ಅಪ್ರಾಪ್ತೆಯನ್ನು ಗರ್ಭಿಣಿಯಾಗಿಸಿದ ಪ್ರಕರಣ: ಆರೋಪಿಗೆ 10 ವರ್ಷ ಕಠಿಣ ಶಿಕ್ಷೆ

Update: 2019-08-22 13:08 GMT

ಮಂಗಳೂರು, ಆ. 22: ಅಪ್ರಾಪ್ತ ಬಾಲಕಿ, ಹೈಸ್ಕೂಲ್ ವಿದ್ಯಾರ್ಥಿನಿಯೊಬ್ಬಳನ್ನು ಅತ್ಯಾಚಾರಗೈದು ಗರ್ಭಿಣಿಯಾಗಿಸಿದ ಪ್ರಕರಣದ ಆರೋಪಿಗೆ 10 ವರ್ಷ ಕಠಿಣ ಸಜೆ ಮತ್ತು ಐದು ಸಾವಿರ ರೂ. ದಂಡ ವಿಧಿಸಿ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಹಾಗೂ ವಿಶೇಷ ನ್ಯಾಯಾಲಯ (ಪೋಕ್ಸೋ) ಗುರುವಾರ ತೀರ್ಪು ನೀಡಿದೆ.

ಮೂಲತಃ ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಗಂತುಗೊಳ ನಿವಾಸಿ, ಪ್ರಸ್ತುತ ಮುಚ್ಚೂರು ನೀರುಡೆ ನಿವಾಸಿ ನಾಗಪ್ಪ (25) ಶಿಕ್ಷೆಗೊಳಗಾದ ಆರೋಪಿ.

ಪ್ರಕರಣ ವಿವರ

2016ರ ಎ. 21ರಂದು ಬೆಳಗ್ಗೆ  ಮನೆಯಲ್ಲಿ ಯಾರೂ ಇಲ್ಲದ ವೇಳೆ ಬಾಲಕಿಯ ಮನೆ ಪ್ರವೇಶಿಸಿದ ಆರೋಪಿ ಆಕೆಯನ್ನು ಅತ್ಯಾಚಾರ ಮಾಡಿದ್ದಾನೆ. ಇದಾದ ಬಳಿಕವೂ ಆರೋಪಿ ಪದೇಪದೇ ಆಕೆಯ ಮನೆಗೆ ತೆರಳಿ ಅತ್ಯಾಚಾರವೆಸಗಿದ ಪರಿಣಾಮ ಬಾಲಕಿ ಗರ್ಭಿಣಿಯಾಗಿದ್ದಳು.
ಬಾಲಕಿ ಅಸೌಖ್ಯದಿಂದ ವೈದ್ಯರ ಬಳಿ ತಪಾಸಣೆ ನಡೆಸಿದಾಗ ಗರ್ಭಿಣಿ ವಿಚಾರ ತಿಳಿದು ಬಂದಿತ್ತು. ಈ ಸಂದರ್ಭ ಆಕೆಯನ್ನು ವಿಚಾರಣೆ ನಡೆಸಿದಾಗ ಅತ್ಯಾಚಾರ ವಿಷಯ ಬಾಯಿಬಿಟ್ಟಿದ್ದಳು. ಬಾಲಕಿಗೆ ನಾಲ್ಕು ತಿಂಗಳ ಬಳಿಕ ಗರ್ಭಪಾತವಾಗಿತ್ತು. ಈ ಬಗ್ಗೆ ಬಜ್ಪೆ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ಪ್ರಕರಣ ದಾಖಲಾಗಿತ್ತು.

2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಹಾಗೂ ವಿಶೇಷ ನ್ಯಾಯಾಲಯದ ನ್ಯಾಯಾಧೀಶೆ ಬಿ.ಆರ್. ಪಲ್ಲವಿ ಪ್ರಕರಣದ ವಿಚಾರಣೆ ನಡೆಸಿ ಅಪರಾಧ ಸಾಬೀತಾದ ಹಿನ್ನೆಲೆಯಲ್ಲಿ  10 ವರ್ಷ ಕಠಿಣ ಸಜೆ ಮತ್ತು ಐದು ಸಾವಿರ ರೂ. ದಂಡ ವಿಧಿಸಿದೆ.

ಪರಿಹಾರ ಸಿಕ್ಕಿಲ್ಲ

ಬಾಲಕಿ ಹಾಗೂ ಪೋಷಕರು ಪ್ರಕರಣಕ್ಕೆ ಸಂಬಂಧಿಸಿ ಬಲವಾದ ಸಾಕ್ಷ್ಯ  ಹೇಳದ ಕಾರಣ ಬಾಲಕಿ ಪರಿಹಾರ ಪಡೆಯುವಲ್ಲಿಯೂ ವಿಫಲವಾಗಿದ್ದಾರೆ. ಬಜ್ಪೆ ಠಾಣೆಯ ಹಿಂದಿನ ಇನ್‌ಸ್ಪೆಕ್ಟರ್ ಟಿ.ಡಿ. ನಾಗರಾಜ್ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಸರಕಾರದ ಪರವಾಗಿ ವೆಂಕಟರಮಣ ಸ್ವಾಮಿ ಸಿ. ವಾದಿಸಿದ್ದರು.

ಡಿಎನ್‌ಎ ಪ್ರಮುಖ ಸಾಕ್ಷಿ

ಅಪ್ರಾಪ್ತ ಬಾಲಕಿಯ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ನೊಂದ ಪೋಷಕರು, ನೆರೆಹೊರೆಯವರು ಸೇರಿದಂತೆ 19 ಮಂದಿಯನ್ನು ಸಾಕ್ಷಿಯಾಗಿ ಪರಿಗಣಿಸಿ ವಿಚಾರಣೆ ನಡೆಸಲಾಯಿತು. ಆದರೆ ಬಾಲಕಿ, ಪೋಷಕರು, ನೆರೆಹೊರೆಯವರ ಅಂತಿಮ ಕ್ಷಣದಲ್ಲಿ ಸರಿಯಾದ ಸಾಕ್ಷ್ಯ ಹೇಳುವಲ್ಲಿ ವಿಫಲರಾದರು. ವೈದ್ಯರು, ತನಿಖಾಧಿಕಾರಿ ಹೇಳಿಕೆಗಳು ಹಾಗೂ ಡಿಎನ್‌ಎ ವರದಿ ಆರೋಪಿಗೆ ಶಿಕ್ಷೆಯಾಗುವಲ್ಲಿ ಬಲವಾದ ಸಾಕ್ಷಿಯಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News