ಅನುರಾಗ್ ಕಶ್ಯಪ್ ವಿರುದ್ಧ ದೂರು ದಾಖಲು: ಕಾರಣ ಗೊತ್ತೇ ?

Update: 2019-08-21 04:18 GMT

ಹೊಸದಿಲ್ಲಿ: ಸಿಕ್ಖರ ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸಿದ ಆರೋಪ ಹೊರಿಸಿ, ಇಬ್ಬರು ಪ್ರಮುಖ ಸಿಕ್ಖ್ ಮುಖಂಡರು ಬಾಲಿವುಡ್ ನಿರ್ದೇಶಕ ಅನುರಾಗ್ ಕಶ್ಯಪ್ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ.

ದೆಹಲಿ ಸಿಕ್ಖ್ ಗುರುದ್ವಾರ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಹಾಗೂ ರಾಜೌರಿ ಗಾರ್ಡನ್ ಶಾಸಕ ಮಂಜೀಂದರ್ ಸಿಂಗ್ ಸಿರ್ಸಾ ದೂರು ನೀಡಿದ್ದು, ಕಶ್ಯಪ್ ನಿರ್ದೇಶನದ ವೆಬ್‌ಸೀರಿಸ್ ನೆಟ್‌ಫ್ಲಿಕ್ಸ್ "ಸೇಕ್ರೆಡ್ ಗೇಮ್ಸ್-2"ನಲ್ಲಿ ಸಿಕ್ಖ್ ಹಾಗೂ ಹಿಂದೂ ಭಾವನೆಗಳಿಗೆ ಘಾಸಿ ಮಾಡಿದ್ದಾರೆ ಎಂದು ಆಪಾದಿಸಲಾಗಿದೆ.

ಈ ಸಂಬಂಧ ಕಶ್ಯಪ್ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವರಿಗೂ ಮನವಿ ಸಲ್ಲಿಸಲಾಗಿದೆ ಎಂದು ಸಿರ್ಸಾ ವಿವರಿಸಿದ್ದಾರೆ.

"ಬಾಲಿವುಡ್ ತಾರೆಗಳು ನಮ್ಮ ಧಾರ್ಮಿಕ ನಂಬಿಕೆ ಹಾಗೂ ಭಾವನೆಗಳ ಜತೆ ಆಟವಾಡಲು ನಾವು ಅವಕಾಶ ನೀಡುವುದಿಲ್ಲ. ನಾನು ಅನುರಾಗ್ ಕಶ್ಯಪ್‌ಗೆ ಎಚ್ಚರಿಕೆ ನೀಡುತ್ತಿದ್ದೇನೆ; ಕೇವಲ ಮನೋರಂಜನೆ ಮತ್ತು ಭಾವೋದ್ರೇಕಗೊಳಿಸುವ ಸಲುವಾಗಿ ಪಾತ್ರಗಳನ್ನು ಋಣಾತ್ಮಕವಾಗಿ ಬಿಂಬಿಸುವ ಮುನ್ನ ಸಿಕ್ಖ್ ಹಾಗೂ ಹಿಂದೂ ಪುರಾಣಗ್ರಂಥಗಳನ್ನು ಓದುವಂತೆ ಸಲಹೆ ಮಾಡುತ್ತಿದ್ದೇನೆ" ಎಂದು ಸಿರ್ಸಾ ಹೇಳಿದ್ದಾರೆ.

ಏತನ್ಮಧ್ಯೆ ದೆಹಲಿ ಬಿಜೆಪಿ ವಕ್ತಾರ ತಜೀಂದರ್ ಬಗ್ಗಾ ಕೂಡಾ ಬಾಲಿವುಡ್ ನಿರ್ದೇಶಕನ ವಿರುದ್ಧ ದೂರು ದಾಖಲಿಸಿದ್ದಾರೆ. ಸೇಕ್ರೆಡ್ ಗೇಮ್ಸ್-2ನಲ್ಲಿ ಸಿಕ್ಖ್ ಸಮುದಾಯ ಧಾರ್ಮಿಕ ಸಂಕೇತವಾದ "ಕಡ" ಗೆ ಅಗೌರವ ತೋರಲಾಗಿದೆ ಎಂದು ಆಪಾದಿಸಿದ್ದಾರೆ. ಸೇಕ್ರೆಡ್ ಗೇಮ್ಸ್-2ನಲ್ಲಿ ಸೈಫ್ ಆಲಿ ಖಾನ್ ಸಿಕ್ಖ್ ಪೊಲೀಸ್ ಪಾತ್ರವನ್ನು ನಿರ್ವಹಿಸಿದ್ದು, ಅವರು ಕಡವನ್ನು ಸಮುದ್ರಕ್ಕೆ ಎಸೆಯುವ ದೃಶ್ಯವಿದೆ. "ಕಡ" ಸಿಕ್ಖ್ ಧರ್ಮದ ಅವಿಭಾಜ್ಯ ಅಂಗ ಹಾಗೂ ಇದಕ್ಕೆ ಗರಿಷ್ಠ ಗೌರವ ನೀಡಲಾಗುತ್ತಿದೆ ಎಂದು ಬಗ್ಗಾ ವಿವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News