ಬ್ರಾಹ್ಮಣ ಶಾಹಿಯಿಂದ ಮೂಲ ರಾಮಯಾಣಕ್ಕೆ ಹಾನಿ: ಪ್ರಸನ್ನ ಹೆಗ್ಗೋಡು

Update: 2019-08-20 16:26 GMT

ಉಡುಪಿ, ಆ.20: 2000 ವರ್ಷಗಳ ಕಾಲ ರಾಮಾಯಣ ಬ್ರಾಹ್ಮಣಶಾಹಿ ಕೈಯಲ್ಲಿದ್ದ ಪರಿಣಾಮ ಅದರ ಮೂಲಕ್ಕೆ ಹಾನಿಯಾಗುವ ಸಾವಿರಾರು ಅನಗತ್ಯ ವಿಚಾರಗಳನ್ನು ಸೇರಿಸಲಾಗಿದೆ. ಹೀಗೆ ನಾವು ಹಠ ಮಾಡಿ ರಾಮನನ್ನು ದೇವರ ನ್ನಾಗಿಸಲು ಹೊರಟರೆ ರಾಮಯಾಣ ಕೃತಿಗೆ ಅಪಚಾರ ಎಸಗಿದಂತಾಗುತ್ತದೆ ಎಂದು ಪ್ರಸನ್ನ ಹೆಗ್ಗೋಡು ಹೇಳಿದ್ದಾರೆ.

ಮುರಾರಿ ಬಲ್ಲಾಳ್ ಚಿಂತನ ಟ್ರಸ್ಟ್ ಹಾಗೂ ಉಡುಪಿ ರಥಬೀದಿ ಗೆಳೆಯರು ವತಿಯಿಂದ ಮಂಗಳವಾರ ಅಂಬಲಪಾಡಿಯಲ್ಲಿರುವ ಮುರಾರಿ ಬಲ್ಲಾಳರ ನಿವಾಸ ‘ಮಾನಸ’ದಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡುತಿದ್ದರು.

ರಾಮ ಕಥನವೇ ನಿಜ ಹೊರತು ಇಂದು ಆಕ್ರೋಶವಾಗಿ ತಿರುಗಿ ನಿಂತಿರುವ ರಾಮ ನಿಜ ಅಲ್ಲ. ರಾಮಕಥನ ಮತ್ತು ಗ್ರಾಮ ಕಥನವನ್ನು ಒಟ್ಟಿಗೆ ನೋಡಿರುವ ಬಹಳ ದೊಡ್ಡ ಪರಂಪರೆ ನಮ್ಮ ದೇಶದಲ್ಲಿ ಇದೆ. ಆದರೆ ನಾವು ಆ ಪರಂಪರೆ ಯನ್ನು ಕಡೆಗಣಿಸಿ ದೊಡ್ಡ ತಪ್ಪು ಮಾಡಿದ್ದೇವೆ ಎಂದು ಅವರು ಹೇಳಿದರು.

ಪ್ರಕೃತಿ ಮತ್ತು ಪುರುಷ(ಮನುಷ್ಯ) ಪ್ರೀತಿಪೂರ್ವಕ ಸಹಬಾಳ್ವೆ ನಡೆಸಬೇಕು ಎಂಬುದು ರಾಮಾಯಣದ ಆಶಯ. ಇಂದು ಈ ಆಶಯ ಅತ್ಯಂತ ಮುಖ್ಯ ವಾಗಿದೆ. ಯಾಕೆಂದರೆ ಇಂದು ಮಾನವ ಸಭ್ಯತೆಯು ಈ ಪ್ರೀತಿಪೂರ್ವಕ ಸಹಬಾಳ್ವೆಯನ್ನು ನಾಶ ಮಾಡಿದಷ್ಟು ಹಿಂದಿನ ಲಕ್ಷಾಂತರ ವರ್ಷಗಳಲ್ಲಿ ಎಂದೂ ಮಾಡಿಲ್ಲ. ಹೀಗೆ ಮನುಷ್ಯ ಪ್ರಕೃತಿಯಿಂದ ಬೇರ್ಪಟ್ಟ ಪರಿಣಾಮ ಪ್ರಕೃತಿಯ ಮೇಲೆ ಹಿಂಸೆಗಳು ನಡೆಯುತ್ತಿವೆ ಎಂದರು.

ಆಧುನಿಕ ಬುದ್ದಿಜೀವಿಗಳು ರಾಮನ ಮಿತಿಯನ್ನು ರಾಮಾಯಣದ ಮಿತಿ ಎಂಬುದಾಗಿ ರಾಮಾಯಣವನ್ನೇ ತಿರಸ್ಕರಿಸಿದರೆ, ವೈದಿಕಶಾಹಿಯು ರಾಮನ ಮಿತಿಗೆ ತಿಪ್ಪೇ ಸಾರಿಸಿದೆ. ಪುರೋಹಿತಶಾಹಿಗೆ ಬೇಕಾಗಿರುವುದು ಸಾಂಕೇತಿಕ ರಾಮ, ಮಂತ್ರದಲ್ಲಿ ಹಾಗೂ ಸಂಸ್ಕೃತದಲ್ಲಿರುವ ರಾಮಯಾಣ ಮತ್ತು ದೇವರಾದ ರಾಮ. ವೈಚಾರಿಕ ಜಗತ್ತು ಮಾಡಿರುವ ತಪ್ಪಿನಿಂದ ಇಂದು ಜನ ಬುದ್ದಿಜೀವಿಗಳನ್ನು ರಾಮನ ವಿರೋಧಿಗಳು ಎಂದು ತಿಳಿದುಕೊಳ್ಳುತ್ತಿದ್ದಾರೆ ಎಂದು ಅವರು ತಿಳಿಸಿದರು.

