ಉಡುಪಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಹಿಳೆಯರ ವಿಶ್ರಾಂತಿ ಕೊಠಡಿ ಉದ್ಘಾಟನೆ

Update: 2019-08-20 15:34 GMT

ಉಡುಪಿ, ಆ.20: ಮಣಿಪಾಲದಲ್ಲಿರುವ ಉಡುಪಿ ಜಿಲ್ಲಾಧಿಕಾರಿ ಕಚೇರಿ ಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮಹಿಳಾ ನೌಕರರಿಗೆ ಹಾಗೂ ವಿವಿಧ ಕೆಲಸಗಳ ಮೇಲೆ ಕಚೇರಿಗೆ ಆಗಮಿಸುವ ಮಹಿಳೆಯರಿಗೆ ಇನ್ನು ಮುಂದೆ ಸುಸಜ್ಜಿತ ವಿಶ್ರಾಂತಿ ಕೊಠಡಿ ಸೌಲಭ್ಯ ದೊರೆಯಲಿದೆ.

ರಾಜ್ಯದಲ್ಲೇ ಪ್ರಥಮದ್ದೆಂದು ಹೇಳಲಾದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಹಿಳೆಯರಿಗೆ ವಿವಿಧ ಸೌಲಭ್ಯಗಳಿರುವ ವಿಶ್ರಾಂತಿ ಕೊಠಡಿಯ ಕಲ್ಪನೆ ಉಡುಪಿ ನಿರ್ಗಮಿತ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಅವರದು. ಇಲ್ಲಿನ ಮಹಿಳಾ ನೌಕರರು ಹಾಗೂ ಕಚೇರಿಗೆ ಆಗಮಿಸುವ ಮಹಿಳೆಯರ ಸಮಸ್ಯೆಗಳನ್ನು ಅರಿತು, ವಿಶೇಷ ಆಸಕಿತಿ ವಹಿಸಿ ಆರಂಭಿಸಿರುವ ಈ ಮಹಿಳಾ ವಿಶ್ರಾಂತಿ ಕೊಠಡಿ ಮಹಿಳೆಯರ ಎಲ್ಲಾ ತುರ್ತು ಅಗತ್ಯತೆಗಳನ್ನು ಪೂರೈಸಲಿದೆ.

ಈ ಕೊಠಡಿಯಲ್ಲಿ ಮಹಿಳೆಯರಿಗೆ ಪ್ರತ್ಯೇಕ ಶೌಚಾಲಯ ವ್ಯವಸ್ಥೆ, ಊಟ ಮಾಡಲು ಡೈನಿಂಗ್ ಟೇಬಲ್ ವ್ಯವಸ್ಥೆ, ವಿಶ್ರಾಂತಿ ಪಡೆಯಲು ಮಂಚ ಮತ್ತು ಬೆಡ್ ವ್ಯವಸ್ಥೆ ಇದೆ. ಅಲ್ಲದೇ ತಾಯಿಯರೊಂದಿಗೆ ಆಗಮಿಸುವ ಮಕ್ಕಳನ್ನು ಮಲಗಿಸಲು ಮರದ ತೊಟ್ಟಿಲು, ಉಡುಪು ಬದಲಾವಣಾ ಕೊಠಡಿ ಸೌಲ್ಯ ವನ್ನೂ ಇಲ್ಲಿ ಒದಗಿಸಲಾಗಿದೆ. ಇದು ಮಳೆಗಾಲದಲ್ಲಿ ಮಳೆಯಿಂದ ಒದ್ದೆಯಾಗಿ ಬರುವ ಮಹಿಳೆಯರಿಗೆ ಅನುಕೂಲಕರವಾಗಿದೆ.

