ಮಂದಾರದ 27 ಕುಟುಂಬಗಳಿಗೆ ಶಾಶ್ವತ ಪರಿಹಾರ: ಸಚಿವ ಕೋಟಾ ಶ್ರೀನಿವಾಸ ಪೂಜಾರಿ

Update: 2019-08-22 12:04 GMT

ಮಂಗಳೂರು, ಆ. 22 : ನಗರದ ಪಚ್ಚನಾಡಿಯಲ್ಲಿ ತ್ಯಾಜ್ಯ ರಾಶಿ ಕುಸಿತದಿಂದ ಸಂತ್ರಸ್ತರಾಗಿರುವ ಮಂದಾರಬೈಲ್‌ನ 27 ಕುಟುಂಬಗಳಿಗೆ ಬೇರೆಡೆ ನಿವೇಶನ ನೀಡಿ, ಮನೆ ನಿರ್ಮಾಣಕ್ಕೆ ವಿಶೇಷ ಪ್ಯಾಕೇಜ್ ವ್ಯವಸ್ಥೆ ಮಾಡಲಾಗುವುದು ಎಂದು ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅವರು ಹೇಳಿದರು.

ದ.ಕ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ಪ್ರವಾಹ ಪೀಡಿತ ಪ್ರದೇಶಗಳ ಕುರಿತು ಪರಿಶೀಲನಾ ಸಭೆಯಲ್ಲಿ ವಿಷಯ ಪ್ರಸ್ತಾವಿಸಿದ ಅವರು ಈ ಬಗ್ಗೆ ಜಿಲ್ಲಾಡಳಿತದಿಂದ ಕೈಗೊಂಡಿರುವ ಕ್ರಮಗಳ ಬಗ್ಗೆ ವಿವರ ಕೋರಿದರು. ಪಚ್ಚನಾಡಿಯ ತ್ಯಾಜ್ಯ ನಿರ್ವಹಣೆಗೂ ಶಾಶ್ವತ ಪರಿಹಾರ ಯೋಜನೆಯನ್ನು ನಿರ್ಮಿಸಲು ಕ್ರಮ ವಹಿಸಲಾಗುವುದು ಎಂದು ಸಚಿವರು ಈ ಸಂದರ್ಭ ತಿಳಿಸಿದರು.

ಸರಕಾರದ ನೆರವು ಅತೀ ಅಗತ್ಯ

ಮಂದಾರದಲ್ಲಿ ಸಂಭವಿಸಿದ ಹಾನಿಯ ಬಗ್ಗೆ ಮಾಹಿತಿ ನೀಡಿದ ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್, ಭಾರಿ ಮಳೆಗೆ ಪಚ್ಚನಾಡಿಯಲ್ಲಿ ತ್ಯಾಜ್ಯದ ರಾಶಿ ಕುಸಿತಗೊಂಡು ಕೆಳಗಿನ ಮಂದಾರಬೈಲ್‌ನ ಸುಮಾರ 6 ಕಿ.ಮಿ.ಪ್ರದೇಶ ಬಾಧಿತವಾಗಿದೆ. ಇಲ್ಲಿರುವ 27 ಕುಟುಂಬಗಳನ್ನು ತಾತ್ಕಾಲಿಕ ವಾಗಿ ಕರ್ನಾಟಕ ಗೃಹಮಂಡಳಿಯ ನಿವೇಶನಗಳಿಗೆ ಸ್ಥಳಾಂತರಿಸಿ ವಾಸ್ತವ್ಯ ಕಲ್ಪಿಸಲಾಗಿದೆ ಎಂದರು.

