ಉಡುಪಿ ನೂತನ ಜಿಲ್ಲಾಧಿಕಾರಿಯಾಗಿ ಜಿ.ಜಗದೀಶ್ ಅಧಿಕಾರ ಸ್ವೀಕಾರ

Update: 2019-08-20 16:03 GMT

ಉಡುಪಿ, ಆ.20: ಉಡುಪಿ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಜಿ.ಜಗದೀಶ್  ಅಧಿಕಾರ ಸ್ವೀಕರಿಸಿದ್ದಾರೆ. ಕಳೆದ ಫೆ.7ರಂದು ಜಿಲ್ಲಾಧಿಕಾರಿಯಾಗಿ ಕಾರ್ಯಭಾರ ವಹಿಸಿಕೊಂಡ ನಿರ್ಗಮಿತ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಅಧಿಕಾರವನ್ನು ಹಸ್ತಾಂತರಿಸಿದರು. ಅಪರ ಜಿಲ್ಲಾಧಿಕಾರಿ ವಿದ್ಯಾಕುಮಾರಿ ಉಪಸ್ಥಿತರಿದ್ದರು.

ಶಿವಮೊಗ್ಗ ಜಿಲ್ಲೆ ಸೊರಬದವರಾದ 45ರ ಹರೆಯದ ಐಎಎಸ್ ಅಧಿಕಾರಿ ಜಿ.ಜಗದೀಶ್ ಅವರು ಕೋಲಾರ ಜಿಪಂನ ಮುಖ್ಯ ಕಾರ್ಯನಿರ್ವಹಣಾಧಿ ಕಾರಿಯಾಗಿ ಇಲ್ಲಿಗೆ ವರ್ಗಾವಣೆಗೊಂಡಿದ್ದಾರೆ. 2006-07ರ ಅವಧಿಯಲ್ಲಿ ಉಡುಪಿ ಜಿಲ್ಲಾಧಿಕಾರಿ ಕಚೇರಿಯಲ್ಲೇ ಅಂದು ಜಿಲ್ಲಾಧಿಕಾರಿಯಾಗಿದ್ದ ವಿ. ಪೊನ್ನುರಾಜ್, ಬಳಿಕ ಹೇಮಲತಾ ಅವರ ಕೈಕೆಳಗೆ ಪ್ರೊಬೇಷನರಿಯಾಗಿ ಕೆಲಸ ಮಾಡಿದ್ದ ಅವರು ಅಂದು ಕುಂದಾಪುರದಲ್ಲಿ ಎಸಿ, ತಹಶೀಲ್ದಾರ್ ಹಾಗೂ ಇಒ ಆಗಿಯೂ ಕಂದಾಯ ಇಲಾಖೆಯಲ್ಲಿ ವಿಶೇಷ ಪರಿಣಿತಿ ಪಡೆದಿದ್ದರು.

ಸೊರಬದಲ್ಲೇ ತನ್ನ ಪ್ರಾಥಮಿಕದಿಂದ ಪದವಿವರೆಗಿನ ವಿದ್ಯಾಭ್ಯಾಸ ಮಾಡಿದ್ದ ಜಗದೀಶ್, ಬಿಎಡ್ ಹಾಗೂ ಶಿವಮೊಗ್ಗದ ಕುವೆಂಪು ವಿವಿಯಿಂದ ರಾಜ್ಯಶಾಸ್ತ್ರ ದಲ್ಲಿ ಮೂರನೇ ರ್ಯಾಂಕ್‌ನೊಂದಿಗೆ ಸ್ನಾತಕೋತ್ತರ ಪದವಿ ಪಡೆದಿದ್ದರು. ಬಳಿಕ ಎರಡು ವರ್ಷ ಕಡೂರಿನ ಮೊರಾರ್ಜಿ ದೇಸಾಯಿ ಮಾದರಿ ವಸತಿ ಶಾಲೆಯ ಪ್ರಾಂಶುಪಾಲರಾಗಿ ಕಾರ್ಯನಿರ್ವಹಿಸಿದ್ದಾಗ ಕೆಎಎಸ್‌ನಲ್ಲಿ ಉಪವಿಭಾಗಾಧಿಕಾರಿಯಾಗಿ ಆಯ್ಕೆಯಾಗಿದ್ದರು.

ಉಡುಪಿಯಲ್ಲಿ ಪ್ರೋಬೇಷನರಿ ಮುಗಿಸಿದ ಬಳಿಕ ಸವಣೂರು, ಶಿರಸಿ, ಹಾವೇರಿಗಳಲ್ಲಿ ಎಸಿಯಾಗಿ, 2013ರಿಂದ 15ರವರೆಗೆ ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ಉಪಕಾರ್ಯದರ್ಶಿಯಾಗಿ 15-16ರಲ್ಲಿ ಸಿದ್ಧರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಅರಣ್ಯ ಸಚಿವರ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದರು.

