ಮಂಗಳೂರು: ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಶಾಖಾ ಮುಖ್ಯಸ್ಥರ ಸಭೆ

Update: 2019-08-20 13:55 GMT

ಮಂಗಳೂರು : ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಪ್ರಾದೇಶಿಕ ಕಚೇರಿಯು ಆ.17 ಹಾಗೂ 18ರಂದು, ತನ್ನ ಎಲ್ಲಾ ಬ್ಯಾಂಕ್ ಶಾಖಾ ಮುಖ್ಯಸ್ಥರ ಸಭೆಯನ್ನು ಆಯೋಜಿಸಿತ್ತು. ರಾಷ್ಟ್ರೀಯ ಆದ್ಯತೆಗಳೊಂದಿಗೆ ಬ್ಯಾಂಕಿಂಗ್ ಚಟುವಟಿಕೆಗಳನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ಸಮಾಲೋಚನೆ ಹಾಗೂ ವಿಚಾರ ವಿನಿಮಯವನ್ನು ಸಭೆಯಲ್ಲಿ ನಡೆಸಲಾಯಿತು.

ಈ ಪ್ರಕ್ರಿಯೆಯ ಮೂಲಕ ನಿರ್ದಿಷ್ಟ ವಿಷಯಗಳ ಜೊತೆ ಬ್ಯಾಂಕಿಂಗ್ ಅನ್ನು ಜೊತೆಗೂಡಿಸುವ ಬಗ್ಗೆ ಹಲವಾರು ಚಿಂತನೆಗಳು ಹೊರಹೊಮ್ಮಿದವು ಹಾಗೂ ಗ್ರಾಹಕರ ಆಶೋತ್ತರಗಳಿಗೆ ಬ್ಯಾಂಕ್‌ಗಳನ್ನು ಹೆಚ್ಚು ಪ್ರತಿಕ್ರಿಯಾತ್ಮಕವಾಗುವಂತೆ ಮಾಡುವುದು ಹಾಗೂ ಅವರಿಗೆ ಡಿಜಿಟಲ್ ಬ್ಯಾಂಕ್‌ನ ಲಭ್ಯತೆಯನ್ನು ಹೆಚ್ಚಿಸುವ ಕುರಿತು ಸಮಾಲೋಚನೆಗಳನ್ನು ನಡೆಸಲಾಯಿತು.

ಕೃಷಿಕರ ಆದಾಯವನ್ನು ದ್ವಿಗುಣಗೊಳಿಸುವ ನಿಟ್ಟಿನಲ್ಲಿ ಉಪಕ್ರಮಗಳನ್ನು ಕೈಗೊಳ್ಳುವುದು, psb59minutes.com ಮೂಲಕ ವಿಶೇಷವಾಗಿ ಮುದ್ರಾ ಯೋಜನೆಯಿಂದ ಸಣ್ಣ ಉದ್ಯಮಿಗಳಿಗೆ ಸಾಲ ನೀಡಿಕೆಯನ್ನು ಅಧಿಕಗೊಳಿಸುವುದು ಹಾಗೂ ಮಹಿಳಾ ಹಾಗೂ ಪರಿಶಿಷ್ಟ ಜಾತಿ/ಬುಡಕಟ್ಟುಗಳ ಉದ್ಯಮಿಗಳನ್ನು ಸಬಲೀಕರಣಗೊಳಿಸುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.

ಸಭೆಯ ಅಧ್ಯಕ್ಷತೆಯನ್ನು ಆರ್‌ಎಂಡಿ ಕೇಂದ್ರೀಯ ಕಚೇರಿಯ ಜನರಲ್ ಮ್ಯಾನೇಜರ್ ಬಿ.ಎಸ್.ವೆಂಕಟೇಶ್ ವಹಿಸಿದ್ದರು. ಪ್ರಾದೇಶಿಕ ಮುಖ್ಯಸ್ಥ ಟಿ.ನಂಜುಂಡಪ್ಪ ಹಾಗೂ ಉಪಪ್ರಾದೇಶಿಕ ಮುಖ್ಯಸ್ಥ ಉಪಸ್ಥಿತರಿದ್ದರು.

ಮುದ್ರಾ, ಪಿಎಸ್‌ಬಿ59 ಸಾಲಗಳು, ಪಿಎಂಜೆಜೆಬಿವೈ, ಪಿಎಂಜೆಡಿವೈ ಓವರ್‌ಡ್ರಾಫ್ಟ್ ಇತ್ಯಾದಿ ಕೇಂದ್ರ ಸರಕಾರದ ಜನಪ್ರಿಯ ಯೋಜನೆಗಳನ್ನು ಜನಪ್ರಿಯಗೊಳಿಸುವಂತೆ ಅವರು ಶಾಖಾ ಮುಖ್ಯಸ್ಥರನ್ನು ಆಗ್ರಹಿಸಿದರು. ವಿವಿಧ ವಲಯಗಳಲ್ಲಿ ಸಾಲದ ದರಗಳ ಇಳಿಕೆಯ ಬಗ್ಗೆ ಗ್ರಾಹಕರಿಗೆ ಮಾಹಿತಿ ನೀಡುವಂತೆಯೂ ಅವರು ಶಾಖೆಗಳನ್ನು ಆಗ್ರಹಿಸಿದರು.

ಮಂಗಳೂರು ಪ್ರದೇಶದಲ್ಲಿ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ 36 ಶಾಖೆಗಳಿವೆ. ಮಂಗಳೂರು ಪ್ರದೇಶದ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಶಾಖೆಗಳು ಕಿರು, ಸಣ್ಣ ಹಾಗು ಮಧ್ಯಮ ಕೈಗಾರಿಕೆಗಳಿಗೆ 350 ಕೋಟಿ ರೂ. ಹಾಗೂ ಕೃಷಿ ಹಾಗೂ ಇತರ ಉಪಚಟುವಟಿಕೆಗಳಿಗೆ 700 ಕೋಟಿ ರೂ. ಸಾಲವನ್ನು ನೀಡಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News