ನಾವು ಸಂವಿಧಾನ, ಕಾನೂನು, ಹಣದ ವಿಚಾರಗಳನ್ನು ರಾಜಕಾರಣಿಗಳಿಗೆ ಮತ್ತು ತ್ಯಾಗ, ದಾನ, ನೈತಿಕತೆಯನ್ನು ಧರ್ಮಕ್ಕೆ ವಹಿಸಿಕೊಟ್ಟಿದ್ದೇವೆ. ಈ ವಿಂಗಡನೆಯನ್ನು ನಾವು ಒಪ್ಪಬೇಕಾಗಿದೆ. ಈ ಎರಡನ್ನು ಒಬ್ಬರೇ ಮಾಡಲು ಸಾಧ್ಯವೇ ಇಲ್ಲ. ಯಾರೇ ಮುಖ್ಯ ಮಂತ್ರಿಯಾದರೂ ಭ್ರಷ್ಟ ವ್ಯವಸ್ಥೆ ಬದಲಾಯಿ ಸಲು ಆಗುವುದಿಲ್ಲ. ಅದರ ನಿರ್ಮೂಲನೆಗೆ ಧರ್ಮ ಎಂದು ಹೇಳುವ ನೈತಿಕ ವ್ಯವಸ್ಥೆ ಬೇರೆಯೇ ಬೇಕಾಗಿದೆ. ಕಟ್ಟುವ ಮತ್ತು ಕಳಚುವ ಕೆಲಸ ಪ್ರತ್ಯೇಕವಾಗಿ ಇರಬೇಕೆ ಹೊರತು ಒಟ್ಟಿಗೆ ಮಾಡಲು ಆಗಲ್ಲ ಎಂದು ಅವರು ಅಭಿಪ್ರಾಯ ಪಟ್ಟರು.

ಸಂವಾದದಲ್ಲಿ ಹಿರಿಯ ಚಿಂತಕ ಜಿ.ರಾಜಶೇಖರ್, ಪ್ರೊ.ವರದೇಶ್ ಹಿರೇ ಗಂಗೆ ಮೊದಲಾದವರು ಪಾಲ್ಗೊಂಡಿದ್ದರು. ಟ್ರಸ್ಟ್‌ನ ಸಂತೋಷ್ ಬಲ್ಲಾಳ್, ರಥಬೀದಿ ಗೆಳೆಯರು ಸಂಘಟನೆಯ ಅಧ್ಯಕ್ಷ ಪ್ರೊ.ಮುರಳೀಧರ ಉಪಾ ಧ್ಯಾಯ, ಪ್ರಧಾನ ಕಾರ್ಯದರ್ಶಿ ಪ್ರೊ.ಸುಬ್ರಹ್ಮಣ್ಯ ಜೋಶಿ ಉಪಸ್ಥಿತರಿದ್ದರು.

‘ಮಾನವ ಧರ್ಮ ಈ ಶತಮಾನದ ಅಗತ್ಯ’

ರಾಮ, ಬುದ್ದ, ಯೇಸು, ಪ್ರವಾದಿ ಪೈಗಂಬರರು ಹಾಗೂ ಇಡೀ ಸಂತ ಪರಂಪರೆ ಮಾನವ ಧರ್ಮವನ್ನು ಎತ್ತಿ ಹಿಡಿದಿದೆ. 21ನೆ ಶತಮಾನದಲ್ಲಿ ಧರ್ಮದ ಅಗತ್ಯ ಇದೆ. ಈ ಎಲ್ಲ ಪರಂಪರೆ ಎತ್ತಿ ಹಿಡಿದಿರುವ ಮಾನವ ಧರ್ಮ ಇಂದು ಅತಿಅಗತ್ಯವಾಗಿ ಬೇಕಾಗಿದೆ ಎಂದು ಪ್ರಸನ್ನ ಹೆಗ್ಗೋಡು ಹೇಳಿದರು.

 ರಾಮನ ಹೆಸರಿನಲ್ಲಿ ಮುಸ್ಲಿಮರ ಮೇಲೆ ದಾಳಿಗಳನ್ನು ನಡೆಸಲಾಗುತ್ತಿದೆ. ಹಿಂದೆ ಮುಸ್ಲಿಮ್ ರಾಜರು ಮಾಡಿದ ತಪ್ಪನ್ನು ಇಂದು ಇವರು ಮಾಡಲು ಹೊರಟಿದ್ದಾರೆ. ಹೀಗೆ ರಾಮನ ದುರ್ಬಳಕೆ ಮಾಡುತ್ತಿರುವುದು ಸರಿಯಲ್ಲ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News