ದಲಿತ ನಾಯಕ ಚಂದ್ರಶೇಖರ್ ಆಝಾದ್, 90 ಮಂದಿಯ ಬಂಧನ

Update: 2019-08-22 14:08 GMT

ಹೊಸದಿಲ್ಲಿ,ಆ.22: 16ನೇ ಶತಮಾನದ ಸಂತಕವಿ ರವಿದಾಸ್ ಅವರ ಮಂದಿರವನ್ನು ನೆಲಸಮಗೊಳಿಸಿದ್ದನ್ನು ವಿರೋಧಿಸಿ ನಡೆಯುತ್ತಿದ್ದ ಬೃಹತ್ ಪ್ರತಿಭಟನೆ ಬುಧವಾರ ಸಂಜೆ ಹಿಂಸಾರೂಪಕ್ಕಿಳಿದ ಬಳಿಕ ದಲಿತ ನಾಯಕ ಹಾಗೂ ಭೀಮ್ ಆರ್ಮಿಯ ಮುಖ್ಯಸ್ಥ ಚಂದ್ರಶೇಖರ ಆಝಾದ್ ಮತ್ತು ಇತರ 90 ಜನರನ್ನು ಪೊಲೀಸರು ಬಂಧಿಸಿದ್ದಾರೆ.

ಉದ್ರಿಕ್ತ ಪ್ರತಿಭಟನಾಕಾರರು ಹಲವಾರು ವಾಹನಗಳಿಗೆ ಹಾನಿಯನ್ನುಂಟು ಮಾಡಿದ್ದಾರೆ ಮತ್ತು ಎರಡು ಬೈಕ್‌ಗಳಿಗೆ ಬೆಂಕಿ ಹಚ್ಚಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯಲ್ಲಿ 15 ಪೊಲೀಸ್ ಸಿಬ್ಬಂದಿಗಳು ಸೇರಿದಂತೆ ಹಲವರು ಗಾಯಗೊಂಡಿದ್ದಾರೆ.

 ದಿಲ್ಲಿಯ ತುಘ್ಲಕಾಬಾದ್‌ನಲ್ಲಿಯ ರವಿದಾಸ ಮಂದಿರವನ್ನು ಸರ್ವೋಚ್ಚ ನ್ಯಾಯಾಲಯದ ನಿರ್ದೇಶದ ಮೇರೆಗೆ ಆ.10ರಂದು ನೆಲಸಮಗೊಳಿಸಲಾಗಿತ್ತು. ಮಂದಿರವನ್ನು ಅದೇ ಜಾಗದಲ್ಲಿ ಅಥವಾ ಪರ್ಯಾಯ ಸ್ಥಳದಲ್ಲಿ ಮರುನಿರ್ಮಿಸುವಂತೆ ಹಲವಾರು ಪಕ್ಷಗಳು ಆಗ್ರಹಿಸುವುದರೊಂದಿಗೆ ನೆಲಸಮ ವಿಷಯವೀಗ ರಾಜಕೀಯ ಬಣ್ಣವನ್ನು ಪಡೆದುಕೊಂಡಿದೆ. ಮಂದಿರವನ್ನು ನೆಲಸಮಗೊಳಿಸಿರುವುದು ಕೆಳಜಾತಿಗಳ ಜನರೇ ಹೆಚ್ಚಿರುವ ರವಿದಾಸ ಪಂಥದ ಅನುಯಾಯಿಗಳ ಪಾಲಿಗೆ ಭಾವನಾತ್ಮಕ ವಿಷಯವಾಗಿದೆ.

‘ದಲಿತರ ಧ್ವನಿಗಳಿಗೆ ಮಾಡಿರುವ ಈ ಅವಮಾನವು ಅಸಹನೀಯವಾಗಿದೆ. ಇದೊಂದು ಭಾವನಾತ್ಮಕ ವಿಷಯವಾಗಿದೆ. ಅವರ ಧ್ವನಿಗಳನ್ನು ಗೌರವಿಸಬೇಕಿದೆ ’ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅವರು ಗುರುವಾರ ಬೆಳಿಗ್ಗೆ ಟ್ವೀಟಿಸಿದ್ದಾರೆ.

ಬುಧವಾರ ಸಂಜೆ 7:30ರ ಸುಮಾರಿಗೆ ರವಿದಾಸ ಮಾರ್ಗದಲ್ಲಿ ಸೇರಿದ್ದ ಪ್ರತಿಭಟನಾಕಾರರ ಗುಂಪು ಶಾಂತಿಯನ್ನು ಕಾಯ್ದುಕೊಳ್ಳುವಂತೆ ಪೊಲೀಸರ ಮನವಿಯ ಹೊರತಾಗಿಯೂ ಕಲ್ಲು ತೂರಾಟವನ್ನು ಆರಂಭಿಸಿತ್ತು ಮತ್ತು ಪೊಲೀಸರ ಮೇಲೆ ದಾಳಿ ನಡೆಸಿತ್ತು ಎಂದು ಸುದ್ದಿಗಾರರಿಗೆ ತಿಳಿಸಿದ ಹಿರಿಯ ಪೊಲೀಸ್ ಅಧಿಕಾರಿ ಚಿನ್ಮಯ ಬಿಸ್ವಾಲ್ ಅವರು, ಪ್ರತಿಭಟನಾಕಾರರು ಗಾಯಗೊಂಡಿದ್ದಾರೆ ಎಂಬ ವರದಿಗಳನ್ನು ನಿರಾಕರಿಸಿದರು.

ಕೇಂದ್ರ ಸರಕಾರವು ಮಂದಿರವನ್ನು ಪುನರ್‌ನಿರ್ಮಿಸಬೇಕು ಇಲ್ಲವೇ ಜಾಗವನ್ನು ದಲಿತ ಸಮುದಾಯಕ್ಕೆ ಹಸ್ತಾಂತರಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸುತ್ತಿದ್ದಾರೆ.

ಸಂತ ರವಿದಾಸ ಅವರು 15 ಮತ್ತು 16ನೇ ಶತಮಾನಗಳ ನಡುವಿನ ಭಕ್ತಿ ಚಳವಳಿಯ ಪ್ರಮುಖರಲ್ಲೊಬ್ಬರಾಗಿದ್ದಾರೆ. ಅವರು ರಚಿಸಿರುವ ಶ್ಲೋಕಗಳು ಸಿಕ್ಖರ ಪವಿತ್ರ ಗ್ರಂಥವಾಗಿರುವ ಗುರು ಗ್ರಂಥ ಸಾಹಿಬ್‌ನಲ್ಲಿ ಸೇರ್ಪಡೆಗೊಂಡಿವೆ. ಅವರನ್ನು 21ನೇ ಶತಮಾನದ ರವಿದಾಸ ಪಂಥದ ಸ್ಥಾಪಕರು ಎಂದು ಪರಿಗಣಿಸಲಾಗಿದೆ.

ಆ.13ರಂದು ಪಂಜಾಬಿನಲ್ಲಿಯೂ ದಲಿತರು ಇಂತಹುದೇ ಭಾರೀ ಪ್ರತಿಭಟನೆಯನ್ನು ನಡೆಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News