ದಾಭೋಲ್ಕರ್ ಹತ್ಯೆ ಪ್ರಕರಣ: ನಿಜವಾದ ಅಪರಾಧಿಗಳ ಬಂಧನಕ್ಕೆ ಕುಟುಂಬದ ಆಗ್ರಹ

Update: 2019-08-20 15:02 GMT

ಪುಣೆ,ಆ.20: ವಿಚಾರವಾದಿ ನರೇಂದ್ರ ದಾಭೋಲ್ಕರ್ ಅವರ ಹತ್ಯೆಗೆ ಕಾರಣರಾದ ನಿಜವಾದ ಅಪರಾಧಿಗಳನ್ನು ಬಂಧಿಸುವಂತೆ ಅವರ ಆರನೇ ಪುಣ್ಯತಿಥಿಯ ದಿನವಾದ ಮಂಗಳವಾರ ದಾಭೋಲ್ಕರ್ ಕುಟುಂಬದ ಸದಸ್ಯರು ಮತ್ತು ಸಾಮಾಜಿಕ ಕಾರ್ಯಕರ್ತರು ಆಗ್ರಹಿಸಿದ್ದಾರೆ.

ದಾಭೋಲ್ಕರ್ ಸ್ಥಾಪಿತ ಅಂಧಶ್ರದ್ಧಾ ನಿರ್ಮೂಲನ ಸಮಿತಿಯ ಸದಸ್ಯರು ಮತ್ತು ದಾಭೋಲ್ಕರ್ ಕುಟುಂಬದವರು ದಾಭೋಲ್ಕರ್ ರನ್ನು ಗುಂಡಿಟ್ಟು ಹತ್ಯೆಗೈದಿದ್ದ ಓಂಕಾರೇಶ್ವರ ಸೇತುವೆಯ ಬಳಿ ಪ್ರತಿಭಟನಾ ಜಾಥಾ ನಡೆಸಿದರು.

ಪ್ರಕರಣದ ತನಿಖೆಯನ್ನು ಹಾಲಿ ಸಿಬಿಐ ನಡೆಸುತ್ತಿದೆ.

2016,ಜೂನ್‌ನಲ್ಲಿ ಸಿಬಿಐ ಸಲ್ಲಿಸಿರುವ ಆರೋಪ ಪಟ್ಟಿಯಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಸದಸ್ಯ ವೀರೇಂದ್ರ ತಾವ್ಡೆಯನ್ನು ದಾಭೋಲ್ಕರ್ ಹತ್ಯೆ ಹಿಂದಿನ ರೂವಾರಿಯೆಂದು ಆರೋಪಿಸಲಾಗಿದೆ.

‘ನನ್ನ ತಂದೆಯ ಹತ್ಯೆಯಾಗಿ ಆರು ವರ್ಷಗಳು ಕಳೆದಿವೆ ಮತ್ತು ಒಂದು ಘಟ್ಟದಲ್ಲಿ ತನಿಖೆ ಸ್ಥಗಿತಗೊಂಡಿದೆ. 2018ರಲ್ಲಿ ಅವರ ಪುಣ್ಯತಿಥಿಗೆ ಮುನ್ನ ಶಂಕಿತ ಶೂಟರ್‌ಗಳನ್ನು ಬಂಧಿಸಲಾಗಿತ್ತು ಮತ್ತು ನಿಜವಾದ ಆರೋಪಿಗಳು ಶೀಘ್ರವೇ ಬಯಲಿಗೆ ಬರುತ್ತಾರೆ ಎಂದು ನಿರೀಕ್ಷಿಸಲಾಗಿತ್ತು, ಆದರೆ ವಾಸ್ತವದಲ್ಲಿ ಏನೂ ಆಗಿಲ್ಲ’ ಎಂದು ಹೇಳಿದ ಹಮೀದ್ ದಾಭೋಲ್ಕರ್ ಅವರು,ಉಚ್ಚ ನ್ಯಾಯಾಲಯವು ಪ್ರಕರಣದ ಮೇಲೆ ನಿಗಾಯಿರಿಸಿದ್ದರಿಂದ ಅದರಲ್ಲಿ ಪ್ರಗತಿಯಾಗಿದೆ. ನಿಜವಾದ ಅಪರಾಧಿಗಳ ಬಂಧನವಾಗುವವರೆಗೂ ಹೋರಾಟವು ಮುಂದುವರಿಯುತ್ತದೆ ಎಂದರು.

‘ಆರೋಪ ಪಟ್ಟಿಯನ್ನು ಓದುವ ಮೂಲಕ ಯಾರೇ ಆದರೂ ನಿಜವಾದ ಅಪರಾಧಿಗಳನ್ನು ಗುರುತಿಸಬಹುದು. ಅದರಲ್ಲಿ ಕೆಲವು ಸಂಸ್ಥೆಗಳ ಹೆಸರುಗಳನ್ನು ಉಲ್ಲೇಖಿಸಲಾಗಿದೆ. ದುರದೃಷ್ಟವಶಾತ್ ತನಿಖೆಯಲ್ಲಿ ಹೆಚ್ಚಿನ ಪ್ರಗತಿಯಾಗುತ್ತಿಲ್ಲ. ಸರಕಾರವು ಸ್ವಲ್ಪ ಇಚ್ಛಾಶಕ್ತಿಯನ್ನು ಪ್ರದರ್ಶಿಸಬೇಕು ಎಂದು ನಾವು ನಿರೀಕ್ಷಿಸಿದ್ದೇವೆ. ತನಿಖಾ ಸಂಸ್ಥೆಯು ಸಾಕ್ಷಾಧಾರಗಳಿಗಾಗಿ ಶೋಧಿಸಬೇಕು ಎಂದು ನಾವು ಬಯಸಿದ್ದೇವೆ’ ಎಂದು ಹಮೀದ್ರ ಸೋದರಿ ಮುಕ್ತಾ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News