ವಿಟ್ಲ ರೋಟರಿ ಕ್ಲಬ್, ವಿಠಲ ವಿದ್ಯಾ ಸಂಘದ ವತಿಯಿಂದ "ಸಾಧಕರೊಂದಿಗೆ ನಾವು" ಕಾರ್ಯಕ್ರಮ

Update: 2019-08-21 18:42 GMT

ವಿಟ್ಲ: ವಿಟ್ಲ ರೋಟರಿ ಕ್ಲಬ್, ವಿಠಲ ವಿದ್ಯಾ ಸಂಘದ ವತಿಯಿಂದ ಮಂಗಳೂರು ಪ್ಯಾರಡೈಸ್ ಸಹಯೋಗದೊಂದಿಗೆ "ಸಾಧಕರೊಂದಿಗೆ ನಾವು" ಕಾರ್ಯಕ್ರಮವು ವಿಠಲ ಪದವಿಪೂರ್ವ ಕಾಲೇಜಿನ ಸುವರ್ಣ ರಂಗ ಮಂದಿರದಲ್ಲಿ ಬುಧವಾರ ನಡೆಯಿತು.

ರಸ್ತೆ ಬದಿ ಅಲೆದಾಡುವ ಅಶಕ್ತರ ಬಾಳಿಗೆ ಬೆಳಕಾದ ತಲಪಾಡಿ ’ಸ್ನೇಹಾಲಯ’ ಸಂಸ್ಥೆಯ ಸ್ಥಾಪಕ ಜೋಸೆಫ್ ಕ್ರಾಸ್ತಾ, ’ಅಕ್ಷರ ಸಂತ’ ಹರೇಕಳ ಹಾಜಬ್ಬ, ಸಾವಿನ ಕದತಟ್ಟಿ ಮತ್ತೆ ಜೀವನಾರಂಭಿಸಿದ ’ಹಳ್ಳಿಮನೆ ರೊಟ್ಟೀಸ್’ ಉದ್ಯಮಿ ಶಿಲ್ಪಾ ಅವರು ಭಾಗವಹಿಸಿ ತಮ್ಮ ಅನುಭವಗಾಥೆಯನ್ನು ತೆರೆದಿಟ್ಟರು. ಬಳಿಕ ಅವರನ್ನು ಸನ್ಮಾನಿಸಲಾಯಿತು.

ಜೋಸೆಫ್ ಕ್ರಾಸ್ತಾ ಮಾತನಾಡಿ ಬಂಧು ಬಳಗವಿಲ್ಲದೇ ಬೀದಿ ಪಾಲಾಗಿದ್ದ ಆಶಕ್ತರಿಗೆ ಸ್ನೇಹಾಲಯದಲ್ಲಿ ಆಶ್ರಯ ನೀಡಲಾಗಿದೆ. ಇಲ್ಲಿ ಹಿಂದೂ, ಮುಸ್ಲಿಮರು, ಕ್ರೈಸ್ತರು  ಸೇರಿದಂತೆ ಹಲವು ಮಂದಿ ತಮ್ಮ ಜೀವನ ನಡೆಸುತ್ತಿದ್ದಾರೆ. ಬಡವರ, ಹಾಗೂ ಆಶಕ್ತರ ಸೇವೆಯನ್ನು ದೇವರು ಮೆಚ್ಚುತ್ತಾನೆ ಎಂದರು.

ಹಳ್ಳಿಮನೆ ರೊಟ್ಟೀಸ್ ಉದ್ಯಮಿ ಶಿಲ್ಪಾ ಮಾತನಾಡಿ ನಮ್ಮ ನಡತೆ ಉತ್ತಮವಾಗಿದ್ದರೆ ಗೌರವ ಸಿಗುತ್ತದೆ. ಸಮಸ್ಯೆಗಳು ಎದುರಾದಾಗ ಧೈರ್ಯದಿಂದ ಎದುರಿಸಿ ಗೆಲ್ಲಬೇಕು. ಶ್ರಮಪಟ್ಟರೆ ಯಶಸ್ಸು ಖಂಡಿತ ಸಾಧ್ಯ ಎಂದರು.

ಅಕ್ಷರ ಸಂತ’ ಹರೇಕಳ ಹಾಜಬ್ಬ ಮಾತನಾಡಿ ನಾನು ಕಷ್ಟದಿಂದಲೇ ಜೀವನ ನಡೆಸಿಕೊಂಡು ಬಂದಿದ್ದೇನೆ. ಬಡ ಮಕ್ಕಳು ಶಿಕ್ಷಣ ವಂಚಿರಾಗಬಾರದು ಎಂಬ ಉದ್ದೇಶದಿಂದ ಶಾಲೆ ನಿರ್ಮಿಸಲು ಮುಂದಾಗಿದ್ದೇನೆ. ಪ್ರತಿಯೊಬ್ಬರು ನನಗೆ ಬೆನ್ನುಲೆಬು ಆಗಿ ನಿಂತಿದ್ದರಿಂದ ಸಾಧನೆ ಮಾಡಲು ಸಾಧ್ಯವಾಯಿತು ಎಂದರು.

ರೋಟರಿ ಕ್ಲಬ್ ಅಧ್ಯಕ್ಷರಾದ ಜಯರಾಮ ರೈ ಅಧ್ಯಕ್ಷತೆ ವಹಿಸಿದ್ದರು. ವಿಠಲ ವಿದ್ಯಾ ಸಂಘದ  ಸಂಚಾಲಕ ಎಲ್.ಎನ್.ಕೂಡೂರು, ರೋಟರಿ ವಲಯ ಉಪಗವರ್ನರ್ ರಿತೇಶ್ ಬಾಳಿಗಾ, ರೋಟರಿ ವಲಯ ಸೇನಾನಿ ಸಂಜೀವ ಎಂ, ರೋಟರಿ ಕ್ಲಬ್ ಮಾಜಿ ಅಧ್ಯಕ್ಷ ಡಾ. ಚರಣ್ ಕಜೆ, ಬಾಬು ಕೆ.ವಿ, ಪದ್ಮಯ್ಯ ಗೌಡ, ಅವಿಜ್ಞಾ ಜೆ ರೈ ಭಾಗವಹಿಸಿದ್ದರು.

ಕಾಲೇಜು ಪ್ರಾಂಶುಪಾಲ ಆದರ್ಶ ಚೊಕ್ಕಾಡಿ ಸ್ವಾಗತಿಸಿದರು. ರೋಟರಿ ಕ್ಲಬ್ ಕಾರ್ಯದರ್ಶಿ ಅಣ್ಣಪ್ಪ ಸಾಸ್ತಾನ್ ವಂದಿಸಿದರು. ಕಾರ್ಯಕ್ರಮದ ಸಂಯೋಜಕ ರಶೀದ್ ವಿಟ್ಲ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News