‘ಸಚಿವಗಿರಿ’ ರೇಸ್‌ನಲ್ಲಿ ಮತ್ತೆ ಹಾಲಾಡಿಯನ್ನು ಹಿಂದಿಕ್ಕಿದ ಕೋಟ

Update: 2019-08-20 16:51 GMT

ಉಡುಪಿ, ಆ.20: ಪಕ್ಷ ನಿಷ್ಠೆ, ಪಕ್ಷದ ‘ದಂಡನಾಯಕರ’ ಮನದಿಂಗಿತ ಅರಿತು ನಡೆಯುವ ಜಾಣತನ, ಬಡವರ ಬಗ್ಗೆ ಇರುವ ಕಾಳಜಿ ಇವೆಲ್ಲವೂ ಈವರೆಗೆ ವಿಧಾನಪರಿಷತ್‌ನಲ್ಲಿ ಪ್ರತಿಪಕ್ಷ ನಾಯಕರಾಗಿದ್ದ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಬಿಜೆಪಿ ಸರಕಾರದಲ್ಲಿ ಸತತ ಎರಡನೇ ಬಾರಿಗೆ ‘ಬಹುಜನರ’ ನಿರೀಕ್ಷೆಯ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರನ್ನು ಸಚಿವ ಪದವಿಯ ರೇಸ್‌ನಲ್ಲಿ ಹಿಂದಿಕ್ಕುವಲ್ಲಿ ಪ್ರಧಾ ಪಾತ್ರ ವಹಿಸಿವೆ.

ಇಂದಿನಂತೆ ಈ 2012ರಲ್ಲೂ ಕೋಟ ಶ್ರೀನಿವಾಸ ಪೂಜಾರಿ ಎಲ್ಲರ ನಿರೀಕ್ಷೆಗಳನ್ನು ತಲೆಕೆಳಗಾಗಿಸಿ ಕೊನೆಯ ಕ್ಷಣದಲ್ಲಿ ಸಚಿವ ಪದವಿಯ ಹೂಮಾಲೆಯನ್ನು ಕೊರಳಿಗೆ ಧರಿಸಿದ್ದರು. ಇಂದಿನಂತೆ ಅಂದು ಸಹ ಹಾಲಾಡಿ ಬೆಂಬಲಿಗರ ಆಕ್ರೋಶಕ್ಕೆ ತುತ್ತಾಗಿದ್ದರು. ಇಂದು ಸಹ ಅದರ ಪುನರಾವರ್ತನೆಯಾದರೂ, ಹಿಂದಿನ ಪ್ರಮಾಣದಲ್ಲಿ ಅಂದು ಕಂಡುಬಂದಿಲ್ಲ.

ಸಮಾಜದಲ್ಲಿ ತೀರಾ ಹಿಂದುಳಿದ ‘ಬಿಲ್ಲವ’ ಸಮುದಾಯಕ್ಕೆ ಸೇರಿದ್ದರೂ, ಕೋಟ ಅವರು ತಮಗೆ ಸಿಕ್ಕಿದ ಅವಕಾಶಗಳನ್ನು ಜಾಣತನದಿಂದ ಬಳಸಿಕೊಂಡು ಸಮಾಜದ ಪ್ರಮುಖ ರಾಜಕಾರಣಿಯಾಗಿ ಬೆಳಕಿಗೆ ಬಂದಿದ್ದಾರೆ. ಇದು ಅವರನ್ನು ನುರಿತ ರಾಜಕಾರಣಿ ಹಾಗೂ ಒಬ್ಬ ಸಾಮಾಜಿಕ ನ್ಯಾಯ ಹಾಗೂ ಪಂಚಾಯತ್ ರಾಜ್ ವ್ಯವಸ್ಥೆಯ ಬೆಂಬಲಿಗನನ್ನಾಗಿ ರೂಪಿಸಿದೆ. ಇವುಗಳ ಸಬಲೀಕರಣಕ್ಕೆ ಸಿಕ್ಕ ಸಣ್ಣ ಅವಕಾಶವನ್ನೂ ಬಳಸಿಕೊಳ್ಳುತಿದ್ದ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಸಚಿವ ಪದವಿಯ ರಿಯೂ ಎರಡನೇ ಬಾರಿ ಮುಡಿಗೇರಿದೆ.