ಬಳಿಕ ಜಗದೀಶ್ ಮೈಸೂರು ಮಹಾನಗರ ಪಾಲಿಕೆ ಕಮಿಷನರ್ ಆಗಿ ಎರಡು ವರ್ಷ ಕರ್ತವ್ಯನಿರ್ವಹಿಸಿದ ಬಳಿಕ ಹಾಸನ ಮತ್ತು ಕೋಲಾರ ಜಿಪಂ ಗಳಲ್ಲಿ ಸಿಇಓ ಆಗಿದ್ದರು. ಇದೀಗ ಕಳೆದ ಎರಡು ವರ್ಷಗಳಿಂದ ನಾಲ್ಕನೇ ಹುದ್ದೆಯನ್ನು ಅವರು ಉಡುಪಿಯಲ್ಲಿ ವಹಿಸಿಕೊಂಡಿದ್ದಾರೆ.

ಹೊಸ ಅನುಭವ: ಈವರೆಗೆ ಕಂದಾಯ ಇಲಾಖೆ ಹಾಗೂ ಅರಣ್ಯ ಇಲಾಖೆಗಳ ಕುರಿತಂತೆ ಸಾಕಷ್ಟು ಅನುಭವ ಪಡೆದಿದ್ದರೂ, ಜಿಲ್ಲೆಯೊಂದರ ಜಿಲ್ಲಾಧಿಕಾರಿಯಾಗಿ ಮೊದಲ ಬಾರಿ ಅದಿಕಾರಿ ವಹಿಸಿಕೊಂಡಿರುವುದರಿಂದ ನನಗಿದು ಹೊಸ ಅನುಭವ. ಉಡುಪಿಯ ಮಟ್ಟಿಗೆ ಕಂದಾಯ ವಿಷಯಗಳಲ್ಲಿ ಸಾಕಷ್ಟು ತಿಳಿದುಕೊಂಡಿದ್ದರೂ, ಉಳಿದಂತೆ ನಾನು ಇನ್ನಷ್ಟೇ ತಿಳಿದುಕೊಳ್ಳ ಬೇಕಿದೆ ಎಂದು ಅಧಿಕಾರ ವಹಿಸಿಕೊಂಡ ಬಳಿಕ ಅವರು ಸುದ್ದಿಗಾರರಿಗೆ ತಿಳಿಸಿದರು.

ಹಾಸನದಲ್ಲಿ ಸಿಇಒ ಆಗಿ ಹಾಗೂ ಕೋಲಾರದಲ್ಲಿ 11 ತಿಂಗಳ ಆಡಳಿತಾ ನುಭವ ಇದ್ದರೂ, ಅಲ್ಲಿನ ಸಮಸ್ಯೆಗಳಿಗೂ ಇಲ್ಲಿಗೂ ತುಂಬಾ ವ್ಯತ್ಯಾಸವಿದೆ. ಕೋಲಾರದಲ್ಲಿ ಸಿಇಒ ಆಗಿ ನಾನು ಮಾಡಿದ ಕೆಲಸದ ಬಗ್ಗೆ ತೃಪ್ತಿ ಇದೆ. ಅಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಸಾಕಷ್ಟು ಶ್ರಮಿಸಿದ್ದೇನೆ. 600ಕ್ಕೂ ಅಧಿಕ ಚೆಕ್‌ಡ್ಯಾಮ್ ನಿರ್ಮಿಸಿದ್ದು, ಎಲ್ಲಾ ಕಲ್ಯಾಣಿಗಳ ಪುನರುಜ್ಜೀನಗೊಳಿಸಿ ದ್ದೇನೆ ಎಂದರು. ಅದೇ ರೀತಿ ರೇಷ್ಮೆ ಬೆಳೆಗಾರರಿಗೆ ಉದ್ಯೋಗ ಖಾತ್ರಿ ಯೋಜನೆಯಡಿ 25 ಕೋಟಿ ರೂ.ಗಳನ್ನು ನೀಡಿದ್ದೇವೆ ಎಂದರು.

ಇಲ್ಲಿನ ಸಮಸ್ಯೆಗಳ ಕುರಿತು ಇನ್ನಷ್ಟೆ ಅರಿಯಬೇಕಿದೆ. ಡೀಮ್ಡ್ ಪಾರೆಸ್ಟ್, ಹಕ್ಕುಪತ್ರ ವಿತರಣೆ, ಮರಳು ಸಮಸ್ಯೆಗಳ ಕುರಿತು ಅಧ್ಯಯನ ನಡೆಸಿ ಕಾನೂನು ವ್ಯಾಪ್ತಿಯಲ್ಲಿ ಖಂಡಿತ ಅದನ್ನು ಬಗೆಹರಿಸಲು ಪ್ರಯತ್ನಿಸುವುದಾಗಿ ನುಡಿದರು.

