ಬಿಜೆಪಿ ರಾಜ್ಯಾಧ್ಯಕ್ಷರಾಗಿ ನಳಿನ್ ನೇಮಕ: ಮಂಗಳೂರಲ್ಲಿ ಕಾರ್ಯಕರ್ತರ ಸಂಭ್ರಮಾಚರಣೆ

Update: 2019-08-20 16:55 GMT

ಮಂಗಳೂರು, ಆ.20: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಂಸದ ನಳಿನ್‌ಕುಮಾರ್ ಕಟೀಲ್ ಅವರು ಬಿಜೆಪಿಯ ನೂತನ ರಾಜ್ಯಾಧ್ಯಕ್ಷರಾಗಿ ನೇಮಕಗೊಂಡ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ಬಿಜೆಪಿ ಕಾರ್ಯಕರ್ತರಿಂದ ಸಂಭ್ರಮಾಚರಣೆ ಮುಗಿಲು ಮುಟ್ಟಿದೆ.

ಮಂಗಳೂರಿನ ಕೊಡಿಯಲ್ ಬೈಲ್‌ನ ಅಟಲ್ ಸೇವಾ ಕೇಂದ್ರದ ಶಾಸಕ ಡಿ.ವೇದವ್ಯಾಸ ಕಾಮತ್ ಅವರ ಕಚೇರಿ ಬಳಿ ಸೇರಿದ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಪಟ್ಟರು.

ಬಿಜೆಪಿ ರಾಜ್ಯಾಧ್ಯಕ್ಷ ಪಟ್ಟ: ದ.ಕ ಲೋಕಸಭಾ ಕ್ಷೇತ್ರದಿಂದ ಮೂರು ಬಾರಿ ಸತತವಾಗಿ ಬಿಜೆಪಿಯಿಂದ ಗೆದ್ದ ನಳಿನ್ ಕುಮಾರ್ ಕಟೀಲ್‌ಗೆ ರಾಜ್ಯಾಧ್ಯಕ್ಷ ಸ್ಥಾನ ಅರಸಿ ಬಂದಿದೆ. ಸಾಮಾನ್ಯ ಕಾರ್ಯಕರ್ತನಾಗಿ ಚುನಾವಣಾ ರಾಜಕೀಯ ಪ್ರವೇಶಿಸಿದ ನಳಿನ್ ಕುಮಾರ್ ಕಟೀಲ್ ಇದೀಗ ರಾಜ್ಯದ ಆಡಳಿತ ಪಕ್ಷದ ಸಾರಥ್ಯ ವಹಿಸಿಕೊಂಡಿದ್ದಾರೆ.

ಕಟೀಲ್ ಅವರು ಸುಳ್ಯ ತಾಲೂಕಿನ ಪೆರುವಾಜೆಯ ಮುಕ್ಕೂರು ಶಾಲೆಯಲ್ಲಿ ಪ್ರಾಥಮಿಕ ಹಾಗೂ ಪುತ್ತೂರಿನ ಸಂತ ಫಿಲೋಮಿನಾ ಹೈಸ್ಕೂಲ್‌ನಲ್ಲಿ ಪ್ರೌಢ ಶಿಕ್ಷಣ ಪೂರೈಸಿದ್ದರು. ಬಾಲ್ಯದಲ್ಲೇ ಆರೆಸ್ಸೆಸ್‌ನತ್ತ ಆಕರ್ಷಿತರಾದ ಅವರು 18ನೇ ವಯಸ್ಸಿಗೆ ಸಂಘದ ಪೂರ್ಣಾವಧಿ ಕಾರ್ಯಕರ್ತರಾಗಿದ್ದರು.

ವೃತ್ತಿಯಲ್ಲಿ ಕಟ್ಟಡ ನಿರ್ಮಾಣ ಗುತ್ತಿಗೆದಾರರಾಗಿದ್ದ ನಳಿನ್‌ಕುಮಾರ್ 12 ವರ್ಷಗಳ ಕಾಲ ಆರೆಸ್ಸೆಸ್ ಪ್ರಚಾರಕರಾಗಿ ಕಾರ್ಯ ನಿರ್ವಹಿಸಿದ್ದರು. ಧರ್ಮ ಜಾಗರಣಾ ವೇದಿಕೆ, ಕಿನ್ನಿಗೋಳಿ ಕೃಷಿಕರ ಕ್ಷೇಮಾಭಿವೃದ್ಧಿ ಸಂಘ, ಪರಿಸರ ಸಮಿತಿ, ಮಾತೃಭೂಮಿ ಸೊಸೈಟಿ, ಸಿದ್ದಿ ವಿನಾಯಕ ಸೇವಾ ಸಮಿತಿ ಸಹಿತ ವಿವಿಧ ಸಂಘಟನೆಗಳಲ್ಲಿ ಸಕ್ರಿಯರಾಗಿದ್ದರು.

ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ, ಪಾವಂಜೆಯಲ್ಲಿ ನಡೆದ ಅತ್ಯಪೂರ್ವ ಸೌತ್ರಾಮಣಿ ಗವಾಮಯನ ಯಾಗದ ಸಾರಥ್ಯ, 20ಕ್ಕೂ ಅಧಿಕ ದೇವಾಲಯಗಳ ಜೀಣೋದ್ಧಾರ ಸಮಿತಿಯ ಅಧ್ಯಕ್ಷರಾಗಿ ಧಾರ್ಮಿಕ ಸೇವೆ ನಡೆಸಿದರು.
 2004ರಲ್ಲಿ ಜಿಲ್ಲಾ ಬಿಜೆಪಿಯ ಸಂಘಟನಾ ಕಾರ್ಯದರ್ಶಿಯಾಗಿ ಆಯ್ಕೆಯಾದ ಅವರಿಗೆ 2009ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನ ಹಿರಿಯ ನಾಯಕ ಜನಾರ್ದನ ಪೂಜಾರಿ ವಿರುದ್ಧ ಸ್ಪರ್ಧಿಸುವ ಅವಕಾಶಬಂದಿತು. 40,420 ಮತಗಳ ಅಂತರದಿಂದ ಗೆದ್ದು ಸಂಸತ್ ಪ್ರವೇಶಿಸಿದರು. 2014ರಲ್ಲಿ ಮತ್ತೆ ಪೂಜಾರಿ ಅವರ ವಿರುದ್ದ 1,43,709 ಮತಗಳ ಅಂತರದಿಂದ ಗೆದ್ದು ಸಂಸತ್‌ಗೆ ಪುನರಾಯ್ಕೆಯಾದ ನಳಿನ್ ಕೇಂದ್ರ ಸರಕಾರದ ಕೃಷಿ ಸ್ಥಾಯಿ ಸಮಿತಿ, ತೆಂಗು ಅಭಿವೃದ್ದಿ ಮಂಡಳಿ, ನೆಹರೂ ಯುವ ಕೇಂದ್ರ, ಯೋಜನಾ ಸಮಿತಿ, ರಬ್ಬರ್ ಮಂಡಳಿ, ಬಂದರು ಮಂಡಳಿ ಸಹಿತ ವಿವಿಧ ಸಮಿತಿಗಳ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದಾರೆ. ರಾಜ್ಯ ಬಿಜೆಪಿಯ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದ ನಳಿನ್ ಕೇರಳ ರಾಜ್ಯದಲ್ಲಿ ಬಿಜೆಪಿಯ ಪ್ರಭಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

2018ರಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಹಿಂದೆ ದಕ್ಷಿಣ ಕನ್ನಡದಲ್ಲಿ ಇದ್ದ ಒಂದು ಕ್ಷೇತ್ರದಲ್ಲಿ ಏಳು ಮಂದಿಯನ್ನು ಗೆಲ್ಲಿಸಿಕೊಡುವ ಜವಾಬ್ದಾರಿಯಲ್ಲಿ ನಳಿನ್ ಯಶಸ್ವಿಯಾಗಿದ್ದರು. ನಳಿನ್ ಕುಮಾರ್ ಕಟೀಲ್ ಅವರು ಉತ್ತಮ ವಾಗ್ಮಿಯಾಗಿದ್ದರೂ ತಮ್ಮ ವಿವಾದಾತ್ಮಕ ಹೇಳಿಕೆ ಯಿಂದ ಹಲವು ಬಾರಿ ಸುದ್ದಿಯಾಗಿದ್ದಾರೆ. ‘ದ.ಕ ಜಿಲ್ಲೆಗೆ ಬೆಂಕಿ ಕೊಡಲಾಗುವುದು’ ಎಂಬ ಅವರ ಹೇಳಿಕೆ ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ಮತ್ತೊಮ್ಮೆ ನಾಥುರಾಮ್ ಗೋಡ್ಸೆ ಕುರಿತು ಮಾಡಿದ ಟ್ವೀಟ್ ಕೂಡ ವಿವಾದ ಸೃಷ್ಟಿಸಿ ಕ್ಷಮೆ ಕೋರುವಂತೆ ಆಗಿತ್ತು. ಸಾಮಾನ್ಯ ಕಾರ್ಯಕರ್ತನಾಗಿ ರಾಜಕೀಯ ಪ್ರವೇಶ ಮಾಡಿದ ನಳಿನ್ ಕುಮಾರ್ ಕಟೀಲ್ ಇದೀಗ ರಾಜ್ಯದ ಬಿಜೆಪಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News