ಈ ಪ್ರದೇಶದಲ್ಲಿ ವಾಸವಿರುವ ಕುಟುಂಬಗಳಿಗೆ ಬೇರೆಡೆ ನಿವೇಶನಗಳನ್ನು ಸ್ಥಳಾಂತರ ಮಾಡುವುದು ಶಾಶ್ವತ ಪರಿಹಾರವಾಗಿದೆ. ಈ ನಿಟ್ಟಿನಲ್ಲಿ  ಜಿಲ್ಲಾಡಳಿತದಿಂದ ನಿವೇಶನಗಳನ್ನು ಗುರುತಿಸುವ ಕಾರ್ಯ ನಡೆದಿದೆ. ಆದರೆ ಮನೆ ನಿರ್ಮಾಣಕ್ಕೆ ಅನುದಾನದ ಅಗತ್ಯವಿದೆ. ಇದನ್ನು ಕೂಡಾ ವಿಪತ್ತು ಎಂದೇ ಪರಿಗಣಿಸಿ ರಾಜ್ಯ ಸರಕಾರ ಮಳೆ ಸಂತಸ್ತರಿಗೆ ಮನೆ ನಿರ್ಮಿಸಲು ನೀಡುತ್ತಿರುವ 5 ಲಕ್ಷ ರೂ. ವಿಶೇಷ ಪ್ಯಾಕೇಜ್‌ನ್ನು ಇಲ್ಲಿನ ಸಂತ್ರಸ್ತರಿಗೂ ನೀಡಬೇಕು ಎಂದು ಸಚಿವರಲ್ಲಿ ಜಿಲ್ಲಾಧಿಕಾರಿ ಮನವಿ ಮಾಡಿದರು.

ಪಚ್ಚನಾಡಿ ತ್ಯಾಜ್ಯವನ್ನು ವೈಜ್ಞಾನಿಕವಾಗಿ ನಿರ್ವಹಣೆ ಮಾಡಿ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಮುಂದೆ ಈಗಾಗಲೇ ನಾಲ್ಕು ಮಾದರಿಗಳಿವೆ. ಇವುಗಳಲ್ಲಿ ಯಾವುದು ಆ ಪ್ರದೇಶಕ್ಕೆ ಸೂಕ್ತ ಹಾಗೂ ಶಾಶ್ವತ ಪರಿಹಾರ ನೀಡುತ್ತದೆ ಎಂದು ಪರಿಶೀಲಿಸಿ ಸೆಪ್ಟಂಬರ್ ತಿಂಗಳ ಬಳಿಕ ಪೂರಕ ಕ್ರಮವಹಿಸಲಾಗುವುದು. ಯೋಜನೆ ಅನುಷ್ಟಾನ ರಾಜ್ಯ ಸರಕಾರದಿಂದಲೇ ನಡೆಯಬೇಕಾಗಿದೆ. ಆದುದರಿಂದ ರಾಜ್ಯ ಸರಕಾರದ ಮಟ್ಟದಲ್ಲಿ ಇದಕ್ಕೆ ವಿಶೇಷ ಯೋಜನೆ ರೂಪಿಸಬೇಕೆಂದು ಜಿಲ್ಲಾಧಿಕಾರಿ ತಿಳಿಸಿದರು.

ಆ ಪ್ರದೇಶದಲ್ಲಿ ನೀರು ಮಲೀನವಾಗಿದೆ. ಆದರೆ ಈಗಾಗಲೇ ಪರಿಸರ ಮಾಲಿನ್ಯ ಮಂಡಳಿ, ಎನ್‌ಐಟಿಕೆ ಹಾಗೂ ಭಾರತೀಯ ವಿಜ್ಞಾನ ಸಂಸ್ಥೆಯವರು ಬಂದು ಪರಿಶೀಲನೆ ನಡೆಸಿದ್ದಾರೆ. ಪಚ್ಚನಾಡಿ ತ್ಯಾಜ್ಯದಲ್ಲಿ ಕೈಗಾರಿಕಾ ತ್ಯಾಜ್ಯಗಳು ಹಾಗೂ ರಾಸಾಯನಿಕ ತ್ಯಾಜ್ಯಗಳು ಮಲೀನ ನೀರಿನಿಂದ ಪರಿಸರಕ್ಕೆ ಹೆಚ್ಚಿನ ಅಪಾಯ ಇಲ್ಲ ಎಂಬುದಾಗಿ ಅವರು ತಿಳಿಸಿದ್ದಾರೆ. ಆದರೆ ಇಲ್ಲಿರುವ ಬಾವಿಗಳಿಗೆ ಕ್ಲೋರಿನೈಶೇಷನ್ ಮಾಡಲಾಗಿದೆ ಎಂದು ಎಂದು ಅವರು ವಿವರಿಸಿದರು.

