ಹಾಲಾಡಿ ಶ್ರೀನಿವಾಸ ಶೆಟ್ಟರಿಗೆ ಮತ್ತೆ ಕೈತಪ್ಪಿದ ಸಚಿವ ಸ್ಥಾನ: ಬೆಂಬಲಿಗರಿಂದ ಆಕ್ರೋಶ

Update: 2019-08-20 16:35 GMT

ಕುಂದಾಪುರ, ಆ.20: ಕುಂದಾಪುರ ವಿಧಾನಸಭಾ ಕ್ಷೇತ್ರದಲ್ಲಿ ಐದು ಬಾರಿ ಶಾಸಕರಾಗಿ ಆಯ್ಕೆಯಾದ ಹಾಲಾಡಿ ಶ್ರೀನಿವಾಸ ಶೆಟ್ಟಿ ಈ ಬಾರಿಯೂ ಸಚಿವ ಸ್ಥಾನದಿಂದ ವಂಚಿತರಾಗಿದ್ದು, ಈ ಮೂಲಕ ಬಹಳ ನೀರಿಕ್ಷೆಯಲ್ಲಿದ್ದ ಹಾಲಾಡಿ ಬೆಂಬಲಿಗರ ಅಸಮಾಧಾ ಹಾಗೂ ಆಕ್ರೋಶಕ್ಕೆ ಕಾರಣವಾಗಿದೆ.

 ಜಿಲ್ಲೆಯ ಐವರು ಬಿಜೆಪಿ ಶಾಸಕರುಗಳ ಪೈಕಿ ಅತಿ ಹೆಚ್ಚು ಅಂದರೆ ಐದು ಬಾರಿ ಗೆದ್ದಿರುವ ಕುಂದಾಪುರದ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರಿಗೆ ಕಳೆದ ಬಾರಿಯಂತೆ ಈ ಬಾರಿಯೂ ಸಚಿವ ಸ್ಥಾನ ಕೈತಪ್ಪಿದೆ. ಇದರ ವಿರುದ್ಧ ಹಾಲಾಡಿ ಬೆಂಬಲಿಗರಿಂದ ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿ ಸರಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.

ಈ ಸಂಬಂಧ ಇಂದು ಬೆಳಗ್ಗೆ ಹಾಲಾಡಿಯಲ್ಲಿರುವ ಶಾಸಕರ ನಿವಾಸದಲ್ಲಿ ಬಿಜೆಪಿ ಪಕ್ಷದ ಮುಖಂಡರು, ಬೆಂಬಲಿಗರು, ಕಾರ್ಯಕರ್ತರು, ಹಿತೈಷಿಗಳು ಜಮಾಯಿಸಿದ್ದು, ಸಚಿವ ಸ್ಥಾನ ಸಿಗದ ಕುರಿತು ಶಾಸಕರೊಂದಿಗೆ ಸಮಾಲೋಚನೆ ನಡೆಸಿದ್ದಾರೆ. ಇದೇ ಸಂದರ್ಭದಲ್ಲಿ ಮುಂದಿನ ನಿರ್ಧಾರದ ಬ್ಗೆ ಚರ್ಚಿಸಿದ್ದಾರೆ ಎಂದು ತಿಳಿದುಬಂದಿದೆ.

ಈ ಕುರಿತು ತನ್ನ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಹಾಲಾಡಿ ಶ್ರೀನಿವಾಸ ಶೆಟ್ಟಿ, ಸಚಿವ ಸ್ಥಾನ ಸಿಗದ ಬಗ್ಗೆ ನಾನು ಈಗ ಏನು ಹೇಳುವುದಿಲ್ಲ. ಸಚಿವ ಸ್ಥಾನಕ್ಕಾಗಿ ನಾನು ಎಂದೂ ಕೂಡ ಲಾಬಿ ಮಾಡಿಲ್ಲ. ವಾಮ ಮಾರ್ಗ, ಗುಂಪುಗಾರಿಕೆ ಮೂಲಕ ಪ್ರಯತ್ನಿಸಿಲ್ಲ. ಸಚಿವರಾಗಲು ಏನೆಲ್ಲ ಅರ್ಹತೆ ಬೇಕು ಎಂಬುದು ನನಗೆ ಗೊತ್ತಿಲ್ಲ ಎಂದು ತನ್ನ ಅಸಮಾಧಾನ ಹೊರ ಹಾಕಿದರು.