ಉಡುಪಿಯನ್ನೇ ಕೇಳಿ ಬಂದಿದ್ದೇನೆ

ಉಡುಪಿಗೆ ಈ ಪೋಸ್ಟಿಂಗ್‌ನ್ನು ನಾನಾಗೇ ಕೇಳಿ ಪಡೆದಿದ್ದೇನೆ. 2018ರಲ್ಲಿ ನನಗೆ ಕೆಎಎಸ್‌ನಿಂದ ಐಎಎಸ್‌ಗೆ ಬಡ್ತಿ ದೊರಕಿದ್ದು, ಆಗ ಜಿಲ್ಲಾಧಿಕಾರಿ ಹುದ್ದೆಯ ಅವಕಾಶ ದೊರೆತಾಗ ಉಡುಪಿಯನ್ನು ಕಳೆದ ಬಾರಿಯೇ (ಫೆಬ್ರವರಿ ತಿಂಗಳಲ್ಲಿ ಹೆಪ್ಸಿಬಾ ವರ್ಗಾವಣೆ ಸಂದರ್ಭ) ಕೇಳಿದ್ದೆ. ಆದರೆ ಆಗ ಕೆಲವು ಕಾರಣಗಳಿಂದ ಸಿಗದಿದ್ದರೂ ಈಗ ಸಿಕ್ಕಿದೆ ಎಂದರು.

ಮುಂದೆ ನಾನು ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸಬೇಕಿರುವುದರಿಂದ ಒಂದು ಉತ್ತಮ ಜಿಲ್ಲೆಯಿಂದ ಆರಂಭಿಸಲು ಉಡುಪಿಯನ್ನು ಆಯ್ಕೆ ಮಾಡಿ ದ್ದೇನೆ. ಇಲ್ಲಿ ವ್ಯವಸ್ಥೆ ಚೆನ್ನಾಗಿದೆ. ಜನರು ಹೆಚ್ಚು ಬುದ್ಧಿವಂತರು. ಕಾನೂನು ಅರಿವು ಹೊಂದಿದ್ದಾರೆ. ಇದರಿಂದ ನನಗೆ ಆಡಳಿತದಲ್ಲಿ ಹೆಚ್ಚು ಅನುಭವ ಪಡೆಯಲು ಸಾಧ್ಯವಾಗುವ ನಿರೀಕ್ಷೆ ಇದೆ. ಅಲ್ಲದೇ ಇಲ್ಲಿ ಶೈಕ್ಷಣಿಕ ಮಟ್ಟವೂ ಚೆನ್ನಾಗಿರುವುದರಿಂದ ಮಕ್ಕಳ ವಿದ್ಯಾಭ್ಯಾಸಕ್ಕೂ ಇದು ಸೂಕ್ತ ಎಂದು ಭಾವಿಸಿದ್ದೇನೆ ಎಂದರು.

ದಿಢೀರ್ ವರ್ಗಾವಣೆಗೆ ಮನದೊಳಗೆ ಬೇಸರ

ಎಲ್ಲರ ಸಹಕಾರದಿಂದ ಒಳ್ಳೆ ಕೆಲಸ ಮಾಡಲು ಸಾಧ್ಯವಾಗಿದೆ: ಹೆಪ್ಸಿಬಾ

ದಿಢೀರ್ ಆಗಿ ಆದ ವರ್ಗಾವಣೆಗೆ ಮನಗೊಳಗೆ ಬೇಸರದ ಛಾಯೆ ಇದ್ದರೂ, ಎಲ್ಲರೊಂದಿಗೆ ಎಂದಿನಂತೆ ನಗುನಗುತ್ತಾ ಮಾತನಾಡಿದ ನಿರ್ಗಮನ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ, 6-7 ತಿಂಗಳ ಅಧಿಕಾರಾವಧಿಯಲ್ಲಿ ಜಿಲ್ಲೆಯ ಎಲ್ಲರ ಸಹಕಾರದಿಂದ ಒಳ್ಳೆ ಕೆಲಸ ಮಾಡಲು ಸಾಧ್ಯವಾಗಿದೆ ಎಂದರು.

