ಕರ್ನಾಟಕ: ಐಸಿಐಸಿಐ ಬ್ಯಾಂಕ್ ನಿಂದ 13,700 ಕೋಟಿ ರೂ. ಸಾಲ ವಿತರಣೆ ಗುರಿ- ಅನೂಪ್ ಬಾಗ್ಚಿ

Update: 2019-08-22 14:17 GMT

ಮಂಗಳೂರು, ಆ. 22: ಐಸಿಐಸಿಐ ಬ್ಯಾಂಕು ಕರ್ನಾಟಕದಲ್ಲಿ ಪ್ರಸಕ್ತ ವಿತ್ತೀಯ ವರ್ಷದಲ್ಲಿ ಚಿಲ್ಲರೆ ಸಾಲ ವಿತರಣೆಯಲ್ಲಿ 13,700 ಕೋಟಿ ರೂ. ತಲುಪುವ ಗುರಿ ಹೊಂದಿದೆ ಎಂದು ಬ್ಯಾಂಕಿನ ಕಾರ್ಯ ನಿರ್ವಾಹಕ ನಿರ್ದೇಶಕ ಅನೂಪ್ ಬಾಗ್ಚಿ ಅವರು ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿಂದು ಈ ವಿಷಯ ತಿಳಿಸಿದ ಅವರು, ಈ ವರ್ಷ ರಾಜ್ಯದಲ್ಲಿ ಚಿಲ್ಲರೆ ಸಾಲದ ವಲಯಗಳಾದ ಗ್ರಾಹಕ ಸಾಲ, ಅಡಮಾನ ಸಾಲ ಮತ್ತು ಕೃಷಿ ಸಂಬಂಧಿ ಸಾಲಗಳು ಕ್ಷಿಪ್ರ ಗತಿಯಲ್ಲಿ ಪ್ರಗತಿಯಾಗುವ ನಿರೀಕ್ಷೆ ಇದೆ ಎಂದು ಹೇಳಿದರು.

ಗ್ರಾಹಕ ಸಾಲ ವಿತರಣೆಯಲ್ಲಿ ವೈಯಕ್ತಿಕ ಮತ್ತು ವಾಹನ ಸಾಲ 5100 ಕೋಟಿ ರೂ. (ಶೇ. 33 ರಷ್ಟು ಹೆಚ್ಚಳ), ಅಡಮಾನ ಸಾಲ 5300 ಕೋಟಿ ರೂ. (ಶೇ. 30 ರಷ್ಟು ವೃದ್ಧಿ), ಕೃಷಿ ಸಾಲ 3300 ಕೋಟಿ ರೂ. (ಶೇ. 28 ರಷ್ಟು ಪ್ರಗತಿ) ವಿತರಿಸುವ ಗುರಿ ಹೊಂದಲಾಗಿದೆ ಎಂದರು.

ಕೈಗೆಟಕುವ ಬಡ್ಡಿ ದರದಲ್ಲಿ ಗೃಹ ನಿರ್ಮಾಣ ಸಾಲ ವಿತರಿಸಲು ಬ್ಯಾಂಕು ಗಮನ ಹರಿಸಿದೆ. ಇನ್‌ಸ್ಟಾ ಗೃಹ ಸಾಲವನ್ನು ಇನ್ನಷ್ಟು ಹೆಚ್ಚಿಸಿ, ಟಾಪ್ ಅಪ್ ಸಾಲವನ್ನೂ ಹೆಚ್ಚಿಸಲಾಗುವುದು. ಬ್ಯಾಂಕಿಂಗ್ ಉದ್ಯಮದಲ್ಲಿಯೇ ಮೊದಲ ಬಾರಿಗೆ ಇತ್ತೀಚೆಗೆ 1 ಕೋಟಿ ರೂ. ವರೆಗಿನ ಗೃಹ ಸಾಲಕ್ಕೆ ತತ್‌ಕ್ಷಣವೇ ಅನುಮೋದನೆ ನೀಡುವ ವ್ಯವಸ್ಥೆಯನ್ನು ಆರಂಭಿಸಲಾಗಿದೆ ಎಂದರು.

