Big Breaking News: ಐಎನ್ ಎಕ್ಸ್ ಮೀಡಿಯಾ ಪ್ರಕರಣ: ಭಾರೀ ಹೈಡ್ರಾಮದ ನಂತರ ಪಿ.ಚಿದಂಬರಂ ಬಂಧನ

Update: 2019-08-21 18:07 GMT

ಹೊಸದಿಲ್ಲಿ,ಆ.21: ಐಎನ್‌ಎಕ್ಸ್ ಮೀಡಿಯಾ ಭ್ರಷ್ಟಾಚಾರ ಪ್ರಕರಣದಲ್ಲಿ ಮಾಜಿ ಕೇಂದ್ರ ವಿತ್ತ ಸಚಿವ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ಪಿ.ಚಿದಂಬರಂ ಅವರನ್ನು ಸಿಬಿಐ ಬುಧವಾರ ರಾತ್ರಿ ದಕ್ಷಿಣ ದಿಲ್ಲಿಯ ಜೋರಬಾಗ್‌ನಲ್ಲಿಯ ಅವರ ನಿವಾಸದಿಂದ ವಶಕ್ಕೆ ತೆಗೆದುಕೊಂಡಿದೆ. ವಿಚಾರಣೆಗಾಗಿ ಅವರನ್ನು ಸಿಬಿಐ ಕಚೇರಿಗೆ ಕರೆದೊಯ್ಯಲಾಗಿದೆ. ವಿಚಾರಣೆಯ ಬಳಿಕ ಅವರನ್ನು ಬಂಧಿಸಿ ಬುಧವಾರ ಸಿಬಿಐ ನ್ಯಾಯಾಲಯದಲ್ಲಿ ಹಾಜರುಪಡಿಸುವ ಸಾಧ್ಯತೆಗಳು ಬಲವಾಗಿವೆ. ಘೋಷಣೆಗಳನ್ನು ಕೂಗುತ್ತಿದ್ದ ಬೆಂಬಲಿಗರು,ಶಾಂತಿಯನ್ನು ಕಾಯ್ದುಕೊಳ್ಳಲು ಆಗಮಿಸಿದ್ದ ಪೊಲೀಸರು,ಮಾಧ್ಯಮ ಪ್ರತಿನಿಧಿಗಳ ಉಪಸ್ಥಿತಿಯಲ್ಲಿ ಭಾರೀ ನಾಟಕೀಯ ವಿದ್ಯಮಾನಗಳ ನಡುವೆಯೇ ಸಿಬಿಐ ಅಧಿಕಾರಿಗಳು ಒಂದು ಗಂಟೆಗೂ ಹೆಚ್ಚಿನ ಕಾಲ ಪರದಾಡಿ,ಕೊನೆಗೂ ನಿವಾಸದ ಆವರಣ ಗೋಡೆ ಮತ್ತು ಛಾವಣಿಯನ್ನು ಹತ್ತಿ ಒಳ ಪ್ರವೇಶಿಸಿ ಚಿದಂಬರಂ ಅವರನ್ನು ತಮ್ಮ ವಶಕ್ಕೆ ತೆಗೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಐಎನ್‌ಎಕ್ಸ್ ಮೀಡಿಯಾ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ಸುಮಾರು 24 ಗಂಟೆಗಳಿಂದಲೂ ಸಿಬಿಐ ಹುಡುಕಾಡುತ್ತಿದ್ದ ಚಿದಂಬರಂ ಸಂಜೆ ಸುದ್ದಿಗೋಷ್ಠಿಯಲ್ಲಿ ಮಾತನಾಡಲು ಕಾಂಗ್ರೆಸ್ ಕೇಂದ್ರ ಕಚೇರಿಯಲ್ಲಿ ಪ್ರತ್ಯಕ್ಷರಾಗುವುದರೊಂದಿಗೆ ಸಿಬಿಐ ಅವರ ಬೆನ್ನಿಗೆ ಬಿದ್ದಿತ್ತು.

