ಗಾಂಧಿಯನ್ನು ಅವಮಾನಿಸಿದ್ದಕ್ಕೆ ನಳಿನ್ ಗೆ ಮೋದಿ- ಶಾರಿಂದ ಭಡ್ತಿ: ರಮಾನಾಥ ರೈ

Update: 2019-08-21 14:08 GMT

ಉಡುಪಿ, ಆ. 21: ಇಡೀ ಜಗತ್ತೆ ಕೊಂಡಾಡುವ ರಾಷ್ಟ್ರಪಿತ ಮಹಾತ್ಮ ಗಾಂಧಿ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದ ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್ ವಿರುದ್ಧ ಕ್ರಮ ಕೈಗೊಳ್ಳಬೇಕಾದ ಮೋದಿ ಮತ್ತು ಅಮಿತ್ ಶಾ, ಅವರನ್ನು ರಾಜ್ಯಾಧ್ಯಕ್ಷರನ್ನಾಗಿಸುವ ಮೂಲಕ ಭಡ್ತಿ ನೀಡಿದ್ದಾರೆ. ಮಹಾತ್ಮ ಗಾಂಧಿಗೆ ಅವಮಾನ ಮಾಡಿರುವುದಕ್ಕೆ ನಳಿನ್‌ಗೆ ನೀಡಿರುವ ರ್ಯಾಂಕ್ ಇದಾಗಿದೆ. ಈ ರೀತಿ ಬಿಜೆಪಿ ಪಕ್ಷ ಮಾತ್ರ ನಡೆದುಕೊಳ್ಳಲು ಸಾಧ್ಯ ಎಂದು ಮಾಜಿ ಸಚಿವ ರಮಾನಾಥ ರೈ ಕಟುವಾಗಿ ಟೀಕಿಸಿದ್ದಾರೆ.

ಉಡುಪಿಯ ಕಾಂಗ್ರೆಸ್ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಳಿನ್ ಕುಮಾರ್ ಕಟೀಲ್ ಈವರೆಗೆ ಯಾವುದೇ ಸಾಧನೆ ಮಾಡಿರುವ ಇತಿಹಾಸ ಇಲ್ಲ. ಕಳೆದ ಲೋಕಸಭಾ ಚುನಾವಣೆಯಲ್ಲಿ ಕ್ಷೇತ್ರ ಜನತೆ, ನಾವು ಮೇಲಿನವರ ಮುಖ ನೋಡಿ ಮತ ಕೊಡುತ್ತೇವೆ ಹೊರತು ನಳಿನ್‌ಗೆ ಅಲ್ಲ ಎಂದು ಹೇಳಿದ್ದಾರೆ. ಇದೀಗ ಕ್ಷೇತ್ರ ಜನ ಮೇಲೆ ನೋಡುತ್ತಲೇ ನಿಂತಿದ್ದಾರೆ. ಇದೀಗ ಜನ ಆಕಾಶ ನೋಡಿಯೇ ಕುಳಿತುಕೊಳ್ಳುವ ಪರಿಸ್ಥಿತಿಯನ್ನು ನಳಿನ್ ಕುಮಾರ್ ತಂದಿಟ್ಟಿದ್ದಾರೆ. ಅವರಿಂದ ಯಾವುದೇ ಕೆಲಸ ಆಗಲ್ಲ ಎಂದು ದೂರಿದರು.

ಬುದ್ದಿವಂತರ ಜಿಲ್ಲೆಯಾಗಿರುವ ಅವಿಭಜಿತ ದ.ಕ. ಜಿಲ್ಲೆಯ ಯೋಗ್ಯರಾದ ಇಬ್ಬರಿಗೆ ಸಚಿವ ಸ್ಥಾನ ನೀಡಲು ಬಿಜೆಪಿಗೆ ಸಾಧ್ಯವಾಗಿಲ್ಲ. ಅವರು ದ.ಕ. ಜಿಲ್ಲೆಯಲ್ಲಿ ಯಾರು ಬುದ್ದಿವಂತರಿಲ್ಲ ಎಂಬುದಾಗಿ ತೀರ್ಮಾನ ಮಾಡಿದಂತೆ ಇದೆ. ಇಲ್ಲಿನ ದಲಿತ ಹಿರಿಯ ಶಾಸಕರಿಗೂ ಅವಕಾಶ ನೀಡಿಲ್ಲ. ಹೀಗೆ ಬಿಜೆಪಿ ಈ ಎರಡು ಜಿಲ್ಲೆಯನ್ನು ಸಂಪೂರ್ಣವಾಗಿ ಕಡೆಗಣಿಸಿದೆ ಎಂದು ಅವರು ಆರೋಪಿಸಿದರು.

ಬಿಜೆಪಿಗೆ ಜನಹಿತ ಮುಖ್ಯವಲ್ಲ. ಯಾರಿಗೆ ಸಚಿವ ಸ್ಥಾನ ಕೊಟ್ಟರೆ ಮುಂದಿನ ಚುನಾವಣೆಯಲ್ಲಿ ಮತ ಸಿಗುತ್ತದೆ ಎಂಬ ಲೆಕ್ಕಚಾರದಲ್ಲಿ ಅವರಿದ್ದಾರೆ. ಅವರ ಈ ಲೆಕ್ಕಚಾರ ಮುಂದೆ ತಪ್ಪಿ ಹೋಗಲಿದೆ. ಕರಾವಳಿಯ ಮೂರು ಜಿಲ್ಲೆಗಳಲ್ಲಿ ಬಿಜೆಪಿಯಿಂದ ಗೆದ್ದು ಬಂದ 19 ಶಾಸಕರ ಪೈಕಿ ಒಬ್ಬರಿಗೂ ಇವರು ಸಚಿವ ಸ್ಥಾನ ನೀಡಿಲ್ಲ. ಈ ಜಿಲ್ಲೆಗಳಿಗೆ ಬಿಜೆಪಿ ಸರಕಾರ ಪ್ರತಿಬಾರಿಯೂ ಅನ್ಯಾಯ ಮಾಡಿಕೊಂಡೇ ಬಂದಿದೆ. ಹೇಗಿದ್ದರೂ ಇಲ್ಲಿನ ಜನ ಬಿಜೆಪಿಗೆ ಮತ ಹಾಕುತ್ತಾರೆ ಎಂಬುದು ಅವರಿಗೆ ಗೊತ್ತಿದೆ ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಮಾಜಿ ಸಚಿವರಾದ ಯು.ಟಿ. ಖಾದರ್, ವಿನಯ ಕುಮಾರ್ ಸೊರಕೆ, ಮಾಜಿ ಶಾಸಕ ಯು.ಆರ್.ಸಭಾಪತಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News