ಪ್ಲಾಸ್ಟಿಕ್ ಬಳಕೆಗೆ ರೈಲ್ವೆ ಕಡಿವಾಣ

Update: 2019-08-21 03:44 GMT

ಹೊಸದಿಲ್ಲಿ: ಒಂದು ಬಾರಿ ಮಾತ್ರ ಬಳಸಬಹುದಾದ ಪ್ಲಾಸ್ಟಿಕ್ ಬಳಕೆಯನ್ನು ಅ. 2ರಿಂದ ನಿಷೇಧಿಸಲು ಭಾರತೀಯ ರೈಲ್ವೆ ನಿರ್ಧರಿಸಿದೆ. ಈ ಕ್ರಮ ಕೈಗೊಂಡ ಮೊಟ್ಟಮೊದಲ ಬೃಹತ್ ಸರ್ಕಾರಿ ಇಲಾಖೆ ಎಂಬ ಹೆಗ್ಗಳಿಕೆಗೆ ರೈಲ್ವೆ ಪಾತ್ರವಾಗಿದೆ. ಇದರ ಜತೆಗೆ ಬಳಸಿದ ನೀರಿನ ಬಾಟಲಿಗಳ ಸುರಕ್ಷಿತ ವಿಲೇವಾರಿಗಾಗಿ ಪ್ರಯಾಣಿಕರು ಬಳಸಿದ ನೀರಿನ ಬಾಟಲಿ ಸಂಗ್ರಹಕ್ಕೆ ಕೂಡಾ ರೈಲ್ವೆ ಮುಂದಾಗಿದೆ.

ಈ ಸಂಬಂಧ ಸೋಮವಾರ ಸುತ್ತೋಲೆ ಹೊರಡಿಸಲಾಗಿದೆ. "ವಿಸ್ತರಿತ ಉತ್ಪಾದಕ ಹೊಣೆಗಾರಿಕೆ" ಯೋಜನೆಯ ಅಂಗವಾಗಿ ಬಳಸಿದ ನೀರಿನ ಬಾಟಲಿಗಳನ್ನು ಐಆರ್‌ಸಿಟಿಸಿ ಸಂಗ್ರಹಿಸಲಿದೆ.

ಏಕಬಳಕೆಯ ಪ್ಲಾಸ್ಟಿಕ್ ನಿಷೇಧಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಎಲ್ಲ ವಲಯಗಳಿಗೆ ಸೂಚಿಸಲಾಗಿದೆ. ಜತೆಗೆ ತಿಂಡಿ ತಿನಸು ಮಾರಾಟಗಾರರು ಪ್ಲಾಸ್ಟಿಕ್ ಕೈಚೀಲಗಳನ್ನು ಬಳಸದಂತೆ ಕ್ರಮ ಕೈಗೊಳ್ಳಲಾಗುವುದು. ಆರ್‌ಐಟಿಇಎಸ್ ಮೂಲಕ ಪ್ಲಾಸ್ಟಿಕ್ ಬಾಟಲಿಗಳನ್ನು ಮುದ್ದೆ ಮಾಡುವ ಯಂತ್ರಗಳನ್ನು ವ್ಯಾಪಕವಾಗಿ ಕಳುಹಿಸಲಾಗುವುದು ಎಂದು ರೈಲ್ವೆ ಮಂಡಳಿ ಸ್ಪಷ್ಟಪಡಿಸಿದೆ.

ಎಲ್ಲ ರೈಲ್ವೆ ವಿಭಾಗೀಯ ವ್ಯವಸ್ಥಾಪಕರಿಗೆ ರೈಲ್ವೆ ಮಂಡಳಿ ಅಧ್ಯಕ್ಷ ವಿ.ಕೆ.ಯಾದವ್ ಈ ಸಂಬಂಧ ವೈಯಕ್ತಿಕ ಪತ್ರ ಬರೆದು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.

"ನಮಗೆಲ್ಲ ತಿಳಿದಿರುವಂತೆ ಪ್ರಧಾನಿಯವರು ಏಕ ಬಳಕೆಯ ಪ್ಲಾಸ್ಟಿಕ್ ನಿಷೇಧಿಸುವಂತೆ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಕರೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಇದನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವ ಮೂಲಕ ರೈಲ್ವೆ ಆವರಣದಲ್ಲಿ ಏಕಬಳಕೆಯ ಪ್ಲಾಸ್ಟಿಕ್ ನಿಷೇಧಿಸುವಂತೆ ಎಲ್ಲ ಜಿಎಂ/ಡಿಆರ್‌ಎಂಗಳಿಗೆ ಕೋರುತ್ತಿದ್ದೇನೆ. 2019ರ ಅ. 2ರ ಒಳಗಾಗಿ ರೈಲ್ವೆ ಆವರಣ ಸಂಪೂರ್ಣವಾಗಿ ಏಕಬಳಕೆ ಪ್ಲಾಸ್ಟಿಕ್‌ನಿಂದ ಮುಕ್ತವಾಗಬೇಕು" ಎಂದು ಸಲಹೆ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News