ಮಂದಾರಕ್ಕೆ ದ.ಕ. ಜಿಲ್ಲಾ ಕಾಂಗ್ರೆಸ್ ನಿಯೋಗ ಭೇಟಿ

Update: 2019-08-21 14:08 GMT

ಮಂಗಳೂರು, ಆ. 21: ಪಚ್ಚನಾಡಿ ಡಂಪಿಂಗ್ ಯಾರ್ಡ್‌ನಿಂದ ತ್ಯಾಜ್ಯರಾಶಿಯು ಜರಿದು ಮಂದಾರ ಪರಿಸರದಲ್ಲಿ ವ್ಯಾಪಿಸಿರುವ ಪ್ರದೇಶಕ್ಕೆ ದ.ಕ. ಜಿಲ್ಲಾ ಕಾಂಗ್ರೆಸ್ನ ನಿಯೋಗ ಬುಧವಾರ ಭೇಟಿ ನೀಡಿತು.

ಮಾಜಿ ಸಚಿವ ಬಿ.ರಮಾನಾಥ ರೈ ಅವರ ಅಧ್ಯಕ್ಷತೆಯಲ್ಲಿ ಮಾಜಿ ಸಚಿವ ಮತ್ತು ಶಾಸಕ ಯು.ಟಿ ಖಾದರ್, ವಿ.ಪರಿಷತ್ ಸದಸ್ಯ ಹರೀಶ್ ಕುಮಾರ್ ಭೇಟಿ ನೀಡಿದ್ದು, ಮಂದಾರದಲ್ಲಿ ಸಂಭವಿಸಿದ ಘಟನೆ ಹಾಗೂ ಅದರಿಂದ ನಿರಾಶ್ರಿತರಾಗುವವರಿಗೆ ಪುನರ್ವಸತಿ ಹಾಗೂ ಮಂದಾರದಲ್ಲಿ ಹರಡಿರುವ ತ್ಯಾಜ್ಯವನ್ನು ತೆರವುಗೊಳಿಸುವ ಸಂಬಂಧ ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ನಿಯೋಗವು ವರದಿಯನ್ನು ರಾಜ್ಯ ಹಾಗೂ ಕೇಂದ್ರ ಸರಕಾರಕ್ಕೆ ನೀಡಲಿವೆ.

ಈ ಸಂದರ್ಭ ಮಾತನಾಡಿದ ಶಾಸಕ ಯು.ಟಿ.ಖಾದರ್ ಅವರು, ಪಚ್ಚನಾಡಿಯಲ್ಲಿ ತ್ಯಾಜ್ಯರಾಶಿಯು ಕುಸಿದು ಮಂದಾರ ವ್ಯಾಪ್ತಿಯಲ್ಲಿ ಹರಡಿರುವ ಕಾರಣದಿಂದ ಸ್ಥಳೀಯ ಜನರು ಸಂಕಷ್ಟಕ್ಕೀಡಾಗಿದ್ದಾರೆ. ರಾಜ್ಯದಲ್ಲಿಯೇ ವಿಶೇಷ ಮಾದರಿಯ ಪ್ರಕೃತಿ ವಿಕೋಪ ಇಲ್ಲಿ ಸಂಭವಿಸಿದ್ದು, ರಾಜ್ಯ ಸರಕಾರ ಇದನ್ನು ಗಂಭೀರವಾಗಿ ಪರಿಗಣಿಸಬೇಕಿತ್ತು. ಮುಖ್ಯಮಂತ್ರಿಗಳು ಇಲ್ಲಿಗೆ ಭೇಟಿ ನೀಡಿ ಪರಿಶೀಲನೆ ಮಾಡಬೇಕಿತ್ತು ಎಂದರು.

ಮಳೆ ನಿಂತ ಬಳಿಕವೂ ಇಲ್ಲಿನ ನೀರಿನ ಮೂಲಗಳೊಂದಿಗೆ ಬೆರೆದಿರುವ ತ್ಯಾಜ್ಯ ರಾಶಿ ಮತ್ತೊಂದು ರೀತಿಯ ಸಮಸ್ಯೆಯನ್ನು ಸೃಷ್ಟಿಸಲಿದೆ. ಇದು ಮಂಗಳೂರು ನಗರಕ್ಕೂ ವ್ಯಾಪಿಸಲಿದೆ. ಹಾಗಾಗಿ ಈ ಸಮಸ್ಯೆಯನ್ನು ಕೇವಲ ಮಂದಾರಕ್ಕೆ ಮಾತ್ರವೇ ಸೀಮಿತವಾಗಿಸದೆ, ಆಡಳಿತ ವ್ಯವಸ್ಥೆ ತುರ್ತು ನೆಲೆಯಲ್ಲಿ ಇದಕ್ಕೆ ಸ್ಪಂದಿಸಬೇಕಿದೆ ಎಂದರು.

ಮಾಜಿ ಸಚಿವ ಬಿ.ರಮಾನಾಥ ರೈ ಮಾತನಾಡಿ, ಮಂದಾರದಲ್ಲಿ ಉಂಟಾಗಿರುವ ತ್ಯಾಜ್ಯ ಸಮಸ್ಯೆಯನ್ನು ರಾಜ್ಯಸರಕಾರ ತುರ್ತು ನೆಲೆಯಲ್ಲಿ ವಿಲೇವಾರಿ ಮಾಡಿ ಇಲ್ಲಿನ ಸ್ಥಳೀಯರಿಗೆ ಬದುಕು ಕಟ್ಟಿಕೊಡುವ ಕೆಲಸ ಮಾಡಬೇಕು ಎಂದರು.

ಮಾಜಿ ಶಾಸಕ ಮೊದಿನ್ ಬಾವ, ಮಾಜಿ ಮೇಯರ್‌ಗಳಾದ ಎಂ.ಶಶಿಧರ ಹೆಗ್ಡೆ, ಕೆ.ಭಾಸ್ಕರ್, ಕವಿತಾ ಸನಿಲ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News