 ಬಂಧನದ ವಿರುದ್ಧ ಚಿದಂಬರಂ ಅವರಿಗೆ ಮಧ್ಯಂತರ ರಕ್ಷಣೆಯನ್ನು ವಿಸ್ತರಿಸಲು ಮಂಗಳವಾರ ದಿಲ್ಲಿ ಉಚ್ಚ ನ್ಯಾಯಾಲಯವು ನಿರಾಕರಿಸಿದ ಬಳಿಕ 73ರ ಹರೆಯದ ಚಿದಂಬರಂ ಸಾರ್ವಜನಿಕವಾಗಿ ಕಾಣಿಸಿಕೊಂಡಿರಲಿಲ್ಲ. ಅವರ ಬಂಧನಕ್ಕಾಗಿ ಸಿಬಿಐ ಎರಡು ಬಾರಿ ಅವರ ನಿವಾಸಕ್ಕೆ ತೆರಳಿದ್ದರೂ ಅವರು ಪತ್ತೆಯಾಗಿರಲಿಲ್ಲ. ಅವರು ದೇಶವನ್ನು ತೊರೆಯುವುದನ್ನು ತಡೆಯಲು ಅವರ ವಿರುದ್ಧ ಎರಡು ಲುಕ್‌ಔಟ್ ನೋಟಿಸ್‌ಗಳನ್ನು ಸಿಬಿಐ ಹೊರಡಿಸಿತ್ತು.

ಸುದ್ದಿಗೋಷ್ಠ್ಠಿಯಲ್ಲಿ ತನ್ನ ಸಂಕ್ಷಿಪ್ತ ಮಾತುಗಳನ್ನು ಮುಗಿಸಿದ ಚಿದಂಬರಂ ಪಕ್ಷದ ಹಿರಿಯ ನಾಯಕರೂ ಸರ್ವೋಚ್ಚ ನ್ಯಾಯಾಲಯದ ಖ್ಯಾತ ನ್ಯಾಯವಾದಿಗಳೂ ಆಗಿರುವ ಕಪಿಲ ಸಿಬಲ್ ಮತ್ತು ಅಭಿಷೇಕ ಮನು ಸಿಂಘ್ವಿ ಅವರೊಂದಿಗೆ ಕಾಂಗ್ರೆಸ್ ಕೇಂದ್ರ ಕಚೇರಿಯಿಂದ ಹೊರಟು ಜೋರ್‌ಬಾಗ್ ನಿವಾಸವನ್ನು ತಲುಪಿದ ಬೆನ್ನಿಗೇ ನಿವಾಸದ ಹೊರಗೆ ಭಾರೀ ಕೋಲಾಹಲ ಸೃಷ್ಟಿಯಾಗಿತ್ತು.

 2007ರಲ್ಲಿ ಕೇಂದ್ರ ವಿತ್ತ ಸಚಿವರಾಗಿದ್ದ ಚಿದಂಬರಂ ಪುತ್ರ ಕಾರ್ತಿ ಚಿದಂಬರಂ ಒತ್ತಾಸೆಯ ಮೇರೆಗೆ ಐಎನ್‌ಎಕ್ಸ್ ಮೀಡಿಯಾ ಸಂಸ್ಥೆಯಲ್ಲಿ ಭಾರೀ ಮೊತ್ತದ ವಿದೇಶಿ ನೇರ ಹೂಡಿಕೆಗೆ ನಿಯಮಗಳನ್ನು ಉಲ್ಲಂಘಿಸಿ ಅನುಕೂಲವನ್ನು ಮಾಡಿಕೊಟ್ಟಿದ್ದ ಆರೋಪ ಅವರ ಮೇಲಿದೆ. ಈ ವಹಿವಾಟಿನಲ್ಲಿ ಕಾರ್ತಿ ಭಾರೀ ಮೊತ್ತದ ಲಂಚವನ್ನು ಪಡೆದಿದ್ದರು ಎಂದೂ ಆರೋಪಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News