ದ.ಕ.ಜಿಲ್ಲೆಯ ಶಾಸಕರಿಗೆ ಸಚಿವ ಸ್ಥಾನವಿಲ್ಲ: ಬಿಜೆಪಿ ಕಾರ್ಯಕರ್ತರಿಗೆ ಅತೃಪ್ತಿ

Update: 2019-08-20 17:11 GMT

ಮಂಗಳೂರು, ಎ.20: ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲಿ ಮಂಗಳೂರು ವಿಧಾನ ಸಭಾ ಕ್ಷೇತ್ರವನ್ನು ಹೊರತು ಬಿಜೆಪಿ ಎಲ್ಲಾ ಕ್ಷೇತ್ರಗಳಲ್ಲೂ ಜಯಗಳಿಸಿ ಮೇಲುಗೈ ಸಾಧಿಸಿದ್ದೂ ಅಲ್ಲದೆ ಬಳಿಕ ನಡೆದ ಲೋಕ ಸಭಾ ಚುನಾವಣೆಯಲ್ಲೂ ದಕ್ಷಿಣ ಕನ್ನಡ ಲೋಕ ಸಭಾ ಕ್ಷೇತ್ರದಲ್ಲಿ ಬಿಜೆಪಿ ನಿಚ್ಚಳ ಅಂತರದಲ್ಲಿ ಜಯಗಳಿಸಿದ್ದರೂ ಬಿ.ಎಸ್.ಯಡಿಯೂರಪ್ಪ ಸಚಿವ ಸಂಪುಟದಲ್ಲಿ ಜಿಲ್ಲೆಯ ಶಾಸಕರಿಗೆ ಸ್ಥಾನ ದೊರೆಯದೆ ಇರುವುದು ಬಿಜೆಪಿ ಕಾರ್ಯಕರ್ತರ ವಲಯದಲ್ಲಿ ಅತೃಪ್ತಿ, ಆಕ್ರೋಶಕ್ಕೆ ಕಾರಣವಾಗಿದೆ.

12 ಶಾಸಕರನ್ನು ಹೊಂದಿರುವ ದಕ್ಷಿಣ ಕನ್ನಡ ಜಿಲ್ಲೆಗೆ ಯಾವೂದೇ ಸಚಿವ ಸ್ಥಾನ ನೀಡದಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲೂ ಬಿಜೆಪಿ ಕಾರ್ಯಕರ್ತರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

ಅದರಲ್ಲೂ ಸುಳ್ಯ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಘಟಕದ ಪದಾಧಿಕಾರಿಗಳು ತಮ್ಮ ಶಾಸಕರು ಆರು ಬಾರಿ ಆಯ್ಕೆಯಾಗಿದ್ದರೂ ಅವರನ್ನು ಕಡೆಗಣಿಸಲಾಗಿದೆ. ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಆಗ್ರಹಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಯಾವ ಶಾಸಕರನ್ನು ಸಚಿವ ಸ್ಥಾನಕ್ಕೆ ಆಯ್ಕೆ ಮಾಡದಿರುವ ಬಗ್ಗೆ ಕಾರ್ಯಕರ್ತರು ವ್ಯಕ್ತ ಪಡಿಸಿರುವ ಅಸಮಾಧಾನದ ಹಿನ್ನೆಯಲ್ಲಿ ಜಿಲ್ಲೆಯ ಬಿಜೆಪಿ ಶಾಸಕರು ಪಕ್ಷದ ಮುಖಂಡರೊಂದಿಗೆ ಬುಧವಾರ ಮುಖ್ಯ ಮಂತ್ರಿಯನ್ನು ಭೇಟಿ ಮಾಡಿ ಸಮಾಲೋಚಿಸಲಿದ್ದಾರೆ ಎಂದು ಬಿಜೆಪಿ ಜಿಲ್ಲಾ ಧ್ಯಕ್ಷ ಸಂಜೀವ ಮಟಂದೂರು ಪತ್ರಿಕೆಗೆ ತಿಳಿಸಿದ್ದಾರೆ.

