ಬಿಜೆಪಿ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾಗುವ ಬಗ್ಗೆ ನಿರೀಕ್ಷೆ, ಅಪೇಕ್ಷೆ ಇರಲಿಲ್ಲ: ನಳಿನ್ ಕುಮಾರ್

Update: 2019-08-21 09:16 GMT

ಮಂಗಳೂರು, ಆ.21: ನಾನು ಯಾವತ್ತೂ ಯಾವುದೇ ಪದವಿಯನ್ನು ಅಪೇಕ್ಷೆಯಾಗಲಿ, ನಿರೀಕ್ಷೆಯಾಗಲಿ ಮಾಡಿಲ್ಲ. ಹಾಗಾಗಿ ಇದೀಗ ಪಕ್ಷದ ನಾಯಕರು ಹಾಗೂ ಹಿರಿಯರ ಸೂಚನೆಯಂತೆ ನೀಡಲಾಗಿರುವ  ಪಕ್ಷದ ರಾಜ್ಯಾಧ್ಯಕ್ಷ ಸ್ಥಾನವನ್ನು ಹುದ್ದೆಯಾಗಿ ಅಲ್ಲ, ಜವಾಬ್ಧಾರಿಯಾಗಿ ಸ್ವೀಕರಿಸಲಿದ್ದೇನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷರಾಗಿ ನೇಮಕಗೊಂಡಿರುವ ಸಂಸದ ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ.

ರಾಜ್ಯಾಧ್ಯಕ್ಷರಾಗಿ ನೇಮಕಗೊಂಡ ಬಳಿಕ ಇಂದು ಬಿಜೆಪಿ ಕಚೇರಿಗೆ ಆಗಮಿಸಿ, ಜಿಲ್ಲೆಯ ನಾಯಕರು ಹಾಗೂ ಕಾರ್ಯಕರ್ತರಿಂದ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು.

ಬಾಲ್ಯದಿಂದಲೇ ಸಂಘ ಪರಿವಾರದ ಕಾರ್ಯಕರ್ತನಾಗಿದ್ದುಕೊಂಡು ನಾನು ಬೆಳೆದು ಬಂದ ದಾರಿ ಕಠಿಣ ಹಾಗೂ ಸ್ಪಷ್ಟ ಎಂದು ಹೇಳಿದ ಅವರು, ಸವಾಲುಗಳ ಮಧ್ಯೆ ಈಜುತ್ತಲೇ ಇಲ್ಲಿಯವರೆಗೆ ತಲುಪಿದ್ದೇನೆ ಎಂದರು.

ಸಂಘದ ವಿಚಾರಧಾರೆಯೊಂದಿಗೆ ಬೆಳೆದ ನಾನು ಯಾವತ್ತೂ ಅಧಿಕಾರವನ್ನು ಬಯಸಲಿಲ್ಲ. ಭಾರತ ಮಾತೆಯ ಗೌರವವನ್ನು ವೈಭವೀಕರಿಸುವ ಉದ್ದೇಶದೊಂದಿಗೆ ಸಂಘದಲ್ಲಿ ತೊಡಗಿಕೊಂಡಿದ್ದ ನನ್ನ ನಡೆಯನ್ನು ಬೆಳೆಸಿರುವುದೇ ಸಂಘ ಎಂದು ಅವರು ಹೇಳಿದರು.

ಸಂಘದಲ್ಲಿ ತೊಡಗಿಸಿಕೊಂಡಿದ್ದ ವೇಳೆ ಧರ್ಮ ಜಾಗರಣದ ಕೆಲಸಕ್ಕೆ ಹಿರಿಯರಿಂದ ಸೂಚನೆ ಬಂತು. ಅದರಂತೆ ಕಾರ್ಯ ನಿರ್ವಹಿಸಿ ಬಳಿಕ ಪಕ್ಷಕ್ಕೆ ಬಂದಾಗ ಚುನಾವಣೆಗೆ ಸ್ಪರ್ಧಿಸಲು ಸೂಚನೆ ಬಂದಾಗಲೂ ಚುನಾವಣೆ ನನ್ನ ಗುರಿ ಅಲ್ಲ ಎಂದು ಹಿಂಜರಿದಿದ್ದೆ. ಆದರೆ ಹಿರಿಯರ ಅಪೇಕ್ಷೆಯಂತೆ ನಾನು ಚುನಾವಣೆ ಸ್ಪರ್ಧಿಸಿದ್ದೆ. ಇದೀಗ ಸಂಘದ ಅಪೇಕ್ಷೆ ಹಾಗೂ ಸೂಚನೆಯಂತೆ ಪಕ್ಷದ ರಾಜ್ಯಾಧ್ಯಕ್ಷನ ಜವಾಬ್ಧಾರಿಯನ್ನು ಪಡೆದಿದ್ದೇನೆ. ಅದನ್ನು ಪಾಲಿಸುತ್ತೇನೆ. ನನ್ನ ಈ ಬೆಳವಣಿಗೆಗೆ ಸಂಘ ಕಾರಣವಾಗಿದ್ದರೆ, ಕಾರ್ಯಕರ್ತರು ನನ್ನ ಪಾಲಿನ ದೇವರು. ಪಕ್ಷದ ಕಾರ್ಯಾಲಯ ದೇವಾಲಯ. ಅದಕ್ಕಾಗಿ ಪಕ್ಷದ ಜವಾಬ್ಧಾರಿಯನ್ನು ಸ್ವೀಕರಿಸುವ ಮೊದಲು ಕಾರ್ಯಕರ್ತರನ್ನು ಕಾರ್ಯಾಲಯದಲ್ಲಿ ಭೇಟಿಯಾಗಿ ಕಟೀಲು ದೇವಸ್ಥಾನದಲ್ಲಿ ಆಶೀರ್ವಾದ ಪಡೆದಿರುವುದಾಗಿ ನಳಿನ್ ಕುಮಾರ್ ತಿಳಿಸಿದರು.

