​ಚಿದಂಬರಂ ಬಂಧನಕ್ಕೆ ಕಾರಣವಾದದ್ದು ಈ ಮಹಿಳೆಯ ಹೇಳಿಕೆ !

Update: 2019-08-22 06:26 GMT

ಹೊಸದಿಲ್ಲಿ: ಐಎನ್‌ಎಕ್ಸ್ ಮೀಡಿಯಾ ಹಗರಣದ ಸಂಬಂಧ ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ ಬಂಧನಕ್ಕೆ ಕಾರಣವಾದದ್ದು ಇಂದ್ರಾಣಿ ಮುಖರ್ಜಿ ಹಾಗೂ ಆಕೆಯ ಪತಿ ಪೀಟರ್ ಮುಖರ್ಜಿಯವರ ಹೇಳಿಕೆ ಎನ್ನುವ ಕುತೂಹಲಕಾರಿ ಅಂಶ ಬೆಳಕಿಗೆ ಬಂದಿದೆ.

ಐಎನ್‌ಎಕ್ಸ್ ಮೀಡಿಯಾ ಮಾಲಕರಾಗಿದ್ದ ಈ ಇಬ್ಬರು ಸಿಬಿಐ ಮತ್ತು ಕಾನೂನು ಜಾರಿ ನಿರ್ದೇಶನಾಲಯ ಮುಂದೆ ಹೇಳಿಕೆ ನೀಡಿ, "2006ರಲ್ಲಿ ಹಣಕಾಸು ಸಚಿವರಾಗಿದ್ದ ಪಿ.ಚಿದಂಬರಂ ಅವರನ್ನು ನಾರ್ಥ್ ಬ್ಲಾಕ್ ಕಚೇರಿಯಲ್ಲಿ ಭೇಟಿ ಮಾಡಿದಾಗ, ಮಗ ಕಾರ್ತಿಯನ್ನು ಭೇಟಿ ಮಾಡುವಂತೆ ಸೂಚಿಸಿದರು ಹಾಗೂ ಆತನ ವ್ಯವಹಾರಕ್ಕೆ ನೆರವು ನೀಡುವಂತೆ ಕೋರಿದರು" ಎಂದು ಈ ದಂಪತಿ ತಿಳಿಸಿದ್ದರು.

ಈ ಹೇಳಿಕೆ ಪಿ.ಚಿದಂಬರಂ ವಿರುದ್ಧ ಸಿಬಿಐ ಹಾಗೂ ಇಡಿ ತನಿಖೆಗೆ ಪ್ರಮುಖ ಪುರಾವೆಯಾಗಿತ್ತು. 2018ರ ಫೆ. 17ರಂದು ನೀಡಿದ ಈ ಹೇಳಿಕೆ ಇದೀಗ ನ್ಯಾಯಾಲಯ ದಾಖಲೆಯ ಭಾಗವಾಗಿದೆ. ಬಳಿಕ ದೆಹಲಿಯ ಹಯಾತ್ ಹೋಟೆಲ್‌ನಲ್ಲಿ ಕಾರ್ತಿಯನ್ನು ಭೇಟಿ ಮಾಡಿದಾಗ 10 ಲಕ್ಷ ಡಾಲರ್ ಲಂಚ ನೀಡುವಂತೆ ಆಗ್ರಹಿಸಿದ್ದ ಎನ್ನಲಾಗಿದೆ.

ಇದಕ್ಕಾಗಿ ಯೋಜನೆ ರೂಪಿಸಿದ ಮುಖರ್ಜಿ ದಂಪತಿ, ಕಾರ್ತಿಯ ಅಡ್ವಾಂಟೇಜ್ ಸ್ಟ್ರಾಟಜಿಕ್ ಕನ್ಸಲ್ಟಿಂಗ್ ಪ್ರೈವೇಟ್ ಲಿಮಿಟೆಡ್‌ನಲ್ಲಿ (ಎಎಸ್‌ಸಿಪಿಎಲ್) ತೊಡಗಿಸಿಕೊಂಡರು. ಇದರಂತೆ ಎಎಸ್‌ಸಿಪಿಎಲ್ ಹಾಗೂ ಸಹವರ್ತಿ ಕಂಪನಿಗಳು 7 ಲಕ್ಷ ಡಾಲರ್ ಮೌಲ್ಯದ ನಾಲ್ಕು ಇನ್‌ವೈಸ್ ನೀಡಿ, ಐಎನ್‌ಎಕ್ಸ್ ಮೀಡಿಯಾದಿಂದ ಹಣ ಪಡೆದವು. ಆ ಬಳಿಕ ವಿದೇಶಿ ಬಂಡವಾಳ ಉತ್ತೇಜನ ಮಂಡಳಿ, ಅವ್ಯವಹಾರ ಮುಚ್ಚಿ ಹಾಕಲು ಒಪ್ಪಿಗೆ ನೀಡಿತು ಎಂದು ಆಪಾದಿಸಲಾಗಿದೆ.

2007ರ ಮಾರ್ಚ್ ತಿಂಗಳಲ್ಲಿ ಐಎನ್‌ಎಕ್ಸ್ ಮೀಡಿಯಾ ವಿದೇಶಿ ಹೂಡಿಕೆಯ ಷರತ್ತುಗಳನ್ನು ಉಲ್ಲಂಘಿಸಿದ್ದಾಗಿ ಸಿಬಿಐ ಅಧಿಕಾರಿಗಳು ಹೇಳಿದ್ದಾರೆ. 4.62 ಕೋಟಿ ರೂ. ಹಣ ಸಂಗ್ರಹಕ್ಕೆ ನೀಡಿದ ಅನುಮತಿ ಬದಲಾಗಿ, 305 ಕೋಟಿ ರೂ. ಸಂಗ್ರಹಿಸಿದೆ ಎಂದು ಹೇಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News