ಮಂತ್ರಿಯಾಗಬೇಕೆನ್ನುವುದು ನನ್ನ ಕ್ಷೇತ್ರದ ಜನರ ನಿರೀಕ್ಷೆಯಾಗಿತ್ತು :- ಶಾಸಕ ಎಸ್.ಅಂಗಾರ

ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ನೇತೃತ್ವದ ರಾಜ್ಯ ಬಿಜೆಪಿ ಸರ್ಕಾರ ನೂತನ ಸಚಿವರ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದು, 17 ನೂತನ ಸಚಿವರ ಪಟ್ಟಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಸಚಿವರಿಗೆ ಯಾವುದೇ ಸ್ಥಾನ ನೀಡದೆ ರಾಜ್ಯ ಸರ್ಕಾರ ದಕ್ಷಿಣ ಕನ್ನಡವನ್ನು ನಿರ್ಲ್ಯಕ್ಷಿಸಿದ್ದು, ಈ ಬಗ್ಗೆ ಆರು ಬಾರಿ ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಗೆದ್ದ, ಸಚಿವಾಕಾಂಕ್ಷಿ ಎಸ್ ಅಂಗಾರ ಬೇಸರ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನಲ್ಲಿ ಸಭೆ ಸೇರಿದ ಸುಳ್ಯದ ಮುಖಂಡರು ಮತ್ತು ಕಾರ್ಯಕರ್ತರೊಂದಿಗೆ ಮಾತನಾಡಿದ ಎಸ್ ಅಂಗಾರ ಅವರು,‘‘ ನಮ್ಮ ಜಿಲ್ಲೆ ಮತ್ತು ಕ್ಷೇತ್ರದ ಜನರ ಅಪೇಕ್ಷೆ ಕಳೆದ ಅನೇಕ ವರ್ಷಗಳಿಂದ ತತ್ವ ಸಿದ್ಧಾಂತದೊಂದಿಗೆ ಬಂದಿದ್ದೇನೆ.ಆದರೆ ಆ ತತ್ವ ನಿಷ್ಠೆಗೆ ಮಹತ್ವ ಇಲ್ಲವೆಂದಾದಲ್ಲಿ ನಾವೇನು ಮಾಡಲು ಆಗುವುದಿಲ್ಲ. ನಾನು ತತ್ವ ನಿಷ್ಠೆ ಬಿಡುವುದಿಲ್ಲ.ಸಂಘಟನೆ ಯ ಯಶಸ್ವಿಗೆ ಸಂಘಟನೆಯ ಬಗ್ಗೆ ನನಗೆ ಬೇಸರವಿಲ್ಲ ತತ್ವ ನಿಷ್ಠೆ ಮುಖ್ಯ.ನನ್ನ ಹಣೆಬರಹದಲ್ಲಿ ಮಂತ್ರಿ ಆಗುವುದು ಬರೆದಿಲ್ಲವೇನೋ’’ ಎಂದು ನಿರಾಶಾಯದಾಯಕ ಮಾತುಗಳನ್ನಾಡಿದರು. ಮಂತ್ರಿ ಪದವಿ ಸಿಗುತ್ತದೆಂದು ಬೆಂಗಳೂರಿಗೆ ಬಂದ ಕಾರ್ಯಕರ್ತರಲ್ಲಿ ಕ್ಷಮೆಯನ್ನು ಕೇಳುವ ಮೂಲಕ ತಮ್ಮ ನೋವನ್ನು ಹಂಚಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಸಭೆಯಲ್ಲಿ ಪಾಲ್ಗೊಂಡಿದ್ದ ಮುಖಂಡರಿಂದ ಅಸಮಧಾನ ಮತ್ತು ಆಕ್ರೋಶದ ಮಾತುಗಳುವ್ಯಕ್ತವಾಗಿತ್ತು. ಸುಳ್ಯ ವಿಧಾನ ಸಭಾ ಕ್ಷೇತ್ರದಿಂದ ಆರು ಬಾರಿ ಗೆದ್ದಿರುವ ಎಸ್ ಅಂಗಾರರಿಗೆ ಸಚಿವ ಸ್ಥಾನ ದೊರಕಬಹುದು ಎಂದು ಸಾಕಷ್ಟು ನಿರೀಕ್ಷೆಗಳು ಬಿಜೆಪಿ ಕಾರ್ಯಕರ್ತರಲ್ಲಿತ್ತು. ಸುಳ್ಯದ ಸ್ಥಳೀಯರು ಈ ಬಗ್ಗೆ ಸಾಕಷ್ಟು ನಿರೀಕ್ಷೆ ಹೊಂದಿದ್ದ ಬಗ್ಗೆ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ವ್ಯಾಪ್ತಿಯ ಲೋಕ ಸಭಾ ಚುನಾವಣೆಯಲ್ಲಿ ಬಿಜೆಪಿ ಆಭ್ಯರ್ಥಿ ನಳಿನ್ ಕುಮಾರ್ ಕಟೀಲ್ ತಮ್ಮ ನಿಕಟ ಸ್ಫರ್ಧಿ ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ 2,74,621 ಭಾರೀ ಅಂತರದಿಂದ ಜಯಗಳಿಸಿದ್ದರೂ ಅದರಲ್ಲೂ ಮಂಗಳೂರು ವಿಧಾನ ಸಭಾ ಕ್ಷೇತ್ರ ಹೊರತು ಪಡಿಸಿ ಎಲ್ಲಾ ಕ್ಷೇತ್ರದಲ್ಲೂ ಬಿಜೆಪಿ ಭಾರೀ ಮುನ್ನಡೆ ಸಾಧಿಸಿತ್ತು .ಸುಳ್ಯ ವಿಧಾನ ಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಗೆಲುವಿನ ಅಂತರ ಹೆಚ್ಚಿತ್ತು.ಈ ಹಿಂದೆ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೂವರು ಸಚಿವರು ರಾಜ್ಯ ಸಚಿವ ಸಂಪುಟವನ್ನು ಪ್ರತಿನಿಧಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News