ಮಂದಾರದಲ್ಲಿ ಪಚ್ಚನಾಡಿ ತ್ಯಾಜ್ಯರಾಶಿಯ ಅವಾಂತರ: ಕೊಯಮುತ್ತೂರು ಅಧ್ಯಯನ ತಂಡದಿಂದ ವರದಿ ಸಲ್ಲಿಕೆ

Update: 2019-08-20 16:06 GMT

ಮಂಗಳೂರು, ಆ.20: ನಗರದ ಹೊರವಲಯ ಮಂದಾರದಲ್ಲಿ ಪಚ್ಚನಾಡಿಯ ಡಂಪಿಂಗ್ ಯಾರ್ಡ್‌ನಲ್ಲಿನ ತ್ಯಾಜ್ಯರಾಶಿ ಹೆಚ್ಚಿನ ಪ್ರಮಾಣದಲ್ಲೇ ಅವಾಂತರ ಸೃಷ್ಟಿಸಿತ್ತು. ಇದರಿಂದ ಮಂದಾರ ಗ್ರಾಮಸ್ಥರು ಸಂಕಷ್ಟಕ್ಕೊಳಗಾಗಿದ್ದರು. ತ್ಯಾಜ್ಯರಾಶಿ ಸಮಸ್ಯೆಯ ಅಧ್ಯಯನ ನಡೆಸಲು ಬಂದಿದ್ದ ಕೊಯಮುತ್ತೂರಿನ ಅಧ್ಯಯನ ತಂಡ ಯೋಜನಾ ವರದಿಯನ್ನು ದ.ಕ. ಜಿಲ್ಲಾಡಳಿತ ಹಾಗೂ ಮಂಗಳೂರು ಮಹಾನಗರ ಪಾಲಿಕೆಗೆ ಮಂಗಳವಾರ ಸಲ್ಲಿಸಿದೆ.

ಮಂದಾರ ವ್ಯಾಪ್ತಿಯಲ್ಲಿ ಹರಡಿರುವ ತ್ಯಾಜ್ಯ ವಿಲೇವಾರಿ ಮಾಡುವ ಸಾಧ್ಯತೆಗಳ ಬಗ್ಗೆ ವಿವಿಧ ಹಂತಗಳಲ್ಲಿ ಅಧ್ಯಯನ ನಡೆಸಲು ಈಗಾಗಲೇ ತಜ್ಞರ ತಂಡವೊಂದು ಆಗಮಿಸಿ ವರದಿ ಸಲ್ಲಿಸಿದೆ. ಮಂಗಳವಾರ ಕೊಯಮತ್ತೂರಿನ ಸುಧೀರ್ ಜೈಸ್ವಾಲ್ ನೇತೃತ್ವದ ಮತ್ತೊಂದು ತಂಡವು ಯೋಜನಾ ವರದಿ ಸಲ್ಲಿಸಿದೆ.

ಪಚ್ಚನಾಡಿಯ ತ್ಯಾಜ್ಯರಾಶಿಯನ್ನು ‘ಬೇಲಿಂಗ್ ಯುನಿಟ್’ ಸಹಾಯದಿಂದ ತಲಾ ಒಂದೊಂದು ಟನ್ ಗಾತ್ರದ ಬಾಕ್ಸ್ ಮಾದರಿಯಲ್ಲಿ ಹಾಕಿ ಅದನ್ನು ಕಂಪ್ರೆಸ್ ಯಂತ್ರದ ಮೂಲಕ ಪುಡಿ ಮಾಡಿ ಮತ್ತೆ ಡಂಪಿಂಗ್ ಯಾರ್ಡ್‌ಗೆ ಕೇಬಲ್ ಮಾದರಿಯಲ್ಲಿ ಎಳೆದು ತರುವ ವಿನೂತನ ಪ್ರಯೋಗದ ಬಗ್ಗೆ ಸುಧೀರ್ ಜೈಸ್ವಾಲ್ ನೇತೃತ್ವದ ತಂಡ ವಿವರವಾದ ವರದಿ ನೀಡಿದೆ.

ಎರಡು ಮೂರು ಬುಲ್ಡೋಜರ್, 25ರಷ್ಟು ಕಾರ್ಮಿಕರು ಹಾಗೂ ಯಂತ್ರೋಪಕರಣವಿದ್ದರೆ ಮಾತ್ರ ತ್ಯಾಜ್ಯ ವಿಲೇವಾರಿ ಮಾಡಲಾಗುತ್ತದೆ. ಪ್ರತೀ ಗಂಟೆಗೆ 10 ಟನ್‌ನಂತೆ ದಿನಕ್ಕೆ 100 ಟನ್ ತ್ಯಾಜ್ಯವನ್ನು ವಿಲೇವಾರಿ ಮಾಡಬಹುದು. ಎರಡು ತಿಂಗಳೊಳಗೆ ಪೂರ್ಣವಾಗಿ ತ್ಯಾಜ್ಯ ತೆಗೆಯಬಹುದು ಎಂದು ವರದಿಯಲ್ಲಿ ವಿವರಿಸಲಾಗಿದೆ.

ವರದಿ ಪರಿಶೀಲನೆ: ಮಂದಾರ ಪ್ರದೇಶದಲ್ಲಿ ಅವಾಂತರ ಸೃಷ್ಟಿಸಿರುವ ತ್ಯಾಜ್ಯವನ್ನು ವಿಲೇವಾರಿ ಕ್ರಮದ ಬಗ್ಗೆ ಕೊಯಮುತ್ತೂರು ತಜ್ಞರ ಅಧ್ಯಯನ ತಂಡ ಸ್ಥಳಕ್ಕೆ ಭೇಟಿ ನೀಡಿ ನೀಡಿತ್ತು. ವರದಿಗಳನ್ನು ಜಿಲ್ಲಾಡಳಿತವು ಕೂಲಂಕಷವಾಗಿ ಪರಿಶೀಲನೆ ನಡೆಸಲಿದೆ ಎಂದು ಮನಪಾ ಆಯುಕ್ತ ಮುಹಮ್ಮದ್ ನಝೀರ್ ತಿಳಿಸಿದ್ದಾರೆ.

ಕೊಯಮುತ್ತೂರಿನ ಅಧ್ಯಯನ ತಂಡ ಮಂಗಳವಾರ ಮಂದಾರಕ್ಕೆ ಆಗಮಿಸಿದ ಸಂದರ್ಭ ಮನಪಾ ಆಯುಕ್ತ ಮುಹಮ್ಮದ್ ನಝೀರ್, ಪರಿಸರ ಇಂಜಿನಿಯರ್ ಮಧು, ಮಾಜಿ ಮೇಯರ್ ಭಾಸ್ಕರ್ ಕೆ. ಮುಂತಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News