ಪಂಚಾಯತ್ ರಾಜ್ ವ್ಯವಸ್ಥೆ, ಅಧಿಕಾರದ ವಿಕೇಂದ್ರೀಕರಣ ಹಾಗೂ ಸಾಮಾಜಿಕ ನ್ಯಾಯದ ಕುರಿತಂತೆ ಚೆನ್ನಾಗಿ ತಿಳಿದುಕೊಂಡು, ಅಧಿಕಾರ ಯುತವಾಗಿ ಮಾತನಾಡಬಲ್ಲ ರಾಜ್ಯದ ಈಗಿನ ಕೈಬೆರಳೆಣಿಕೆಯ ರಾಜಕಾರಣಿ ಗಳಲ್ಲಿ ಇವರು ಒಬ್ಬರು. ಅದೇ ರೀತಿ ದೇವರಾಜ ಅರಸು, ಅಬ್ದುಲ್ ನಜೀರ್‌ಸಾಬ್‌ರ ಅಭಿಮಾನಿಯಾಗಿ ಪಂಚಾಯತ್‌ರಾಜ್ ಕುರಿತಂತೆ ಎಲ್ಲೇ ವಿಚಾರಸಂಕಿರಣ, ಸಂವಾದ ನಡೆದರೂ ತಪ್ಪದೇ ಹಾಜರಾಗಿ ತನ್ನ ಅಭಿಪ್ರಾಯವನ್ನು ಮಂಡಿಸುವ ಕೋಟ ಶ್ರೀನಿವಾಸ ಪೂಜಾರಿ, ಇಂದಿನ ರಾಜಕಾರಣಿಗಳಲ್ಲಿ ಭಿನ್ನವಾಗಿಯೇ ಗುರುತಿಸಿಕೊಳ್ಳಲು ಬಯಸುತ್ತಾರೆ.

ಅಜಾತಶತ್ರು: ಯಾವುದೇ ಹಮ್ಮುಬಿಮ್ಮುಗಳಿಲ್ಲದೇ ಎಲ್ಲರೊಂದಿಗೆ ಸರಳವಾಗಿ ಬೆರೆತು ತನ್ನ ಕುಂದ್ರಾಪ ಕನ್ನಡದ ಮಾತುಗಳ ಮೂಲಕ ಎಲ್ಲರನ್ನೂ ಸೆಳೆಯುವ ಗುಣ ಕೋಟ ಶ್ರೀನಿವಾಸ ಪೂಜಾರಿ ಅವರಿಗಿದೆ. ಹೀಗಾಗಿ ಅವರನ್ನು ರಾಜಕೀಯ ಹಾಗೂ ಇನ್ನಿತರ ಕೆಲವು ಕಾರಣಗಳಿಗಾಗಿ ಟೀಕಿಸುವವ ರೊಂದಿಗೂ ಅವರು ಮಾತು ಬಿಟ್ಟವರಲ್ಲ. ಇದು ಅವರನ್ನು ಟೀಕಿಸುವ ಪತ್ರಕರ್ತರೂ ಸೇರಿದಂತೆ ಎಲ್ಲರ ಅನುಭವಕ್ಕೂ ಬಂದಿರುತ್ತದೆ.

‘ಪಕ್ಷದ ಕಾರಣಕ್ಕಾಗಿ ನನ್ನೊಂದಿಗೆ ಇವರು ಜಗಳವಾಡಿದರೂ ನನ್ನ ಹಿತೈಷಿಗಳಿವರು’ ಎಂದು ಅಂಥವರನ್ನು ನೋಡಿದಾಕ್ಷಣವೇ ಮಾತು ಆರಂಭಿಸುವ ಕೋಟ, ತನ್ನ ಎದುರಾಳಿಯೂ ಸೇರಿದಂತೆ ಯಾರನ್ನೂ ಬಹಿರಂಗ ವಾಗಿ ಟೀಕಿಸಿದವರಲ್ಲ. ಹೀಗಾಗಿ ಅವರು ‘ಅಜಾತಶತ್ರು’ ಎಂದೇ ಎಲ್ಲರಿಂದ ಕರೆಯಲ್ಪಡುತ್ತಾರೆ. ಕೆಲ ವರ್ಷಗಳ ಹಿಂದೆ ಉಡುಪಿಯಲ್ಲಿ ನಡೆದ ‘ಮಂದಾರ್ತಿ ಮೇಳ ಪ್ರಕರಣ’ದಲ್ಲಿ ಬಿಲ್ಲವ ಯಕ್ಷಗಾನ ಕಲಾವಿದರ ಪರವಾಗಿ ನಡೆದ ಹೋರಾಟದಲ್ಲಿ ಮುಂಚೂಣಿಯಲ್ಲಿ ಗುರುತಿಸಿಕೊಂಡ ಕರಾವಳಿಯ ಬಿಲ್ಲವ ನಾಯಕರಲ್ಲಿ ಇವರೂ ಒಬ್ಬರಾಗಿದ್ದರು.

ಕೋಟ ಪರಿಚಯ: 59 ವರ್ಷ ಪ್ರಾಯದ (ಜನನ: 1-1-1960) ಕೋಟ ಶ್ರೀನಿವಾಸ ಪೂಜಾರಿ ಕೋಟತಟ್ಟು ಗ್ರಾಮದ ಬಾರಿಕೆರೆಯವರು. ದಿ. ಅಣ್ಣಪ್ಪ ಪೂಜಾರಿ ಹಾಗೂ ಲಚ್ಚಿ ಪೂಜಾರ್ತಿ ದಂಪತಿಗಳ ಪುತ್ರನಾದ ಕೋಟ ಶ್ರೀನಿವಾಸ ಪೂಜಾರಿಯವರ ಪತ್ನಿ ಶಾಂತ. ಇವರಿಗೆ ಸ್ವಾತಿ (15), ಶಶಿಧರ್ (14) ಹಾಗೂ ಶೃತಿ (12) ಮಕ್ಕಳು.

