ಕಾಶ್ಮೀರದಲ್ಲಿ ಮಾನವಹಕ್ಕು ಉಲ್ಲಂಘನೆಯ ಸಾಕ್ಷಿ ನೀಡಲು ಸಿದ್ಧ: ಶೆಹ್ಲಾ ರಶೀದ್

Update: 2019-08-20 15:52 GMT

ಹೊಸದಿಲ್ಲಿ, ಆ.20: ಜಮ್ಮು ಮತ್ತು ಕಾಶ್ಮೀರದಲ್ಲಿ ಮಾನವಹಕ್ಕುಗಳ ಉಲ್ಲಂಘನೆಯಾಗಿದೆ ಎಂಬ ತನ್ನ ಹೇಳಿಕೆಗೆ ತೀವ್ರ ವಿರೋಧ ಎದುರಿಸುತ್ತಿರುವ ಕಾಶ್ಮೀರ ಪೀಪಲ್ಸ್ ಮೂವ್ಮೆಂಟ್ ನಾಯಕಿ ಶೆಹ್ಲಾ ರಶೀದ್, ಭಾರತೀಯ ಸೇನೆಯ ವಿರುದ್ಧ ಮಾಡಿರುವ ಆರೋಪಗಳಿಗೆ ಸಾಕ್ಷಿ ಒದಗಿಸಲು ಸಿದ್ಧ ಎಂದು ತಿಳಿಸಿದ್ದಾರೆ.

“ಸೇನೆಯು ನಿಷ್ಪಕ್ಷಪಾತ ತನಿಖೆಯನ್ನು ನಡೆಸಲಿ. ಆಗ ನಾನು ಇದಕ್ಕೆ ಸಂಬಂಧಿಸಿದ ಎಲ್ಲ ಸಾಕ್ಷಿಗಳನ್ನು ನೀಡುತ್ತೇನೆ” ಎಂದು ಆಂಗ್ಲ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಶೆಹ್ಲಾ ತಿಳಿಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತೀಯ ಸೇನೆ ಅನಿಯಂತ್ರಿತವಾಗಿ ಜನರನ್ನು ಕೊಂಡೊಯ್ಯುತ್ತಿದೆ, ಮನೆಗಳ ಮೇಲೆ ದಾಳಿ ಮಾಡುತ್ತಿದೆ ಮತ್ತು ಜನರಿಗೆ ಚಿತ್ರಹಿಂಸೆ ನೀಡುತ್ತಿದೆ ಎಂದು ಶೆಹ್ಲಾ ಟ್ವಿಟರ್‌ನಲ್ಲಿ ನೀಡಿದ ಹೇಳಿಕೆ ವಿವಾದಕ್ಕೆ ಕಾರಣವಾಗಿತ್ತು. ಈ ಹೇಳಿಕೆಯ ವಿರುದ್ಧ ದೂರು ದಾಖಲಿಸಿದ ಸರ್ವೋಚ್ಚ ನ್ಯಾಯಾಲಯದ ವಕೀಲರೊಬ್ಬರು, ಶೆಹ್ಲಾ ರಶೀದ್ ಭಾರತೀಯ ಸೇನೆಯ ಪ್ರತಿಷ್ಠೆಗೆ ಕುಂದುಂಟು ಮಾಡುವ ಉದ್ದೇಶದಿಂದ ಸುಳ್ಳು ಸುದ್ದಿ ಹರಡುತ್ತಿದ್ದಾರೆ ಎಂದು ಆರೋಪಿಸಿದ್ದರು.

ಇದಕ್ಕೆ ಪ್ರತಿಕ್ರಿಯಿಸಿದ್ದ ಶೆಹ್ಲಾ, ಅಂತರ್ಜಾಲ ಕಡಿತಗೊಳಿಸಲ್ಪಟ್ಟಿರುವ ಕಾಶ್ಮೀರದಲ್ಲಿ ತನ್ನ ಟ್ವೀಟ್‌ಗಳು ಹಿಂಸಾಚಾರಕ್ಕೆ ಪ್ರಚೋದನೆ ನೀಡಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದರು. ಒಂದು ವೇಳೆ ಹಾಗೆ ಹಿಂಸೆ ಭುಗಿಲೇಳುವುದಾದರೆ ಅದಕ್ಕೆ ಸೇನಾಪಡೆಗಳ ಕ್ರಮಗಳೇ ಕಾರಣ ಎಂದು ಅವರು ಆರೋಪಿಸಿದ್ದರು.

ಒಂದು ವೇಳೆ ನಾನು ಮಾನವಹಕ್ಕುಗಳ ಉಲ್ಲಂಘನೆಯ ಪುರಾವೆಗಳನ್ನು ಒದಗಿಸಿದರೆ ಸೇನೆ ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳುವುದೇ ಎಂದು ಶೆಹ್ಲಾ ರಶೀದ್ ಪ್ರಶ್ನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News