ಜಿಲ್ಲಾಧಿಕಾರಿಯಾಗಿ ಬಂದ ಪ್ರಾರಂಭದಲ್ಲೇ ಎದುರಾದ ಲೋಕಸಭಾ ಚುನಾವಣೆಯನ್ನು ಯಶಸ್ವಿಯಾಗಿ ಮುಗಿಸಲು ಎಲ್ಲರ ಸಹಕಾರ ಹಾಗೂ ಸ ಸಮನ್ವಯತೆಯಿಂದ ಸಾದ್ಯವಾಗಿದೆ. ಅಧಿಕಾರಾವಧಿಯಲ್ಲಿ ಅನುಭವ ಚೆನ್ನಾಗಿತ್ತು ಎಂದರು. ಟ್ರಾಫಿಕ್ ನಿರ್ವಹಣೆ ಬಗ್ಗೆ ಎಸ್ಪಿಯವರೊಂದಿಗೆ ನಾವು ಯೋಜನೆಯೊಂದನ್ನು ರೂಪಿಸಿದ್ದೇವೆ. ಅದು ಅನುಷ್ಠಾನಗೊಳ್ಳಬಹುದು ಎಂದು ಹೇಳಿದರು.

ಅದೇ ರೀತಿ ಸ್ವಚ್ಛ ಭಾರತ ಅಭಿಯಾನದಲ್ಲಿ ಎಸ್‌ಎಲ್‌ಆರ್‌ಎಂಗಳ ನಿರ್ವಹಣೆಗೆ ಜಿಲ್ಲೆಯ 20ರಿಂದ 25 ಎ ಮತ್ತು ಬಿ ಗ್ರೇಡ್ ದೇವಸ್ಥಾನಗಳಿಂದ ತಲಾ 3ರಿಂದ 5 ಲಕ್ಷ ರೂ.ಗಳನ್ನು ಸಂಗ್ರಹಿಸುವ ಮೂಲಕ ಒಟ್ಟು ಒಂದು ಕೋಟಿ ರೂ.ಸಂಗ್ರಹಿಸಲು ನಿರ್ಧರಿಸಲಾಗಿದೆ. ಅದು ಸಹ ಶೀಘ್ರ ಅನುಷ್ಠಾನ ಗೊಳ್ಳಬಹುದು. ಉಡುಪಿಯಲ್ಲಿ ಪ್ರಾರಂಭಿಸಿದ ಉಡುಪಿ ಹೆಲ್ಫ್ ಆ್ಯಪ್ ಯಶಸ್ವಿಯಾಗಿದ್ದು, ಅದನ್ನು ರಾಜ್ಯಾದ್ಯಂತ ವಿಸ್ತರಿಸುವ ಪೂರ್ವಭಾವಿ ಕೆಲಸ ನಡೆದಿದೆ.

ಅದೇ ರೀತಿ ದ.ಕ.ಜಿಲ್ಲೆಯಲ್ಲಿ ಪ್ರಾರಂಭಿಸಿದ ಸ್ಯಾಂಡ್ ಬಜಾರ್ ಆ್ಯಪ್‌ನ್ನು ಇಲ್ಲಿಗೆ ಅಳವಡಿಸುವ ಕಾರ್ಯ ನಡೆದಿದೆ. ಇನ್ನು ಮರಳುಗಾರಿಕೆ ಹಾಗೂ ಗಣಿಗಾರಿಕೆ ಕುರಿತು ಕೇಳಿದ ಪ್ರಶ್ನೆಗೆ ಕಾನೂನಾತ್ಮಕವಾಗಿ ಏನು ಮಾಡಲು ಸಾಧ್ಯವೊ ಅದನ್ನು ಮಾಡಿದ್ದೇವೆ. ಸಿಆರ್‌ಝಡ್ ಪ್ರದೇಶದ ಮರಳುಗಾರಿಕೆ ಕುರಿತಂತೆ ಏಳು ಸದಸ್ಯರ ಸಮಿತಿಯಲ್ಲಿ ಚರ್ಚೆ ಮಾಡಿ, ಕಾನೂನು ರೀತಿಯಲ್ಲಿ ಮುಂದುವರಿಯಲು ನಿರ್ಧರಿಸಲಾಗಿತ್ತು ಎಂದರು.

ಹೆಪ್ಸಿಬಾ ರಾಣಿ ಅವರು ಟಿ.ವೆಂಕಟೇಶ್, ಡಾ.ಮುದ್ದುಮೋಹನ್, ಪಟ್ಟಣಶೆಟ್ಟಿ ಅವರಂತೆ ಅಧಿಕಾರಿ ವಹಿಸಿಕೊಂಡ ಎಂಟು ತಿಂಗಳೊಳಗೆ ವರ್ಗಾವಣೆಗೊಂಡಿದ್ದಾರೆ.2016ರ ನಂತರ ಉಡುಪಿ ಜಿಲ್ಲೆಗೆ ಬಂದ ಏಳನೇ ಜಿಲ್ಲಾಧಿಕಾರಿ ಜಿ.ಜಗದೀಶ್ ಆಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News