ಶೌಚಾಲಯದಲ್ಲಿ ನ್ಯಾಪ್ಕಿನ್ ಬರ್ನಿಂಗ್ ವ್ಯವಸ್ಥೆ ಕೂಡಾ ಇದ್ದು, ಮುಂದಿನ ದಿನಗಳಲ್ಲಿ ನ್ಯಾಪ್ಕಿನ್ ವೆಂಡಿಂಗ್ ಮೆಷಿನ್ ಸಹ ಬರಲಿದೆ. ಈ ಮೆಷಿನ್‌ನಲ್ಲಿ ನಿಗದಿತ ನಾಣ್ಯ ಪಾವತಿಸುವ ಮೂಲಕ ನ್ಯಾಪ್ಕಿನ್ ಪಡೆಯುವ ಸೌಲಭ್ಯ ದೊರೆಯಲಿದೆ. ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯ ಮಹಿಳಾ ಅಧಿಕಾರಿ ಮತ್ತು ಸಿಬ್ಬಂದಿಗಳಿದ್ದು, ತಮ್ಮ ಮಾಸಿಕ ‘ಆ’ ದಿನಗಳಲ್ಲಿ ಕೆಲಸ ಮಾಡಲು ಕಷ್ಟ ಪಡುವ ಮಹಿಳೆಯರು ಈ ವಿಶ್ರಾಂತಿ ಕೊಠಡಿಯಲ್ಲಿ ತುಸು ವಿಶ್ರಾಂತಿ ಪಡೆದು ಮತ್ತೆ ಕೆಲಸ ನಿರ್ವಹಿಸ ಬಹುದು. ಅಲ್ಲದೇ ಪ್ರಸೂತಿ ರಜೆ ಮುಗಿಸಿ ಕರ್ತವ್ಯಕ್ಕೆ ಹಾಜರಾಗುವ ಮಹಿಳಾ ನೌಕರರು, ಅಗತ್ಯವಿದ್ದಲ್ಲಿ ಮನೆಯಿಂದ ಮಗುವನ್ನು ಕರೆಸಿ, ಹಾಲುಣಿಸಿ ಮಗುವನ್ನು ಮತ್ತೆ ಮನೆಗೆ ಕಳುಹಿಸಬಹುದಾಗಿದೆ. ಒಟ್ಟಿನಲ್ಲಿ ತಮ್ಮ ಕರ್ತವ್ಯ ನಿರ್ವಹಣೆಯ ಸಮಯದಲ್ಲಿ ಮಹಿಳಾ ನೌಕರರು ಹೇಳಿಕೊಳ್ಳಲಾಗದ ಹಲವು ಸಮಸ್ಯೆಗಳಿಗೆ ಈ ವಿಶ್ರಾಂತಿ ಕೊಠಡಿ ಪರಿಹಾರವಾಗಲಿದೆ.

ಮಹಿಳೆಯಾಗಿ ಮಹಿಳೆಯರ ಕಷ್ಟಗಳನ್ನು ಅರಿತ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ, ವಿಶೇಷ ಮತುವರ್ಜಿ ವಹಿಸಿ ಈ ಮಹಿಳಾ ವಿಶ್ರಾಂತಿ ಕೊಠಡಿ ನಿರ್ಮಾಣಕ್ಕೆ ಮುತುವರ್ಜಿ ವಹಿಸಿದ್ದು, ಮಂಗಳವಾರ ಉಡುಪಿಯ ನೂತನ ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿರುವ ಜಿ.ಜಗದೀಶ್ ಅವರು ಈ ಮಹಿಳಾ ವಿಶ್ರಾಂತಿ ಕೊಠಡಿಯನ್ನು ಉದ್ಘಾಟಿಸಿದರು. ತಮಗೆ ತಿಳಿದಂತೆ ರಾಜ್ಯದಲ್ಲಿ ಇಂಥ ವ್ಯವಸ್ಥೆ ಇರುವ ಮೊದಲ ಜಿಲ್ಲಾಧಿಕಾರಿ ಕಚೇರಿ ಉಡುಪಿಯಾಗಿದೆ ಎಂದವರು ನುಡಿದರು.

ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ವಿದ್ಯಾ ಕುಮಾರಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News