ನನಗೆ ಮತ ಕೊಟ್ಟು ಗೆಲ್ಲಿಸಿದ ಮತದಾರರ ಬಳಿಗೆ ತೆರಳಿ ಅವರ ಅಭಿಪ್ರಾಯ ಪಡೆಯುತ್ತೇನೆ. ಸದ್ಯಕ್ಕೆ ಯಾವುದಕ್ಕೂ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ಪ್ರಮಾಣ ವಚನ ಸಮಾರಂಭಕ್ಕೆ ನನ್ನನ್ನು ಯಾರೂ ಕೂಡ ಕರೆದಿಲ್ಲ. ಹಾಗಾಗಿ ನಾನು ಬೆಂಗಳೂರಿಗೆ ಹೋಗಿಲ್ಲ ಎಂದರು.
ಎಲ್ಲ ಚುನಾವಣೆಯಲ್ಲೂ ಬಿಜೆಪಿ ಗೆಲುವಿಗೆ ಶ್ರಮಿಸಿದ್ದೇನೆ. ಸಚಿವ ಸ್ಥಾನ ವಂಚಿತರು ಬೆಂಗಳೂರಿನಲ್ಲಿ ಕರೆದ ಸಭೆಗೆ ನನಗೆ ಕರೆ ಮಾಡಿ ಕರೆದಿದ್ದರು. ಆದರೆ ನಾನು ಎಲ್ಲೂ ಹೋುವುದಿಲ್ಲ ಎಂದು ಅವರು ತಿಳಿಸಿದರು.

2012ರಲ್ಲಿ ಜಗದೀಶ್ ಶೆಟ್ಟರ್ ಮುಖ್ಯಮಂತ್ರಿಯಾಗಿದ್ದಾಗ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರಿಗೆ ಸಚಿವ ಸ್ಥಾನ ನೀಡುವುದಾಗಿ ಪ್ರಮಾಣವಚನಕ್ಕೆ ಬೆಂಗಳೂರಿಗೆ ಕರೆಸಿ ಕೊನೆಯ ಕ್ಷಣದಲ್ಲಿ ನಿರಾಕರಿಸಿ, ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಸಚಿವ ಸ್ಥಾನ ನೀಡಲಾಗಿತ್ತು. ಇದರಿಂದ ಮನನೊಂದ ಹಾಲಾಡಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ತೊರೆದು ಪಕ್ಷೇತರರಾಗಿ ಕಣಕ್ಕಿಳಿದು ಗೆಲುವು ಸಾಧಿಸಿದ್ದರು. ಕಳೆದ ವಿಧಾನಸಭಾ ಚುನಾ ವಣೆಯಲ್ಲಿ ಹಾಲಾಡಿ ಮತ್ತೆ ಬಿಜೆಪಿಗೆ ಸೇರ್ಪಡೆಗೊಂಡಿದ್ದರು.

ಕುಂದಾಪುರ ಕ್ಷೇತ್ರದಲ್ಲಿ ನಾಲ್ಕು ಬಾರಿ ಜಯ ಗಳಿಸಿದ್ದ ಪ್ರತಾಪ್‌ಚಂದ್ರ ಶೆಟ್ಟಿ ಅವರನ್ನು 1999ರಲ್ಲಿ ಮೊದಲ ಬಾರಿಗೆ ಸೋಲಿಸಿ ಶಾಸಕರಾಗಿ ಆಯ್ಕೆಯಾದ ಹಾಲಾಡಿ ಶ್ರೀನಿವಾಸ ಶೆಟ್ಟಿ, ನಂತರ 2004, 2008 ಹಾಗೂ 2018ರಲ್ಲಿ ಬಿಜೆಪಿಯಿಂದ ಗೆದ್ದು ಬಂದರು. 2013ರಲ್ಲಿ ಪಕೆ್ಷೀತರ ಶಾಸಕರಾಗಿ ಆಯ್ಕೆಯಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News