ಪಕ್ಷದ ಹಿರಿಯರು, ಸಿದ್ಧಾಂತಕ್ಕೆ ಚ್ಯುತಿ ಬಾರದ ರೀತಿಯಲ್ಲಿ ಹಿರಿಯರು ಹಾಗೂ ಕಿರಿಯ ಕಾರ್ಯಕರ್ತರನ್ನು ವಿಶ್ವಾಸದಲ್ಲಿರಿಸಿಕೊಂಡು ಜವಾಬ್ಧಾರಿ ನಿರ್ವಹಿಸಲಿದ್ದೇನೆ. ಪಕ್ಷವು ಸ್ವರ್ಣಯುಗದಲ್ಲಿದೆ. ಸವಾಲುಗಳಿರಬಹುದು. ಹಾಗಾಗಿ ನನ್ನ ಜವಾಬ್ಧಾರಿಯೊಂದಿಗೆ ವಿಶ್ವಾಸದ ಜತೆ, ಎಚ್ಚರಿಕೆ, ಭಯವೂ ನನ್ನಲ್ಲಿದೆ ಎಂದು ಅವರು ಹೇಳಿದರು.

ರಾಜ್ಯದಲ್ಲಿ ನೆರೆ ಬರದ ಮಧ್ಯೆ ಸರಕಾರದ ಕಾರ್ಯಚಟುವಟಿಕೆಯನ್ನು ಅದರದ್ದೇ ಆದ ರೀತಿಯಲ್ಲಿ ಮಾಡಲಿದೆ. ಹಾಗಾಗಿ ಅಧಿಕಾರವನ್ನು ನಾವು ಎಂತಹ ಪರಿಸ್ಥಿತಿಯಲ್ಲಿ ಪಡೆದಿದ್ದೇವೆ ಎಂಬುದನ್ನು ನೆನಪಿಟ್ಟುಕೊಂಡು ಮುಂದುವರಿಯಬೇಕು ಎಂದು ಪಕ್ಷದ ಶಾಸಕರಿಗೆ ಸಲಹೆ ನೀಡಿದ ಸಂಸದ ನಳಿನ್ ಕುಮಾರ್, ಏನೇ ಅಸಮಾಧಾನವಿದ್ದರೂ ನನ್ನಲ್ಲಿ ಬಂದು ಹೇಳಿ ಅದು ಹೊರಗೆ ಹೋಗದಂತೆ ನೋಡಿ ಎಂದು ಕಾರ್ಯಕರ್ತರಿಗೂ  ಕಿವಿಮಾತು ಹೇಳಿದರು.

ಇಂದು ಬೆಳಗ್ಗೆ ಕಂಕನಾಡಿ ರೈಲ್ವೇ ಜಂಕ್ಷನ್‌ನಲ್ಲಿ ಬಂದಿಳಿದ ನಳಿನ್ ಕುಮಾರ್, ಬಳಿಕ ತಮ್ಮ ಸ್ವಗೃಹಕ್ಕೆ ತೆರಳಿ ತಾಯಿಯ ಆಶೀರ್ವಾದ ಪಡೆದು, ಸಂಘ ನಿಕೇತನಕ್ಕೆ ತೆರಳಿ ಅಲ್ಲಿಂದ ಬಿಜೆಪಿ ಕಚೇರಿಗೆ ಆಗಮಿಸಿದರು.

ಪಕ್ಷದ ಜಿಲ್ಲಾ ನಾಯಕರಾದ ಮೋನಪ್ಪ ಭಂಡಾರಿ ಮಾತನಾಡಿ, ಪಕ್ಷದ ಕಾರ್ಯಕರ್ತರು ಸಂಯಮ ಕಳೆದುಕೊಳ್ಳದೆ ಪಕ್ಷದ ಹಿರಿಯರ ಮಾತನ್ನು ಪಾಲಿಸುವ ಮೂಲಕ ಸಂಸದರ ಬಗ್ಗೆ ವಿರೋಧಾಭಾಸವಾಗಿ ಮಾತನಾಡದೆ ಅವರಿಗೆ ಬೆಂಬಲಿಸಬೇಕೆಂದು ಕರೆ ನೀಡಿದರು.

ಪಕ್ಷದ ಜಿಲ್ಲಾ ನಾಯಕರು, ಪ್ರಮುಖರು ಹಾಗೂ ಕಾರ್ಯಕರ್ತರು ಹೂಗುಚ್ಚಗಳೊಂದಿಗೆ ನಳಿನ್ ಕುಮಾರ್ ಅವರನ್ನು ಅಭಿನಂದಿಸಿದರು.
ನಾಯಕರಾದ ಜಗದೀಶ್ ಅಧಿಕಾರಿ, ಕಿಶೋರ್ ರೈ, ರವಿಶಂಕರ್ ಮಿಜಾರು, ರಾಮಚಂದರ್ ಬೈಕಂಪಾಡಿ ಉಪಸ್ಥಿತರಿದ್ದರು. ಸುರ್ಶನ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News