ಕರ್ನಾಟಕದಲ್ಲಿ ಐಸಿಐಸಿಐ ಬ್ಯಾಂಕಿನ 294 ಶಾಖೆಗಳಿದ್ದು, 1283 ಎಟಿಎಂಗಳಿವೆ. 39,700ಕ್ಕೂ ಅಧಿಕ ಸ್ವ- ಸಹಾಯ ಗುಂಪುಗಳಿಗೆ ಒಟ್ಟು 965 ಕೋಟಿ ರೂ. ಸಾಲ ವಿತರಿಸಿದ್ದು, ಇದರಿಂದ ರಾಜ್ಯದ 5 ಲಕ್ಷ ಮಹಿಳೆಯರು ಪ್ರಯೋಜನ ಪಡೆದಿದ್ದಾರೆ. 2020ರ ವರ್ಷಾಂತ್ಯಕ್ಕೆ 50,000 ಸ್ವ- ಸಹಾಯ ಸಂಘಗಳಿಗೆ 1100 ಕೋಟಿ ರೂ. ಸಾಲ ನೀಡಿ 6 ಲಕ್ಷ ಮಹಿಳೆಯರಿಗೆ ಪ್ರಯೋಜನ ಒದಗಿಸಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.

ರಾಜ್ಯದ ಸೌಲಭ್ಯವಂಚಿತ ಯುವಕರಿಗಾಗಿ ಐಸಿಐಸಿಐ ಅಕಾಡೆಮಿ ಫಾರ್ ಸ್ಕಿಲ್ಸ್ ಯೋಜನೆಯಡಿ ಬ್ಯಾಂಕು ಬೆಂಗಳೂರು ಮತ್ತು ಮೈಸೂರಿನಲ್ಲಿರುವ 2 ಕೇಂದ್ರಗಳ ಮೂಲಕ 8000 ಕ್ಕೂ ಮಿಕ್ಕಿ ಯುವಕರಿಗೆ ಉಚಿತ ತರಬೇತಿ ನೀಡಿದೆ. 2020 ನೇ ವರ್ಷದೊಳಗೆ 8500 ಯುವಕರಿಗೆ ತರಬೇತಿ ನೀಡಲು ಉದ್ದೇಶಿಸಲಾಗಿದೆ ಎಂದರು.

ಐಸಿಐಸಿಐ ಬ್ಯಾಂಕು ಮತ್ತು ಮಣಿಪಾಲ್ ಗ್ಲೋಬಲ್ ಎಜ್ಯುಕೇಶನ್ ಸರ್ವೀಸಸ್‌ನ ಜಂಟಿ ಸಹಭಾಗಿತ್ವದಲ್ಲಿ ಹುಟ್ಟು ಹಾಕಿರುವ ಐಸಿಐಸಿಐ ಮಣಿಪಾಲ ಅಕಾಡೆಮಿ ಫಾರ್ ಬ್ಯಾಂಕಿಂಗ್ ಆ್ಯಂಡ್ ಇನ್ಶೂರೆನ್ಸ್ ಸಂಸ್ಥೆಯು ಪ್ರೊಬೇಶನರಿ ಅಧಿಕಾರಿಗಳನ್ನು ಸೃಷ್ಟಿಸಿ ಪ್ರತಿಭಾವಂತ ಹಾಗೂ ಸಮರ್ಥ ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸಿ ಕೊಡುತ್ತದೆ ಎಂದು ವಿವರಿಸಿದರು.

ಗೋಷ್ಠಿಯಲ್ಲಿ ಸುಜಿತ್ ಗಂಗುಲಿ, ಅತುಲ್ ಜೈನ್, ಸಾಹಿಲ್ ತನೇಜಾ, ಕೌಶಿಕ್ ದತ್ತಾ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News