ಪರಿಸರದಲ್ಲಿ ಸಾಂಕ್ರಾಮಿಕ ರೋಗ ಹರಡದಂತೆ ಆರೋಗ್ಯ ಇಲಾಖೆ ವತಿಯಿಂದ ಕ್ರಮ ವಹಿಸಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ರಾಮಕೃಷ್ಣ ತಿಳಿಸಿದರು.

ಇದಕ್ಕೆ ಉತ್ತರಿಸಿದ ಸಚಿವರು ತ್ಯಾಜ್ಯದಿಂದ ಸಂತ್ರಸ್ತರಾದವರಿಗೆ ಮನೆ ನಿರ್ಮಾಣಕ್ಕೆ ವಿಶೇಷ ಪ್ಯಾಕೇಜಿನಡಿಯಲ್ಲಿ 5 ಲಕ್ಷ ರೂ. ನೀಡಿಕೆ ಮುಖ್ಯಮಂತ್ರಿಯವರನ್ನು ಭೇಟಿಯಾಗಿ ಕೋರಲಾಗುವುದು ಎಂದು ತಿಳಿಸಿದರು. ಇದಲ್ಲದೆ ತ್ಯಾಜ್ಯ ನಿರ್ವಹಣೆಗೆ ವಿಶೇಷ ಯೋಜನೆಯನ್ನು ಸಿದ್ಧಪಡಿಸುವಂತೆ ಹಾಗೂ ರಾಜ್ಯ ಸರಕಾರದ ಮಟ್ಟದಲ್ಲಿ ಇದರ ಅನುಷ್ಟಾನಕ್ಕೆ ಕ್ರಮಗಳು ಆಗುವಂತೆ ಪ್ರಯತ್ನಿಸಲಾಗುವುದು ಎಂದವರು ತಿಳಿಸಿದರು.

ಇದಲ್ಲದೆ ಕೈರಂಗಳ ಬಳಿ ಗುಡ್ಡಕುಸಿತದಿಂದ ಕೆಲವು ಮನೆಗಳು ಆಪಾಯದಲ್ಲಿ ಸಿಲುಕಿದ್ದು ಅವುಗಳಿಗೂ ನಿವೇಶನ ಹಾಗೂ ಮನೆನಿರ್ಮಾಣಕ್ಕೆ ಅನುದಾನ ವ್ಯವಸ್ಥೆ ಆಗಬೇಕಾಗಿದೆ ಎಂದು ಜಿಲ್ಲಾಧಿಕಾರಿ ವಿವರಿಸಿದರು.

ಉಸ್ತುವಾರಿ ಕಾರ್ಯದರ್ಶಿ ಬಿ.ಎಚ್. ಅನಿಲ್ ಕುಮಾರ್, ಶಾಸಕ ರಾಜೇಶ್ ನಾಯ್ಕ್, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಉಪಾಧ್ಯಕ್ಷೆ ಕಸ್ತೂರಿ ಪಂಜ, ಸಿಇಒ ಡಾ. ಆರ್. ಸೆಲ್ವಮಣಿ, ಮಂಗಳೂರು ಪೊಲೀಸ್ ಆಯುಕ್ತ ಹರ್ಷ ಪಿ.ಎಸ್., ಮೆಸ್ಕಾಂ ಎಂಡಿ ಸ್ನೇಹಾಲ್ ಆರ್. ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News