲ್ಲಿ ಬಹಳಷ್ಟು ಜನರಿದ್ದರೆ ಮರಣೋತ್ತರ ಪರೀಕ್ಷೆಗೆ ತೊಡಕಾಗಬಹುದೆಂದು ನಮಾಝ್ ಸ್ಥಳವನ್ನು ಸ್ಥಳಾಂತರಿಸಲಾಯಿತು ಎಂದು ಮಸೀದಿ ಅಧ್ಯಕ್ಷ ಕೆ ಅಬ್ದುಲ್ ಕರೀಂ ಹೇಳಿದ್ದಾರೆ.

ಆಗಸ್ಟ್ 8ರಂದು ಕವಲಪ್ಪರ ಎಂಬಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಕನಿಷ್ಠ 62 ಮಂದಿ ಸಾವಿಗೀಡಾಗಿದ್ದಾರೆಂದು ತಿಳಿಯಲಾಗಿದೆ. ಇಲ್ಲಿಯ ತನಕ ರಕ್ಷಣಾ ತಂಡಗಳು 37 ಕಳೇಬರಗಳನ್ನು ಹೊರತೆಗೆದಿವೆ. ಉಳಿದ 37 ಮಂದಿಯ ಕಳೇಬರಗಳಿಗಾಗಿ ಶೋಧ ಮುಂದುವರಿದಿದೆ. ಮಸೀದಿಯು ಭೂಕುಸಿತ ಸಂಭವಿಸಿದ ಸ್ಥಳದಿಂದ ಸುಮಾರು ನಾಲ್ಕು ಕಿಮೀ ದೂರವಿದೆ.

ಈ ಮಸೀದಿ ಹಿಂದಿನಿಂದಲೂ ಸಮಾಜಸೇವೆಗಾಗಿ ಪ್ರಸಿದ್ಧಿ ಪಡೆದಿದೆ. ಭೂಕುಸಿತ ಸಂಭವಿಸಿದ ಸ್ಥಳದಲ್ಲಿ ಶೋಧ ಕಾರ್ಯ ಮುಗಿಯುವ ತನಕ ಮಸೀದಿಯ ಪ್ರಾರ್ಥನಾ ಸ್ಥಳದ ಒಂದು ಭಾಗ ಮರಣೋತ್ತರ ಪರೀಕ್ಷೆಗಳಿಗೆ ಮೀಸಲಾಗಿರಿಸಿರುವುದನ್ನು ಮುಂದುವರಿಸಲಾಗುವುದು ಎಂದು ಮಸೀದಿಯ ಅಧ್ಯಕ್ಷರಾದ ಅಬ್ದುರ್ರಹ್ಮಾನ್ ತಿಳಿಸಿದ್ದಾರೆ. ತನ್ನ ಈ ಮಾನವೀಯ ಕಾರ್ಯಕ್ಕಾಗಿ ಮಸೀದಿ ಎಲ್ಲೆಡೆಯಿಂದ ಶ್ಲಾಘನೆ ಪಡೆದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News