ಆರಂಭದಲ್ಲಿ ದೇವರಾಜ ಅರಸು, ಬಂಗಾರಪ್ಪ ಅವರ ಬೆಂಬಲಿಗರಾಗಿ ರಾಜಕೀಯಕ್ಕಿಳಿದ ಕೋಟ ಶ್ರೀನಿವಾಸ ಪೂಜಾರಿ, ಆರಂಭದಲ್ಲಿ ಕಾಂತ್ರಿರಂಗ ಪಕ್ಷದಲ್ಲಿದ್ದರು. ಬಳಿಕ ಅವರು ಆ ಪಕ್ಷವನ್ನು ತೊರೆದು ಬಿಜೆಪಿ ಪಕ್ಷವನ್ನು ಸೇರಿದರು. ಇದಾದ ಬಳಿಕ ಅವರ ರಾಜಕೀಯ ಗತಿಚಕ್ರ ವೇಗವಾಗಿ ತಿರುಗತೊಡಗಿತು.

1993ರಲ್ಲಿ ಕೋಟತಟ್ಟು ಗ್ರಾಪಂ ಸದಸ್ಯರಾಗಿ ಆಯ್ಕೆಯಾದ ಅವರು ಪಂಚಾಯತ್ ಉಪಾಧ್ಯಕ್ಷರಾಗಿ ಚುನಾಯಿತರಾಗಿ ಜನರ ಪರವಾದ ಹಲವು ಕೆಲಸ ಮಾಡಿದರು. ಮುಂದೆ ಭಡ್ತಿ ಪಡೆದು 1995ರಲ್ಲಿ ತಾಪಂ ಸದಸ್ಯರಾಗಿ, 2006ರಲ್ಲಿ ಜಿಪಂ ಸದಸ್ಯರಾಗಿ ಆಯ್ಕೆಯಾದರು. ಜಿಪಂ ಸದಸ್ಯರಾಗಿರುವಾಗಲೇ 2007ರಲ್ಲಿ ಕೆ.ರಘುಪತಿ ಭಟ್ ಸ್ಥಾನದಲ್ಲಿ ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷರಾಗಿ 2010ರವರೆಗೆ ಕಾರ್ಯನಿರ್ವಹಿಸಿದರು.

ಬಿಜೆಪಿ ಜಿಲ್ಲಾಧ್ಯಕ್ಷರಾಗಿರುವಾಗಲೇ, ಕಾಂಗ್ರೆಸ್‌ನ ಬ್ಲೇಸಿಯಸ್ ಡಿಸೋಜರ ನಿಧನದಿಂದ ತೆರವಾದ ವಿಧಾನಪರಿಷತ್ ಸ್ಥಾನಕ್ಕೆ ಸ್ಥಳೀಯ ಸಂಸ್ಥೆಯಿಂದ ನಡೆದ ಚುನಾವಣೆಯಲ್ಲಿ ಬಿಜೆಪಿಯಿಂದ ಆಯ್ಕೆಯಾದ ಕೋಟ ಶ್ರೀನಿವಾಸ ಪೂಜಾರಿ, 2010ರಲ್ಲಿ ಅದೇ ಸ್ಥಾನಕ್ಕೆ ಅವಿರೋಧವಾಗಿ ಮರುಆಯ್ಕೆಯಾದರು. ಇದೀಗ ಅವರಿಗೆ ಎರಡನೇ ಬಾರಿ ಚಿವ ಸ್ಥಾನದ ಹಿರಿಮೆಯೂ ದೊರಕಿದೆ.

ಸರಳ ನಡೆ-ನುಡಿಯ, ಸರಳವಾಗಿ ಬದುಕು ನಡೆಸುತ್ತಿರುವ ಕೋಟ ಶ್ರೀನಿವಾಸ ಪೂಜಾರಿ, ದಲಿತರ, ಹಿಂದುಳಿದ ವರ್ಗದವರ, ಶೋಷಿತರ ಧ್ವನಿಯಾಗಿ ಗುರುತಿಸಿಕೊಳ್ಳಲು ಇಷ್ಟ ಪಡುತಿದ್ದರು. ಈಗಲೂ ಅವರು ಅದೇ ಮಾರ್ಗದಲ್ಲಿ ಮುಂದುವರಿುುವರೆಂಬ ವಿಶ್ವಾಸ ಜಿಲ್ಲೆಯ ಜನತೆಗೆ ಇದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News