ಚಿದಂಬರಂ ಪ್ರಕರಣ ತುರ್ತು ವಿಚಾರಣೆಗೆ ಸುಪ್ರೀಂ ನಕಾರ: ಶುಕ್ರವಾರ ವಿಚಾರಣೆಗೆ ನಿರ್ಧಾರ

Update: 2019-08-21 13:57 GMT

ಹೊಸದಿಲ್ಲಿ, ಆ.21: ಐಎನ್‌ಎಕ್ಸ್ ಮೀಡಿಯಾ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ನೀಡಲು ನಿರಾಕರಿಸಿರುವ ದಿಲ್ಲಿ ಹೈಕೋರ್ಟ್ ಆದೇಶದ ವಿರುದ್ಧ ಚಿದಂಬರಂ ಸಲ್ಲಿಸಿರುವ ಮೇಲ್ಮನವಿಯ ತುರ್ತು ವಿಚಾರಣೆಗೆ ಸುಪ್ರೀಂಕೋರ್ಟ್ ನಿರಾಕರಿಸಿದ್ದು, ಶುಕ್ರವಾರ ವಿಚಾರಣೆಗೆ ಕೈಗೆತ್ತಿಕೊಳ್ಳುವುದಾಗಿ ತಿಳಿಸಿದೆ.

 ನಿರೀಕ್ಷಣಾ ಜಾಮೀನು ಕೋರಿ ಚಿದಂಬರಂ ಸಲ್ಲಿಸಿದ್ದ ಅರ್ಜಿಯನ್ನು ಮಂಗಳವಾರ ದಿಲ್ಲಿ ಹೈಕೋರ್ಟ್ ತಿರಸ್ಕರಿಸಿದಂದಿನಿಂದ ಚಿದಂಬರಂ ನಾಪತ್ತೆಯಾಗಿದ್ದಾರೆ. ಆ ಬಳಿಕ ದಿಲ್ಲಿಯಲ್ಲಿರುವ ಚಿದಂಬರಂ ಮನೆಗೆ ಸಿಬಿಐ ಅಧಿಕಾರಿಗಳು ಎರಡು ಬಾರಿ ಭೇಟಿ ನೀಡಿ ವಾಪಸಾಗಿದ್ದಾರೆ. ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆ ನಡೆಯಲಿ ಎಂದು ತಿಳಿಸಿ ಹೈಕೋರ್ಟ್ ನಿರೀಕ್ಷಣಾ ಜಾಮೀನು ಅರ್ಜಿ ವಜಾಗೊಳಿಸಿದೆ. 

ಆದ್ದರಿಂದ ಸುಪ್ರೀಂಕೋರ್ಟ್‌ನಲ್ಲಿ ಈ ಅರ್ಜಿಯ ವಿಚಾರಣೆ ನಡೆಯಬೇಕು ಮತ್ತು ತೀರ್ಪು ಹೊರಬೀಳುವವರೆಗೆ ಚಿದಂಬರಂರನ್ನು ಬಂಧಿಸಬಾರದು. ಬುಧವಾರ (ಆ.21) ಮುಂಜಾನೆ 2 ಗಂಟೆಗೆ ತನಿಖಾ ಸಂಸ್ಥೆ ಚಿದಂಬರಂ ಅವರ ಮನೆಯಲ್ಲಿ ನೋಟಿಸ್ ಅಂಟಿಸಿದ್ದು ಎರಡು ತಾಸಿನೊಳಗೆ ವಿಚಾರಣೆಗೆ ಹಾಜರಾಗುವಂತೆ ತಿಳಿಸಲಾಗಿದೆ ಎಂದು ಚಿದಂಬರಂ ಪರ ನ್ಯಾಯವಾದಿ ಕಪಿಲ್ ಸಿಬಲ್ ಹೇಳಿದರು.
     
ತಾನು ಎಲ್ಲಿಗೂ ಓಡಿಹೋಗುವುದಿಲ್ಲ ಎಂದು ಖಾತರಿ ನೀಡಲು ಚಿದಂಬರಂ ಸಿದ್ಧರಿದ್ದಾರೆ. ಚಿದಂಬರಂ ದೇಶಬಿಟ್ಟು ಪಲಾಯನ ಮಾಡಲಿದ್ದಾರೆ ಎಂಬ ಭಾವನೆ ಬರುವಂತೆ ಅವರ ವಿರುದ್ಧ ಲುಕ್‌ಔಟ್ ನೋಟಿಸ್ ಹೊರಡಿಸಲಾಗಿದೆ ಎಂದು ಸಿಬಲ್ ಆಕ್ಷೇಪ ವ್ಯಕ್ತಪಡಿಸಿದರು. ಚಿದಂಬರಂ ಅರ್ಜಿ ವಿಚಾರಣೆ ನಡೆಸಬೇಕಿದ್ದ ಸಿಜೆಐ ರಂಜನ್ ಗೊಗೋಯಿ ಅಯೋಧ್ಯೆ ಪ್ರಕರಣದ ವಿಚಾರಣೆಯಲ್ಲಿದ್ದ ಕಾರಣ ಇಂದು ಕಲಾಪಪಟ್ಟಿಗೆ ಸೇರ್ಪಡೆಯಾಗಿಲ್ಲ ಎಂದು ಹೇಳಿದರು. 

ಭಾರೀ ಮೊತ್ತವನ್ನು ಒಳಗೊಂಡಿರುವ ಹಣ ಅಕ್ರಮ ವರ್ಗಾವಣೆಯ ಪ್ರಕರಣ ಇದಾಗಿದೆ ಎಂದು ಜಾರಿ ನಿರ್ದೇಶನಾಲಯ ಮತ್ತು ಸಿಬಿಐ ಪರ ವಕೀಲರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ನ್ಯಾಯಾಲದ ಗಮನಕ್ಕೆ ತಂದರು. ಅರ್ಜಿದಾರರು ಕಾನೂನಿಗೆ ತಲೆಬಾಗುವ ನಾಗರಿಕರಾಗಿದ್ದು ಸಮಾಜದಲ್ಲಿ ಅವರಿಗಿರುವ ಗೌರವವನ್ನು ಉಳಿಸಿಕೊಳ್ಳಬೇಕಿದೆ. ಅವರು ರಾಜ್ಯಸಭೆಯ ಹಾಲಿ ಸದಸ್ಯರು. ಅವರ ವಿರುದ್ಧ ಈ ಹಿಂದೆ ಯಾವುದೇ ಆರೋಪವಿಲ್ಲ. ಅವರು ಕಾನೂನಿನ ಕಣ್ಣಿಗೆ ಮಣ್ಣೆರಚಲು ಸಾಧ್ಯವೇ ಇಲ್ಲ. ಅವರನ್ನು ಬಂಧಿಸಿ ಕಸ್ಟಡಿಯಲ್ಲಿ ವಿಚಾರಣೆ ನಡೆಸುವುದನ್ನು ಸಮರ್ಥಿಸಲಾಗದು ಎಂದು ಸಿಬಲ್ ನ್ಯಾಯಾಲಯಕ್ಕೆ ಮನವಿ ಮಾಡಿಕೊಂಡರು. 


ತುರ್ತು ಲಿಸ್ಟಿಂಗ್‌ಗೆ ಸಿಜೆಐಗೆ ಸಲ್ಲಿಕೆ

ತಮ್ಮ ಅರ್ಜಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌ನ ನೋಂದಣಿ ವಿಭಾಗದಿಂದ ಕ್ರಮಸಂಖ್ಯೆ ದೊರಕಿದೆ ಎಂದು ಕಪಿಲ್ ಸಿಬಲ್ ಹೇಳಿದಾಗ 'ಕ್ಷಮಿಸಿ ಸಿಬಲ್, ನಾವು ಈ ಅರ್ಜಿಯನ್ನು ವಿಚಾರಣೆ ನಡೆಸುವಂತಿಲ್ಲ. ನೀವು ಎಲ್ಲಾ ಶಿಷ್ಟಾಚಾರಗಳನ್ನು ಮಾಡಿ ಮುಗಿಸಿ.
ಈ ಅರ್ಜಿಯನ್ನು ತುರ್ತು ಲಿಸ್ಟಿಂಗ್(ಕ್ರಮಪಟ್ಟಿಗೆ ಸೇರಿಸಲು) ಮಾಡುವಂತೆ ಮುಖ್ಯ ನ್ಯಾಯಾಧೀಶರಿಗೆ ಕಳಿಸುತ್ತೇನೆ. ಅವರು ಈ ಬಗ್ಗೆ ಆದೇಶ ಹೊರಡಿಸಲಿದ್ದಾರೆ ಎಂದು ನ್ಯಾ. ಎನ್‌ವಿ ರಮಣ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News